ಮನೆ ಸ್ಥಳೀಯ ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಕಂದಾಚಾರ, ಮೌಢ್ಯವನ್ನು ಹೋಗಲಾಡಿಸಲು ಮುಂದಾದ ಕನಕದಾಸರು: ಕೆ. ಹರೀಶ್ ಗೌಡ

ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಕಂದಾಚಾರ, ಮೌಢ್ಯವನ್ನು ಹೋಗಲಾಡಿಸಲು ಮುಂದಾದ ಕನಕದಾಸರು: ಕೆ. ಹರೀಶ್ ಗೌಡ

0

ಮೈಸೂರು: ದಾಸಶ್ರೇಷ್ಠ ಸಂತಕವಿ ಶ್ರೀ ಕನಕದಾಸರು  ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಕಂದಾಚಾರ, ಮೌಢ್ಯವನ್ನು ಹೋಗಲಾಡಿಸಲು ಮುಂದಾಗಿದ್ದರು. ಅಂತಹ ಮಹಾನ್ ವ್ಯಕ್ತಿಯ ಕೀರ್ತನೆಗಳು ಇಡೀ ದೇಶಕ್ಕೆ ಮಾದರಿ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ಅವರು ಹೇಳಿದರು.

Join Our Whatsapp Group

ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂತ ಶ್ರೀ ಕನಕದಾಸರ ಜಯಂತೋತ್ಸವ ಸಮಿತಿ(ರಿ) ಮೈಸೂರು ಇವರ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ, ದಾಸಶ್ರೇಷ್ಠ ಸಂತ ಕವಿ ಶ್ರೀ ಕನಕದಾಸರ 537 ನೇ ಜಯಂತಿ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ಉತ್ತಮ ಕುಟುಂಬದಲ್ಲಿ ಜನಿಸಿದಂತಹ ಕನಕದಾಸರು ಸಮಾಜದಲ್ಲಿರುವ ತಾರತಮ್ಯ ಹಾಗೂ ಮೌಢ್ಯತೆಗಳನ್ನು ತಿಳಿದು, ತಮ್ಮ ಸಿರಿತನವನ್ನು ತ್ಯಜಿಸಿ ಬಡವರಿಗಾಗಿ ಬಂದವರು ಕನಕದಾಸರು ಎಂದರು.

ಕನಕದಾಸರ ಪ್ರಸಿದ್ಧ ಕೀರ್ತನೆಯಾದ ಕುಲ-ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲವನ್ನೇನಾದರೂ ಬಲ್ಲಿರಾ, ಇದು ಇಂದಿಗೂ ಪ್ರಸ್ತುತವಾದ ಮಾತಾಗಿದೆ. ಜನರಲ್ಲಿದ್ದಂತಹ ಭೇದದ ಮನೋಭಾವ, ಶ್ರೇಷ್ಠತೆಯ ಮನೋಭಾವವನ್ನು ಹೋಗಲಾಡಿಸಿ ಎಲ್ಲರೂ ಒಂದೇ ಎಂಬುದನ್ನು ಸಾರಿದಂತಹ ದಾಸ ಶ್ರೇಷ್ಠರು ಎಂದು ಹೇಳಿದರು. ಕನಕದಾಸರ ಕೀರ್ತನೆಯಲ್ಲಿರುವ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿದ ದಾರಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕು ಎಂದು ಹೇಳಿದರು.

ಕನಕದಾಸರ ಹಾದಿಯಲ್ಲಿಯೇ ಇಂದು ಸರ್ಕಾರವು ಯಾವುದೇ ಜಾತಿ-ಧರ್ಮವನ್ನು ನೋಡದೆ, ರಾಜ್ಯದಲ್ಲಿರುವ ಪ್ರತಿಯೊಬ್ಬರಿಗೂ ಸೌಕರ್ಯವನ್ನು ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಧಕ್ಷತೆ ಹಾಗೂ ಪ್ರಾಮಾಣಿಕವಾಗಿ ಆಡಳಿತ ಮಾಡುತ್ತಿದ್ದಾರೆ. ಯಾವುದೇ ಸಮಾಜದ ಜನರಿಗೆ ತೊಂದರೆಯಾಗದಂತೆ ಎಲ್ಲಾ ಪರ ನಿಂತು, ಕೆಲಸ ಮಾಡುತ್ತಿದ್ದಾರೆ. ಶ್ರದ್ದೆ ಭಕ್ತಿಯಿಂದ ಕನಕದಾಸರು ಶ್ರೀ ಕೃಷ್ಣನ ದರ್ಶನ ಪಡೆದಂತೆ, ಸಿದ್ದರಾಮಯ್ಯ ಅವರ ದಕ್ಷ ಹಾಗೂ ಪ್ರಾಮಾಣಿಕ ಆಡಳಿತದಿಂದ ರಾಜ್ಯವನ್ನು ದೇಶದಲ್ಲಿಯೇ ಉತ್ತಮ ಸ್ಥಾನಕ್ಕೆ ಕೊಂಡೋಯ್ದು ಇಡೀ ರಾಷ್ಟ್ರವೇ ಕರ್ನಾಟಕವನ್ನು ತಿರುಗಿ ನೋಡುವಂತೆ ಮಾಡುತ್ತಾರೆ ಎಂದರು.

ಸಂತ ಶ್ರೀ ಕನಕದಾಸ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾದ ಎಂ. ಕೆ. ಸೋಮಶೇಖರ್ ಅವರು ಮಾತನಾಡಿ, ಕಳೆದ 40 ವರ್ಷಗಳಿಂದ ಕನಕದಾಸ ಜಯಂತ್ಯೋತ್ಸವ ಸಮಿತಿ ವತಿಯಿಂದ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, 2008 ರಲ್ಲಿ ಸರ್ಕಾರವು ಜಿಲ್ಲಾಡಳಿತದೊಂದಿಗೆ ಆಚರಿಸಲು ಅನುಮತಿ ನೀಡಿತು. ಅಂದಿನಿಂದ ಸರ್ಕಾರದ ವತಿಯಿಂದ ಅಚ್ಚುಕಟ್ಟಾಗಿ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕನಕದಾಸರು ಮೇಲ್ಪಂತೀಯ ದಾಸ ಶ್ರೇಷ್ಠರಲ್ಲಿ ಒಬ್ಬರು. ಸಮಾಜದಲ್ಲಿರುವ ಅಂಕು-ಡೊಂಕು, ತಾರತಮ್ಯವನ್ನು ಖಂಡಿಸಿ, ತಮಗಿದ್ದ ಸಿರಿತನದ ವೈಭವವನ್ನು ತ್ಯಜಿಸಿ ಜನರ ಕಷ್ಟಕ್ಕೆ ಸ್ಪಂದಿಸಲು ಮುಂಡದವರು ಸಂತ ಶ್ರೇಷ್ಠರಾದ ಕನಕದಾಸರು. ಮೇಲು ಕೀಳೆಂಬುದರಲ್ಲಿ ಯಾವುದೇ ಹುರುಳಿಲ್ಲ ಎಂದು ಸಮಾಜಕ್ಕೆ ತೋರಿಸಿದ ಮಹಾನ್ ವ್ಯಕ್ತಿ ಕನಕದಾಸರು ಎಂದರು.

ಕುಲ-ಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲವನ್ನೇನಾದರೂ ಬಲ್ಲಿರಾ ಎಂಬ ಮಾತಿನ ಮೂಲಕ ಯಾವುದೇ ಕುಲವಿಲ್ಲ ಎಂದು ಹೇಳಿರುವ ಕನಕದಾಸರು ಇಡೀ ದೇಶಕ್ಕೆ ಮಾದರಿ. ಡಾ. ಬಿ ಆರ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಇಂದು ಜಾತಿ ತಾರತಮ್ಯ  ಕಾಲ ಕ್ರಮೇಣ ಕಡಿಮೆಯಾಗುತ್ತಿದೆಯಾದರೂ, ಗ್ರಾಮೀಣ ಭಾಗಗಳಲ್ಲಿ ಇನ್ನೂ ನೆಲೆಯೂರಿದೆ. ಈ ಜಾತಿ ಧರ್ಮದ ತಾರತಮ್ಯ ಬುಡಸಮೇತವಾಗಿ ನಿರ್ಮೂಲನೆಯಾಗಬೇಕು ಎಂದು ಹೇಳಿದರು.

ಕನಕದಾಸರು ಮೌಢ್ಯಗಳ ವಿರುದ್ಧ ಹೋರಾಡಿ, ಸಮ ಸಮಾಜವನ್ನು ನಿರ್ಮಿಸಲು ಮುಂದಾದವರು. ಪ್ರಪಂಚದಲ್ಲಿರುವ ಯಾವುದೇ ವ್ಯಕ್ತಿಯು ತನ್ನಿಚ್ಛೆಯ ಕ್ಷೇತ್ರದಲ್ಲಿ ಸಾಧನೆ ಮಾಡಬಹುದಾಗಿದೆ. ಇದಕ್ಕೆ ಯಾವುದೇ ಜಾತಿ-ಧರ್ಮದ ಅವಶ್ಯಕತೆ ಇಲ್ಲ ಎಂದು ಸಾರಿದಂತಹವರು ಕನಕದಾಸರು. ಸಮಾಜಕ್ಕೆ ಕನಕದಾಸರಂತೆಯೇ ಮಹನೀಯರು  ಸಮಾಜಕ್ಕೆ ಹಲವಾರು ರೂಪು ರೇಷುಗಳನ್ನು ನೀಡಿದ್ದಾರೆ ಅವುಗಳನ್ನು ಅನುಸರಿಕೊಂಡು ನಡೆದರೆ ಅದೇ ನಾವು ಅವರಿಗೆ ನೀಡುವ ಗೌರವ ಎಂದರು.

ಕನಕದಾಸರ ಮಾರ್ಗದರ್ಶನದಂತೆ ಇಂದು ಸರ್ಕಾರವು ಸಮಾಜದಲ್ಲಿ ಸಮಾನತೆ ತರಲು ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಾಗಿರದೆ ಎಲ್ಲಾ ಸಮಾಜದವರಿಗೂ ತಲುಪುವಂತೆ, ಉಪಯೋಗವಾಗುವಂತೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅಂದು ದೇವರಾಜ ಅರಸು ಅವರು ಹಿಂದುಳಿದವರಿಗೆ ಸೌಕರ್ಯ ನೀಡಿದಂತೆ, ಇಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರ ಪರ ನಿಂತು ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಕನಕದಾಸರು, ಅಂಬೇಡ್ಕರ್ ಅವರು, ಬಸವಣ್ಣನವರು ಹಾಗೂ ಬುದ್ಧ ಅವರಂತೆ ಬಡವರ ಪರ ಹಾಗೂ ಎಲ್ಲರೂ ಆರ್ಥಿಕವಾಗಿ ಸಾಮಾಜಿಕವಾಗಿ ಸಮಾನರಾಗಬೇಕು ಎಂಬ ಆಶಯದಿಂದ ಸರ್ಕಾರವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ವಿಧಾನ ಪರಿಷತ್ ನ ಸದಸ್ಯರಾದ ಡಾ. ಡಿ. ತಿಮ್ಮಯ್ಯ ಅವರು ಮಾತನಾಡಿ, ಇಂದು ಕನಕದಾಸರ 537 ನೇ ಜಯಂತಿಯನ್ನು ಆಚರಿಸುತ್ತಿದ್ದೇವೆ. ಸುಮಾರು 500 ವರ್ಷಗಳಿಗಿಂತಲೂ ಹಿಂದೆ ಜನಿಸಿದಂತಹ ಕನಕದಾಸ ಎಂಬ ಮಹಾನ್ ವ್ಯಕ್ತಿಯು ತನ್ನೆಲ್ಲ ಸಿರಿತನವನ್ನು ಬಿಟ್ಟು ಬಡವರ ಕಷ್ಟವನ್ನು ಅರಿತು ಅವರಿಗೆ ಸ್ಪಂದಿಸಲು ಮುಂದಾದರು. ಇಂತಹ ವ್ಯಕ್ತಿಯ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದರು.

ಸುಮಾರು 316 ಕೀರ್ತನೆಗಳನ್ನು ರಚಿಸಿರುವ ಕನಕದಾಸರು ತಮ್ಮಲ್ಲಿರುವ ಶ್ರದ್ದೆ, ಭಕ್ತಿಯಿಂದ ಶ್ರೀ ಕೃಷ್ಣನ ದರ್ಶನವನ್ನು ಪಡೆದರು. ಇದಕ್ಕೆ ಸಾಕ್ಷಿಯಾಗಿ ಇಂದು ಉಡುಪಿಯಲ್ಲಿರುವ ಕನಕನ ಕಿಂಡಿಯನ್ನು  ಕಾಣಬಹುದಾಗಿದೆ. ಇದರಿಂದ ಕನಕದಾಸರ ಸಾಧನೆ, ಶಕ್ತಿಯು ತಿಳಿಯುತ್ತದೆ ಎಂದು ಹೇಳಿದರು.

ಯಾವುದೇ ವ್ಯಕ್ತಿಗೆ ಶಕ್ತಿ ಬರಬೇಕೆಂದರೆ ಸಾಧನೆ ಮುಖ್ಯವಾಗುತ್ತದೆ. ಸಾಧನೆ ಮಾಡಲು ಪರಿಶ್ರಮ ಮುಖ್ಯ. ತಮ್ಮನ್ನು ತಾವು ನಂಬಿ ಇತರರಿಗೆ ಕೇಡನ್ನು ಬಯಸದೆ ಉತ್ತಮ್ಮ ದಾರಿಯಲ್ಲಿ ತನ್ನ ಸಾಧನೆಯ ದಾರಿಯಲ್ಲಿ ನಡೆದರೆ ಅದಕ್ಕೆ ಒಳ್ಳೆಯ ಪ್ರತಿಫಲ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಇಂದು ಸರ್ಕಾರವು ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಾಗದೆ ರಾಜ್ಯದ ಎಲ್ಲಾ ಜನರಿಗೂ ಅನುಕೂಲವಾಗುವಂತೆ ಪಂಚ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇಂತಹ ಯೋಜನೆಗಳನ್ನು ಇಡೀ ದೇಶದಲ್ಲಿಯೇ ಕಾಣಲು ಸಾಧ್ಯವಿಲ್ಲ. ಜನರು ಇದನ್ನು ಅರಿತು ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಸಮ ಸಮಾಜವನ್ನು ನಿರ್ಮಿಸಲು ಮುಂದಾಗೋಣ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ಮಾತನಾಡಿ, ಯುಗಕ್ಕೋಬ್ಬ ಸಂತ, ಜನಕ್ಕೂಬ್ಬ ಭಕ್ತ, ಜಗಕ್ಕೋಬ್ಬ ಬುದ್ದಿವಂತ ಎಂಬ ಮಾತಿನಂತೆ  ಭಕ್ತ ಕನಕದಾಸರು ಇದ್ದರು. ಇಂತಹ ಮಹಾನ್ ವ್ಯಕ್ತಿಯ ಕೀರ್ತನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಅಂದು ಜನರು ಕೀರ್ತನೆಗಳನ್ನು ಅಪಾರ್ಥ ಮಾಡಿಕೊಂಡು ಅವುಗಳನ್ನು ಅನುಸರಿಸಲು ಹಿಂಜರಿದರು. ಇಂದು ಅದೇ ಪರಿಸ್ಥಿತಿ ಎದುರಾಗಿದೆ ಹಾಗಾಗಿ ಅವರ ಕೀರ್ತನೆಯಲ್ಲಿರುವ ಸತ್ಯಾಂಶವನ್ನು  ತಿಳಿದು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ್ದಂತಹ ಮೈಸೂರಿನ ಹಿರಿಯ ಸಾಹಿತಿಗಳಾದ ಪ್ರೊ.ಸಿ. ನಾಗಣ್ಣ ಅವರು ಮಾತನಾಡಿ, 1982 ನೇ ಇಸವಿಯಿಂದ ಕನಕದಾಸರ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದ್ದೆ. 2008 ರಿಂದ ಸರ್ಕಾರದಿಂದ ಅಧಿಕೃತವಾಗಿ ಪ್ರಾರಂಭವಾಗಿದ್ದು, ಇದು ಒಂದು ದೊಡ್ಡ ಮೈಲಿಗಲ್ಲಾಗಿದೆ ಎಂದು ಹೇಳಿದರು.

ಸಂತರು ಮೂಲತಃ ಲೋಕೋಪಕಾರಿಗಳು. ಲೋಕದ ಜನರು ಬಾಳಿ ಬದುಕಿ ಜನರಲ್ಲಿ ಶಾಂತಿ ನೆಮ್ಮದಿ ನೆಲಸಲೆಂದು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದಂತವರು ಸಂತರು. ಕನಕದಾಸರು ಶ್ರೇಷ್ಠ ಸಂತರ ಸಾಲಿನಲ್ಲಿ ವಿರಾಜಮಾನವಾಗಿ ಉಳಿಯುವಂತವರಾಗಿದ್ದು, ಅವರನ್ನು ನೆನೆಯುವುದರಿಂದ ಸಮಾಜದಲ್ಲಿ ಶಾಂತಿ -ಸಮಾನತೆ ನೆಲೆಸಿ, ಜನ ಮಾನಸದಲ್ಲಿ ನವ ಚೈತನ್ಯದ ಜಾಗೃತಿಯಾಗಲಿದೆ ಎಂದು ಹೇಳಿದರು.

ಕನಕದಾಸರು ಕಲಿ, ಕವಿ ಹಾಗೂ ಸಂತರು ಮೂರು ರೀತಿಯಲ್ಲಿ ಅವರು ಬದುಕಿ ತ್ರಿರಂಗದಲ್ಲಿ ಕಲಿಯಾಗಿ, ಕವಿಯಾಗಿ, ಸಂತರಾಗಿ ಲೋಕಕ್ಕೆ ಶ್ರೇಷ್ಠ ಮಾದರಿಯನ್ನು ಒದಗಿಸಿದ್ದಾರೆ. ನಾನಾ ಧರ್ಮಗಳನ್ನು ಹೊಂದಿರುವ ದೇಶ ನಮ್ಮದು ಹಿಂದುಸ್ತಾನದಲ್ಲಿ ಹಲವಾರು ಭಕ್ತಿ ಪಂಥಗಳನ್ನು ಕಾಣಬಹುದಾಗಿದೆ. ಸುಮಾರು 800 ವರ್ಷಗಳ ಹಿಂದೆ ಮಹನೀಯರು ಹಾಕಿಕೊಟ್ಟಂತಹ ಭಕ್ತಿ ಪಂಥಗಳು ಇಂದಿಗೂ ದೇಶದ ಮೂಲೆ ಮೂಲೆಯಲ್ಲಿ ನೆಲೆಸಿವೆ ಎಂದು ಹೇಳಿದರು.

ಕನಕದಾಸರಲ್ಲಿದ್ದಂತಹ ಕವಿತ್ವ ನಿಸರ್ಗ ಸಹಜ ಕವಿತ್ವ. 2000 ವರ್ಷಗಳ ಸುಧೀರ್ಘ ಇತಿಹಾಸವಿರುವ ಕನ್ನಡ ಸಾಹಿತ್ಯವನ್ನು ನೋಡಿದರೆ, ಕನಕದಾಸರಂತಹ ಕವಿ ಮತ್ತೊಬ್ಬರಿಲ್ಲ. ಸುಮಾರು 90 ವರ್ಷಗಳ ತಮ್ಮ ಜೀವಿತಾವಧಿಯ ವಸಂತ ಕಾಲದಲ್ಲಿ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.

14-15 ನೇ ಶತಮಾನದ ಸಂತಶ್ರೇಷ್ಠ ಕನಕದಾಸರಿಗೂ ಆಧುನಿಕ ಕಾಲದ ಕುವೆಂಪು ಅವರಿಗೂ ಅವಿನಾಭಾವ ಸಂಬಂಧವಿದ್ದು, ಇಬ್ಬರು ಕ್ರಾಂತಿಕಾರಿಗಳಾಗಿದ್ದರು. ಸಂಪೂರ್ಣ ವ್ಯಕ್ತಿತ್ವವನ್ನು ಹೊಂದಿದ್ದರು. ಇಂದು ಅವರ ಆದರ್ಶಗಳು ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿದೆ. ಅವುಗಳನ್ನು ಯುವ ಜನರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರಿನ ಶ್ರೀ ಕಾಗಿನೆಲೆ ಕನಕ ಗುರು ಪೀಠದ ಶ್ರೀ. ಶಿವಾನಂದ ಪುರಿ ಸ್ವಾಮೀಜಿ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ,ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಜಿಲ್ಲಾಧಿಕಾರಿಗಾಳಾದ ಜಿ. ಲಕ್ಷ್ಮೀ ಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಕೆ. ಎಂ. ಗಾಯತ್ರಿ ಸೇರಿದಂತೆ ಸಂತ ಶ್ರೀ ಕನಕದಾಸರ ಜಯಂತ್ಯೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸಂಘ -ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.