ಮನೆ ಮನರಂಜನೆ “ಟೋಬಿ’ ಸಿನಿಮಾ ವಿಮರ್ಶೆ

“ಟೋಬಿ’ ಸಿನಿಮಾ ವಿಮರ್ಶೆ

0

ಸಿನಿಮಾದಲ್ಲಿ ಹೊಸ ಪ್ರಯೋಗ ಮಾಡಲು ಬಹುತೇಕ ಚಿತ್ರತಂಡಗಳು ಹೆದರುತ್ತವೆ. ಈ ನಿಟ್ಟಿನಲ್ಲಿ “ಟೋಬಿ’ ತಂಡದ ಪ್ರಯತ್ನ ನಿಜಕ್ಕೂ ಮೆಚ್ಚುವಂಥದ್ದು.

ಅದರಲ್ಲೂ ಸಿನಿಮಾದ ಮುಖ್ಯಪಾತ್ರವಾದ ನಾಯಕನ ವಿಚಾರದಲ್ಲಿ “ಟೋಬಿ’ ತಂಡದ “ಪ್ರಯೋಗ’ ಇದೆಯಲ್ಲ, ಅದನ್ನು ಮಾಡಲ  ಒಂದು ಗಟ್ಟಿಧೈರ್ಯ ಬೇಕು. ಆ ಧೈರ್ಯದೊಂದಿಗೆ ಮೂಡಿಬಂದಿರುವ “ಟೋಬಿ’ ಪ್ರೇಕ್ಷಕರನ್ನು ತಣ್ಣಗೆ ಕಾಡುತ್ತಾ, “ಇವ ಯಾಕ್‌ ಹಿಂಗೆ’ ಎಂಬ ಪ್ರಶ್ನೆಯನ್ನು ಮುಂದಿಡುತ್ತಲೇ ಸಾಗುತ್ತದೆ.

ಮೊದಲೇ ಹೇಳಿದಂತೆ “ಟೋಬಿ’ ಒಂದು ಹೊಸ ಪ್ರಯೋಗದ ಸಿನಿಮಾ. ಸಿನಿಮಾಗಳ ಹಳೆಯ ಸಿದ್ಧಸೂತ್ರಗಳನ್ನು ಪಕ್ಕಕ್ಕಿಟ್ಟು ತನ್ನದೇ ದಾರಿಯಲ್ಲಿ ಸಾಗುವುದು “ಟೋಬಿ’ ವೈಶಿಷ್ಟ್ಯ.

ಈ ಹಾದಿಯಲ್ಲಿ “ಟೋಬಿ’ ಬದುಕಿನ ಕರಾಳತೆ, ಕ್ರೂರತೆ, ನೀರವ ಮೌನ, ಸಂಕಟ, ಗೊಂದಲ, ಅಸಹಾಯಕತೆ… ಎಲ್ಲವೂ ಧಕ್ಕುತ್ತದೆ. “ಟೋಬಿ’ ಯಾರು, ಆತ ಯಾಕೆ ಹೀಗಾದ, ಆತನ ಮುಂದಿನ ಹಾದಿ ಏನು… ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರವಾಗುತ್ತಾ, ಸಿನಿಮಾ ಪ್ರೇಕ್ಷಕರನ್ನು ತಣ್ಣಗೆ ಆವರಿಸಿಕೊಳ್ಳುತ್ತದೆ. ಇದು ಪಕ್ಕಾ ಕಮರ್ಷಿಯಲ್‌ ಸಿನಿಮಾ. ಆದರೆ, ಕಮರ್ಷಿಯಲ್‌ ಅಬ್ಬರವಿಲ್ಲ, ಹೀರೋಯಿಸಂನ ಹಂಗಿಲ್ಲ, ಸಾದಾ-ಸೀದಾ ವ್ಯಕ್ತಿಯಾಗಿ ಜರ್ನಿ ಆರಂಭಿಸುವ ಟೋಬಿ, ಹೊಡೆದಾಟ ಬಂದಾಗ ಮಾತ್ರ “ಪಕ್ಕಾ ಕಮರ್ಷಿಯಲ್‌ ಹೀರೋ’ ಆಗುತ್ತಾನೆ. “ಟೋಬಿ’ ಒಮ್ಮೆಲೇ ಪ್ರೇಕ್ಷಕರನ್ನು ಆವರಿಸಿಕೊಳ್ಳುವುದಿಲ್ಲ. ಒಂದಷ್ಟು ಸಮಯ ತೆಗೆದುಕೊಳ್ಳುತ್ತಾನೆ. ಅದಕ್ಕೆ ಕಾರಣವೂ ಇದೆ. ಅದನ್ನು ತೆರೆಮೇಲೆ ನೋಡುವುದೇ ಚೆಂದ. ಸಿನಿಮಾದ ಒಂದಷ್ಟು ದೃಶ್ಯಗಳು ರೂಪಕದಂತೆ ಭಾಸವಾಗುತ್ತವೆ. ಆ ತರಹದ ಸನ್ನಿವೇಶಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.

ಅದರಲ್ಲೂ ಚಿತ್ರದ ಕೆಲವು ದೃಶ್ಯಗಳನ್ನು ನೋಡಿದಾಗ “ಭಯವಿಲ್ಲದವನ ಬದುಕು ಸುಂದರ’ ಎಂಬ ಭಾವನೆ ಬರದೇ ಇರದು. ಸಿನಿಮಾದ ನಿರೂಪಣೆಯಲ್ಲಿ ಒಂದಷ್ಟು ವೇಗ ಕಾಯ್ದುಕೊಳ್ಳುವ ಅವಕಾಶ ನಿರ್ದೇಶಕರಿಗಿತ್ತು.

ಮಾತು ಕಮ್ಮಿ ಕೆಲಸ ಜಾಸ್ತಿ ಎಂಬ ಕಾನ್ಸೆಪ್ಟ್ ನಡಿ ತಯಾರಾದ ಸಿನಿಮಾ ಎಂದರೆ ತಪ್ಪಿಲ್ಲ. ಇಲ್ಲಿ ಅತಿಯಾದ ಸಂಭಾಷಣೆಯಿಲ್ಲ, ರೀ ರೆಕಾರ್ಡಿಂಗ್‌ ನ ಅಬ್ಬರವೂ ಇಲ್ಲ. ಆದರೂ ಚಿತ್ರ ಕಾಡುತ್ತದೆ ಎಂದರೆ ಅದಕ್ಕೆ ಕಾರಣ ನಟ ರಾಜ್‌ ಬಿ ಶೆಟ್ಟಿ ಅವರ ನಟನೆ. ಇಡೀ ಸಿನಿಮಾವನ್ನು ಅವರು ಆವರಿಸಿಕೊಂಡಿರುವ ರೀತಿಯನ್ನು ಮೆಚ್ಚಬೇಕು. ಅವರ ಪಾತ್ರದ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕಾದರೆ, ಮಾತಿಲ್ಲ ಕಥೆಯಿಲ್ಲ, ಬರೀ ರೋಮಾಂಚನ.

ಇನ್ನು, ಚೈತ್ರಾ ಆಚಾರ್‌ ಗೆ ಒಳ್ಳೆಯ ಪಾತ್ರ ಸಿಕ್ಕಿದೆ. ಆ ಪಾತ್ರಕ್ಕೆ ಚೈತ್ರಾ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಉಳಿದಂತೆ ಗೋಪಾಲಕೃಷ್ಣ ದೇಶಪಾಂಡೆ, ಸಂಯುಕ್ತಾ ಹೊರನಾಡು, ದೀಪಕ್‌ ಶೆಟ್ಟಿ ನಟಿಸಿದ್ದಾರೆ.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ : 100 ಅಡ್ಮಿನಿಸ್ಟ್ರೇಟಿವ್ ಆಫೀಸರ್ ಸ್ಪೆಷಲಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ