ಪೌರಾಣಿಕವಾಗಿ ಮಾಡಾಯಿಕಾವ್ ಗೆ ದೇವಿ ಭದ್ರಕಾಳಿಯು ಆಗಮಿಸಿ ನೆಲೆಯೂರಿದ ಬಗ್ಗೆ ಎರಡು ಉಲ್ಲೇಖನಗಳಿವೆ.
ಮಹಾದೇವನ ಅಣತಿಯಂತೆ ಕೋಡಂಗಲ್ಲೂರಿನಲ್ಲಿ ನೆಲೆಯೂರಿದ ಕಾಳಿಯು ವೈದಿಕ ಆರಾಧನೆ ಇಷ್ಟಪಡಲಿಲ್ಲ. ಆಕೆ ಪರಶಿವನಲ್ಲಿ ವಿಷಯ ತಿಳಿಸಿದಳು. ಮಹಾದೇವನು ಪರಶುರಾಮರೊಡನೆ ಕಾಳಿಗೆ ಶಾಕ್ತೇಯ ಆರಾಧನೆ ವ್ಯವಸ್ಥೆ ಕೈಗೊಳ್ಳಲು ತಿಳಿಸಿದನು. ಭಗವಾನ್ ಪರಶುರಾಮದಲ್ಲಿ ಕಾಳಿಯ ಅಸುರಿ ಶಕ್ತಿಯನ್ನು ಹಾಗೂ ಆಕೆ ಅಸುರೀ ಗಣಗಳನ್ನೂ ಆವಾಹಿಸಿ ಕೊಡಂಗಲ್ಲೂರು ಪ್ರವೇಶದಿಂದ ಉತ್ತರ ಅಭಿಮುಖವಾಗಿ ಎಸೆದರು. ಅತಿ ಭಯಂಕರ ಶಬ್ದದೊಡನೆ ವೇಗವಾಗಿ ಬರುವ ಶಂಖವು ಒಂದೆಡೆ ಕೆಳಮುಖವಾಗಿ ಇಳಿಯುತ್ತಿರುವಾಗ ಸಮುದ್ರರಾಜನು ಹಿಂದಕ್ಕೆ ಸರಿದು ಸ್ಥಳವನ್ನೊದಗಿಸಿದನು. ಸಮುದ್ರ ನೀಗಿದ ಸ್ಥಳವು ಬರೀ ಕೆಂಗಲ್ಲು ಪಾರೆಯಾಗಿತ್ತು. ಓಂಕಾರ ಶಬ್ದದೊಡನೆ ಆ ಪ್ರದೇಶದಲ್ಲಿ ಬಿದ್ದ ಶಂಖವು ಅನಂತರ ಉರುಳಿರುಳಿ ಉತ್ತರದ ಏಳಿಮಲೆ ಸಮೀಪದ ಹೊಳೆಯಲ್ಲಿ ಹೋಗಿ ಕೆಸರಲ್ಲಿ ಮುಳುಗಿತು.
ಪರಶುರಾಮರೆಸೆಗಿದ ಶಂಖವು ಕೆಳಗೆ ಬೀಳುವಾಗ ಭೂಮಿಯಿಡೀ ನಡುಗಿತೆಂದೂ ಕಡಲತೀರದಲ್ಲಿದ್ದ ದಟ್ಟಾರಣ್ಯದ ಬೃಹತ್ ಮರಗಳೆಲ್ಲವೂ ಕಂಪಿಸಿದವೆಂದೂ ಇದರಿಂದಾಗಿ ಶಂಕುವು ಬಿದ್ದ ಸ್ಥಳಕ್ಕೆ “ತಿರುವಾರ್ ಕಾಟ್” (ಕಂಪಿಸಿದ ಕಾಡು) ಎಂದು ಹೆಸರಾಯಿತೆಂದೂ ಭಗವತಿಯ ತೋತ್ತಂಪಾಟುಗಳಲ್ಲಿ ಹೇಳಲ್ಪಟ್ಟಿದೆ. ತಮಿಳು ಭಾಷೆಯಲ್ಲಿ ಶಿವನಿಗೆ ʼತಿರುವರ್ʼ ಎಂದು ಹೆಸರಿದೆ. ಶ್ರೀ ಶಿವನು ನೆಲೆಸಿದ ಕಾಡೇ ತಿರುವಾರ್ ಕಾಟ್ ಆಯಿತೆಂದೂ ಹೇಳಿಕೆಯಿದೆ. ಅದೇ ರೀತಿ ಶಂಖದಿಂದ ಹೊರಬಂದ ಕಾಳಿಗೆ ಮತ್ತು ಷಟ್ ಕನ್ನಿಕೆಯರಿಗೆ ನೆಲೆಯೂರಲು ತಾನು ನೀಗಿ ಒದಗಿಸಿದ ಪಾರೇ ಪ್ರದೇಶದಲ್ಲಿ ಮಾಡು (ಸೂರ)ನ್ನು ನಿರ್ಮಿಸಿ ಒದಗಿಸಿದನೆಂದೂ ಆ ಸ್ಥಳದ ಮೂರು ಭಾಗಗಳಲ್ಲಿ ಭಯಂಕರವಾದ ಕಾಡು ಇದ್ದಿದ್ದರಿಂದ ಸಮುದ್ರರಾಜನು ಮಾಡು ನಿರ್ಮಿಸಿದ ಆ ಸ್ಥಳವು ʼಮಾಡಾಯಿಕಾವ್ʼ ಎಂದಾಯಿತೆಂದೂ ಹೇಳಲಾಗುತ್ತದೆ. ಕಡಲು ನೀಗಿ ಮೇಲೆ ಬರುವ ಭೂಪ್ರದೇಶಕ್ಕೆ ಮಲೆಯಾಳ ಭಾಷೆಯಲ್ಲಿ ʼಮಾಡ್ʼ ಎನ್ನಲಾಗುತ್ತದೆ. ಹೀಗೆ ಮಾಡ್ ಆದ ಸ್ಥಳಕ್ಕೆ ʼಮಾಡಾಯಿಕಾವ್ʼ ಎಂದು ಹೆಸರಾಯಿತೆಂದೂ ಇನ್ನೊಂದು ಹೇಳಿಕೆ ಇದೆ.
ಕಣ್ಣೂರು ತಾಲೂಕಿನ ತಳಿಪರಂಬದಲ್ಲಿರುವ ಶ್ರೀ ರಾಜರಾಜೇಶ್ವರ ಕ್ಷೇತ್ರದ ಶಿವಲಿಂಗವು ತ್ರೇತಾಯುಗದಲ್ಲಿ ಋಷಿಗಳಿಂದ ಪ್ರತಿಷ್ಠಾಪಿಸಿದ್ದರೆಂದು ಹೇಳಲಾಗುತ್ತದೆ. ಕೈಲಾಸದಿಂದ ಭೂಮಿಗಿಳಿದ ಭದ್ರಕಾಳಿಯು ಅಲ್ಲಿ ನೆರೆಯೂರಿದಳೆಂದು ಅಲ್ಲಿ ಅವಳಿಗೆ ಶಾಕ್ತೇಯ ಆರಾಧನೆಯು ಸಿಗದಿದ್ದಾಗ ಪರಶಿವನಲ್ಲಿ ದೂರಿಕೊಂಡಳು. ಶಿವ ಮಹಾದೇವನು ಪರಶುರಾಮ ಋಷಿಗೆ ತಿಳಿಸಿದಂತೆ ಋಷಿಯು ಭದ್ರಕಾಳಿಯನ್ನು ಶಂಖದಲ್ಲಿ ಆವಾಹಿಸಿ ಮಾಡಾಯಿಕಾವ್ ಗೆ ಕಳುಹಿಸಿದನೆಂದು ಹೇಳಿಕೆ ಇದೆ. ಇದಕ್ಕೆ ಪೂರಕವಾಗಿ ತಳಿಪರಂಬ ಕ್ಷೇತ್ರದಲ್ಲಿ ಕೆಲವು ಕುರುಹುಗಳು ಕಾಣಬಹುದಾಗಿದೆ. ಶ್ರೀ ಕ್ಷೇತ್ರದ ಹಿಂಭಾಗದಲ್ಲಿ “ಶ್ರೀ ಮಾಡಾಯಿಕಾವಿಲಮ್ಮ”ಎಂಬ ಶಿಲಾಪ್ರತಿಷ್ಠೆಯ ಸಂಕಲ್ಪವಿದ್ದು, ಇಲ್ಲಿ ನಿತ್ಯವೂ ಸಂಧ್ಯೆಗೆ ದೀಪ ವಿಡಲಾಗುತ್ತದೆ.
ತಿರುವರ್ ಕಾಟ್ ಮಾಡಾಯಿ ಪ್ರದೇಶವು ಕೊಲತ್ತಿರಿ ರಾಜನಾದ ಉದಯವರ್ಮ ರಾಜನ ಆಡಳಿತದಲ್ಲಿತ್ತು. ಮಹಾಕಾಳಿಯು ಆ ಪ್ರದೇಶದಲ್ಲಿ ನೆಲೆಯೂರಿದಾಗ ಉಂಟಾದ ಹಲವಾರು ಘಟನೆಗಳಿಂದಾಗಿ ಆತನು ಆ ಸ್ಥಾನ ಜ್ಯೋತಿಷ್ಯನನ್ನು ಕರೆಸಿ ಚಿಂತಿಸಿದನು. ಜ್ಯೋತಿಷ್ಯದಲ್ಲಿ ಕಂಡುಬಂದಂತೆ ರಾಜನು ಸೀಮಾ ತಂತ್ರಿಗಳನ್ನ ಕರೆಸಿ, ಶಂಖವು ಬಿದ್ದು ಭಗವತಿಯು ನೆಲೆಯಾದ ಸ್ಥಳದಲ್ಲಿಯೇ ಭಗವತಿಗೂ ಷಟ್ ಕನ್ನಿಕೆಯರಿಗೂ ಪರಿವಾರ ಗಣಗಳಿಗೂ ಅಲ್ಲದೆ ಮಹಾದೇವನಿಗೂ ಪ್ರತ್ಯೇಕವಾದ ಗುಡಿಯನ್ನು ಒಂದೇ ಸಮಯದೊಳಗೆ ನಿರ್ಮಿಸಿ ಆರಾಧನೆಯ ಸಕಲವ್ಯವಸ್ಥೆಯನ್ನು ಏರ್ಪಡಿಸಿದರು.
ಹೀಗಿರುವಾಗ ರಾಕ್ಷಸ ವೀರನಾದ ಚಂಡ-ಮುಂಡರನ್ನು ನಿಗ್ರಹಿಸಿದ ಚಾಮುಂಡಿಯು ಮಾಡಾಯಿಕಾವ್ ಭಗವತಿಯ ಸನ್ನಿಹದಲ್ಲಿ ನೆರೆಯೂರಲು ತೀರ್ಮಾನಿಸಿದಳು. ಆಕೆಯೂ ಸಾಮಾನ್ಯ ಸ್ತ್ರೀಯಾಗಿ ರಾಜನಲ್ಲಿಗಾಗಮಿಸಿ ನೆಲೆಯೂರಲು ಸ್ಥಳವನ್ನು ಕೇಳಿದಳು. ಆದರೆ ರಾಜನು ಸ್ತ್ರೀಯೊಬ್ಬಳಿಗೆ ತನ್ನ ಸ್ಥಳವನ್ನು ನೀಡಲು ನಿರಾಕರಿಸಿದನು. ಆಗ ಚಾಮುಂಡಿ ಸ್ತ್ರೀಯು ಕ್ರೋಧಳಾಗಿ ಅರಮನೆಯಿಂದ ಹೊರಟು ಹೋದಳು. ಚಾಮುಂಡಿಯ ಕೋಪದಿಂದ ಕೋಲತ್ತಿರಿ ರಾಜವಂಶದಳಿವಾದೀತೆಂದೂ ಗ್ರಹಿಸಿದ ಭಗವತಿಯು ಆಕೆಯನ್ನು ಸಮೀಪಿಸಿ ಸಮಾಧಾನಪಡಿಸಿದಳೆಂದೂ ಮಾತ್ರವಲ್ಲ, ರಾಜನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ಚಾಮುಂಡಿಯನ್ನು ಆರಾಧಿಸಬೇಕೆಂದು ಕೋಲತ್ತಿರಿ ರಾಜರುಗಳಿಗೆ ಜನಿಸುವ ಪ್ರಥಮ ಹೆಣ್ಣು ಶಿಶುವಿಗೆ ʼಚಾಮುಂಡʼ ಎಂದು ಹೆಸರಿಡಬೇಕೆಂದು ಅರುಹಿದಳು. ಅದರಂತೆ ಕೋಲತ್ತಿರಿ ರಾಜನು ಮಾಡಾಯಿ ಪ್ರದೇಶದ ಪರಿಸರದಲ್ಲಿ ಚಾಮುಂಡಿ ತೆಯ್ಯಂವನ್ನು ಕಟ್ಟಿ ಆಡಿಸುವ ವ್ಯವಸ್ಥೆ ಮಾಡಿದನು. ಇಂದಿಗೂ ರಾಜವಂಶದಲ್ಲಿ ಜನಿಸುವ ಚೊಚ್ಚಲ ಹೆಣ್ಣುಕೂಸಿಗೆ ʼಚಾಮುಂಡʼ ಎಂದು ಹೆಸರಿಡುವುದೂ ರೂಢಿಯಾಗಿ ಬಂದಿದೆ