ಅಮರಾವತಿ: ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ತುಪ್ಪ ಖರೀದಿಗೆ ಇದ್ದ ನಿಯಮಗಳ ಬದಲಾವಣೆ ಸೇರಿದಂತೆ ಅಕ್ರಮಗಳ ತನಿಖೆಗಾಗಿ ಒಂಬತ್ತು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ನೇಮಕ ಮಾಡಿದೆ.
ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ಪಾವಿತ್ರ್ಯತೆಯನ್ನು ಕಾಪಾಡುವ ತನ್ನ ಬದ್ಧತೆಗೆ ಅನುಗುಣವಾಗಿ ಆಂಧ್ರಪ್ರದೇಶ ಸರ್ಕಾರವು ಲಾಡು ವಿವಾದಕ್ಕೆ ಸಂಬಂಧಿಸಿ ಸಮಗ್ರ ತನಿಖೆ ನಡೆಸಲು ಎಸ್‌ಐಟಿಯನ್ನು ರಚಿಸಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ನೀರಭ್ ಕುಮಾರ್ ಪ್ರಸಾದ್ ಗುರುವಾರ ತಡರಾತ್ರಿ ಆದೇಶ ಹೊರಡಿಸಿದ್ದಾರೆ.
ಗುಂಟೂರು ವ್ಯಾಪ್ತಿಯ ಪೊಲೀಸ್ ಮಹಾನಿರ್ದೇಶಕ (ಐಜಿಪಿ) ಸರ್ವಶ್ರೇಷ್ಠ ತ್ರಿಪಾಠಿ ಅವರು ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿದ್ದಾರೆ.
ಹಿಂದಿನ ವೈಎಸ್‌ಆರ್‌ಸಿಪಿ ನೇತೃತ್ವದ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ತುಪ್ಪ ಖರೀದಿಗೆ ಇದ್ದ ಹಲವು ನಿಯಮಗಳನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ಬದಲಿಸಲಾಗಿದೆ ಎಂದು ಈಚೆಗೆ ಚಂದ್ರಬಾಬು ನಾಯ್ಡು ಅವರು ಆರೋಪಿಸಿದ್ದರು.
ತಿರುಪತಿಯ ಲಾಡು ತಯಾರಿಸುವಾಗ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬುದು ಬಹಿರಂಗವಾದ ನಂತರ ಕೋಟ್ಯಂತರ ಮಂದಿ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹೇಳಿದ್ದರು. ನಾಯ್ಡು ಆರೋಪ ದೇಶದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.