ಮನೆ ರಾಜಕೀಯ ರಾಜ್ಯ ಸರ್ಕಾರ ಹಿಂದೂಗಳನ್ನು ಯಾವ ಸ್ಥಿತಿಗೆ ತಳ್ಳಿರಬಹುದು – ಬಿ.ವೈ.ವಿಜಯೇಂದ್ರ

ರಾಜ್ಯ ಸರ್ಕಾರ ಹಿಂದೂಗಳನ್ನು ಯಾವ ಸ್ಥಿತಿಗೆ ತಳ್ಳಿರಬಹುದು – ಬಿ.ವೈ.ವಿಜಯೇಂದ್ರ

0

ಬೆಂಗಳೂರು : ಬಿಜೆಪಿ ಯಾವತ್ತೂ ಹಿಂದುತ್ವದ ಪರ ಇರುವ ರಾಜಕೀಯ ಪಕ್ಷ. ಹಿಂದೂಗಳ ಮೇಲೆ ದಬ್ಬಾಳಿಕೆ ಎಲ್ಲಿ ಆಗುತ್ತೋ ಅದರ ವಿರುದ್ಧ ನಾವು ಅಲ್ಲಿರ್ತೇವೆ. ಆದರೆ ರಾಜ್ಯ ಸರ್ಕಾರ ಹಿಂದೂಗಳನ್ನು ಯಾವ ಸ್ಥಿತಿಗೆ ತಳ್ಳಿರಬಹುದು? ಯೋಚಿಸಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆತಂಕ ವ್ಯಕ್ತಪಡಿಸಿದರು.

ಮದ್ದೂರಿನಲ್ಲಿ ಗಣೇಶಮೂರ್ತಿ ವಿಸರ್ಜನೆ ವೇಳೆ ಅನ್ಯ ಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದ ಬಳಿಕ ಉಂಟಾದ ಉದ್ವಿಗ್ನತೆ ಕುರಿತು ಅವರು ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ನಾಯಕರ ಜೊತೆ ಮದ್ದೂರು ಭೇಟಿ ಕೊಡ್ತಿದ್ದೇವೆ. ಅಲ್ಲಿಯ ಪರಿಸ್ಥಿತಿ ಸತ್ಯಾಸತ್ಯತೆ ತಿಳಿದುಕೊಳ್ಳುವ ಕೆಲಸ ಮಾಡ್ತೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡಲಾಗ್ತಿದೆ, ಇದರ ಹೊಣೆ ಸರ್ಕಾರ ಹೊರಬೇಕು. ಹಿಂದೂಗಳು ನೆಮ್ಮದಿಯಿಂದ ಗಣೇಶ ಹಬ್ಬ ಮಾಡೋಕ್ಕಾಗ್ತಿಲ್ಲ. ಯಾವ ಸ್ಥಿತಿಗೆ ಹಿಂದೂಗಳನ್ನ ಈ ಸರ್ಕಾರ ತಳ್ಳಿರಬಹುದು? ಭದ್ರಾವತಿ ಶಾಸಕರು ಮುಸ್ಲಿಂ ಆಗಿ ಹುಟ್ಟುವ ಮಾತಾಡಿದ್ದಾರೆ.

ಮುಂದಿನ ಜನ್ಮದ ಮಾತೇಕೆ? ಸಂಗಮೇಶ್ ಅವರು ಈಗಲೇ ಮತಾಂತರ ಆಗಲಿ, ಇವರ ಹೇಳಿಕೆಗಳು ಹಿಂದೂಗಳಿಗೆ ವಿರೋಧ ಉಂಟು ಮಾಡಲು ಪೂರಕ ವಾತಾವರಣ ನಿರ್ಮಿಸಿದೆ. ಅನೇಕ ವಿಚಾರಗಳಲ್ಲಿ ಸರ್ಕಾರ ಹಿಂದೂ ವಿರೋಧಿ ನಡೆ ಇಡ್ತಿದೆ. ಚಿತ್ರದುರ್ಗದಲ್ಲೂ ಹಲವು ನಿರ್ಬಂಧ ಹಾಕಿದ್ದಾರೆ. ನಾವು ಭಾರತದಲ್ಲಿದೀವಾ? ಪಾಕ್ ನಲ್ಲಿದೀವಾ? ಎಂದು ಪ್ರಶ್ನಿಸಿದರು.

ಹರಿಪ್ರಸಾದ್ ಸೇರಿ ಕಾಂಗ್ರೆಸ್‌ನ ಹಲವರು ಅನಾವಶ್ಯಕ ಮಾತಾಡ್ತಿದ್ದಾರೆ. ಸಂಘದ ಹೆಸರು, ಸಂತೋಷ್ ಅವರ ಹೆಸರು ಬಳಸಿಕೊಂಡು ಮಾತಾಡೋದನ್ನು ನಿಲ್ಲಿಸಲಿ. ಮದ್ದೂರಿನ ಘಟನೆಯಲ್ಲಿ ಸಂಪೂರ್ಣವಾಗಿ ಪೊಲೀಸ್ ಇಲಾಖೆ ವೈಫಲ್ಯ ಇದೆ ಎಂದರು.

ಅಮಿತ್ ಶಾ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಮಿತ್ ಶಾ ಅವರ ಜೊತೆ ಧರ್ಮಸ್ಥಳದ ವಿಚಾರ ಚರ್ಚೆ ಮಾಡಿದ್ದೇವೆ. ಎನ್‌ಐಎ ಬಗ್ಗೆ ಚರ್ಚೆ ಮಾಡಿಲ್ಲ, ಅದೆಲ್ಲ ಊಹಾಪೋಹ. ಅಮಿತ್ ಶಾ ಜತೆ ನಮ್ಮ ಭೇಟಿ ಯಶಸ್ವಿಯಾಗಿದೆ ಎಂದು ತಿಳಿಸಿದರು.