ಬೆಳಗಾವಿ : ಕಾಂಬೋಡಿಯದಲ್ಲಿ ಸೈಬರ್ ವಂಚಕರ ಒತ್ತೆಯಾಳಾಗಿದ್ದ, ಬೆಳಗಾವಿಯ ಮೂವರು ಯುವಕರನ್ನು ರಕ್ಷಣೆ ಮಾಡಲಾಗಿದೆ. ಮೂವರು ಯುವಕರ ಪ್ರಾಣ ಉಳಿಸಿ ತವರಿಗೆ ಕರೆತರುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿ ಆಕಾಶ್ ಕಾಗಣಿಕರ, ಓಂಕಾರ ಲೋಖಾಂಡೆ, ಸಂಸ್ಕಾರ ಲೋಖಾಂಡೆ ಅವರು ಬೆಳಗಾವಿಗೆ ಮರಳಿದ್ದಾರೆ. ಇವರು ಒಂದು ತಿಂಗಳು ಕಾಂಬೋಡಿಯಾದಲ್ಲಿ ಒತ್ತೆಯಾಳಾಗಿ ನರಕಯಾತನೆ ಅನುಭವಿಸಿದ್ದರು.
ಹಾಂಕಾಂಗ್ನಲ್ಲಿ ಭಾರತೀಯರಿಗೆ ಉತ್ತಮ ಸಂಬಳ ನೀಡಲಾಗುತ್ತದೆ. ಡೇಟಾ ಎಂಟ್ರಿ ಆಪರೇಟರ್ ಕೆಲಸಕ್ಕೆ ಪ್ರತಿ ತಿಂಗಳು 1 ಲಕ್ಷ ರೂ. ಸಂಬಳ ನೀಡಲಾಗುತ್ತದೆ ಎಂದು ಸೈಬರ್ ಖದೀಮರು ಇವರನ್ನು ಆರಂಭದಲ್ಲಿ ನಂಬಿಸಿದ್ದರು. ಇವರ ಮಾತಿಗೆ ಮರಳಾಗಿ ಬೆಳಗಾವಿ ಮೂಲದ ಏಜೆಂಟರ್ ಮೂಲಕ ವಿದೇಶಕ್ಕೆ ಹಾರಿದ್ದರು. ಈ ಮೂವರು ಹಾಂಕಾಂಗ್ಗೆ ಹಾರಬೇಕಿತ್ತು. ಆದರೆ ಖದೀಮರು ಇವರನ್ನು ಹಾಂಕಾಂಗ್ಗೆ ಕರೆದುಕೊಂಡು ಹೋಗದೇ ಕಾಂಬೋಡಿಯಾಗೆ ಕರೆದೊಯ್ದಿದ್ದರು.
ಕಾಂಬೋಡಿಯಗೆ ತೆರಳಿದ ನಂತರ ನಿತ್ಯವೂ ಇವರಿಗೆ ವಾಟ್ಸಪ್, ಇನ್ಸ್ಟಾಗ್ರಾಂ ಬಳಸಿ ಭಾರತದವರ ಮೇಲೆ ಸೈಬರ್ ವಂಚನೆಯನ್ನು ಮಾಡಿಸುತ್ತಿದ್ದರು. ನಾವು ಮಾಡುತ್ತಿರುವುದು ತಪ್ಪು, ಈ ಕೆಲಸ ಮಾಡುವುದಿಲ್ಲ ಎಂದಾಗ ಇವರ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿ ಬೆದರಿಕೆ ಹಾಕುತ್ತಿದ್ದರು. ಈ ಸಂಬಂಧ ಆಕಾಶ್, ಲೋಕಾಂಡೆ ಸಹೋದರರ ಪೋಷಕರು ಬೆಳಗಾವಿ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಪೊಲೀಸ್ ಕಮೀಷನರ್ ಕಾಂಬೋಡಿಯಾದಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರು.
ಬೆಳಗಾವಿಯ ಸುರೇಶ ಹುಂದ್ರೆ, ಆಸೀಫ್ ಅಲ್ವಾನ್, ಜಾರ್ಖಂಡ್ ಮೂಲದ ಅಮಿತ್ನಿಂದ ವಂಚಕರು ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಬೆಳಗಾವಿ ಸಿಇಎನ್ ಠಾಣೆ ಇನ್ಸ್ಪೆಕ್ಟರ್ ಜೆ.ಎಂ ಕಾಲಿಮಿರ್ಚಿ ತಂಡದ ನಿರಂತರ ಪ್ರಯತ್ನ ಸಫಲವಾಗಿದ್ದು ಸದ್ಯ ಕೇಸ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿರುವ ಬೆಳಗಾವಿ ಸಿಇಎನ್ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಶೋಧಕ್ಕೆ ವಿಶೇಷ ತಂಡ ರಚನೆ ಮಾಡಿದ್ದಾರೆ. ಕಾಂಬೋಡಿಯಾ ಪೊಲೀಸರಿಂದ ಸೈಬರ್ ವಂಚಕರ ಸೆಂಟರ್ ಮೇಲೆ ದಾಳಿ ನಡೆಸಿದಾಗ ಭಾರತ ಸೇರಿದಂತೆ ಬೇರೆ ದೇಶದ ಒಟ್ಟು 50 ಜನ ಯುವಕರನ್ನು ಒತ್ತೆಯಾಳಾಗಿಸಿಕೊಂಡಿದ್ದ, ವಿಚಾರ ಬೆಳಕಿಗೆ ಬಂದಿದೆ.















