ಮಡಿಕೇರಿ : ಕೊಡಗಿನಲ್ಲಿ ಕಾಫಿ, ಜೇನು, ಹೋಂ ಮೇಡ್ ವೈನ್ ಹೇಗೆ ಪ್ರಸಿದ್ಧಿ ಪಡೆದಿದೆಯೋ ಹಾಗೇ ಪ್ರವಾಸೋದ್ಯಮದ ಜೊತೆಗೆ ಇಲ್ಲಿನ ಚಾಕೋಲೆಟ್ ಕೂಡ ಪ್ರವಾಸಿಗರ ಫೇವ್‌ರೆಟ್ ಆಗಿದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲವರು ಕೂರ್ಗ್ ಚಾಕೋಲೆಟ್ ಹೆಸರಿನಲ್ಲಿ ನಕಲಿ ಚಾಕೋಲೆಟ್ ಮಾರಾಟ ಮಾಡುತ್ತಿದ್ದಾರೆ.
ಕೆಲ ವರ್ಷಗಳ ಹಿಂದೆ ನಕಲಿ ಚಾಕೋಲೆಟ್ ದಂಧೆಯನ್ನು ರಿಯಾಲಿಟಿ ಚೆಕ್ ಮಾಡಿ ಬಯಲಿಗೆಳೆದಿತ್ತು. ಆ ಬಳಿಕ ನಕಲಿ ಚಾಕೋಲೆಟ್ ದಂಧೆಗೆ ಕಡಿವಾಣ ಹಾಕಲಾಗಿತ್ತು. ಇದೀಗ ಸದ್ದಿಲ್ಲದೇ ಮತ್ತೆ ಈ ದಂಧೆ ಶುರುವಾಗಿದ್ದು, ಕೊಡಗಿನಲ್ಲಿ ಹೋಂ ಮೇಡ್ ಚಾಕೋಲೆಟ್‌ಗಳು ಹೆಚ್ಚು ಜನಪ್ರಿಯವಾಗಿದೆ.
ಬೇರೆ ಬೇರೆ ಊರು, ದೇಶಗಳಿಂದ ಪ್ರವಾಸಕ್ಕೆ ಬರುವವರು ಇಲ್ಲಿನ ಕೂರ್ಗ್ ಚಾಕೋಲೆಟ್ ಸವಿಯದೇ ಪ್ರವಾಸ ಪೂರ್ಣಗೊಳಿಸಲ್ಲ. ಬರುವಾಗ ಆ ಚಾಕೋಲೆಟ್‌ಗಳನ್ನ ಮನೆಗೂ ತಗೊಂಡು ಹೋಗ್ತಾರೆ, ಸ್ನೇಹಿತರೊಟ್ಟಿಗೆ ಹಂಚಿ ತಿನ್ನುತ್ತಾರೆ. ಇದನ್ನೆ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು ನಕಲಿ ಚಾಕೋಲೆಟ್ ದಂಧೆ ಶುರು ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನ ಆಕ್ರೋಶ ಹೊರಹಾಕಿದ್ದಾರೆ.
ಕೊಡಗು ಜಿಲ್ಲೆಯ ಪ್ರವಾಸಿತಾಣಗಳಾದ ದುಬಾರೆ, ನಿಸರ್ಗಧಾಮ, ಮಡಿಕೇರಿಯ ಅಬ್ಬಿ ಫಾಲ್ಸ್, ರಾಜಾಸೀಟ್ ಸೇರಿದಂತೆ ಹಲವಾರು ಪ್ರವಾಸಿತಾಣಗಳಲ್ಲಿ ಆಹಾರ ಸುರಕ್ಷತಾ ನಿಯಮ ಪಾಲಿಸದ, ಹೆಸರು, ವಿಳಾಸಗಳೇ ಇಲ್ಲದ ಚಾಕೋಲೆಟ್‌ಗಳು ವಿವಿಧ ಅಂಗಡಿಗಳಲ್ಲಿ ಕಂಡುಬರುತ್ತಿವೆ. ಅಷ್ಟೇ ಅಲ್ಲದೇ FSSAI ಲೇಬಲ್, ತಯಾರಿಸಿದ ದಿನಾಂಕ, ಸೇವಿಸಬಹುದಾದ ಅವಧಿ ಸೇರಿ ತಯಾರಕರ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಚಾಕೋಲೆಟ್‌ಗಳು ಮಾರಾಟ ಆಗುತ್ತಿವೆ.
ಹೀಗಾಗಿ ಖುದ್ದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳೇ ಕಾರ್ಯಾಚರಣೆಗೆ ಇಳಿದಿದ್ದಾರೆ. ಅಂಗಡಿಗಳಿಗೆ ತೆರಳಿ ಚಾಕೋಲೆಟ್ ಮಾದರಿಗಳನ್ನ ಸಂಗ್ರಹಿಸಲು ಮುಂದಾಗಿದ್ದಾರೆ. ಬಳಿಕ ಅಸಲಿಯೋ-ನಕಲಿಯೋ ಎಂಬುದನ್ನು ಪತ್ತೆ ಮಾಡಿ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.














