ಸಿಯೋಲ್ : ನರೇಂದ್ರ ಮೋದಿ ಅಷ್ಟು ಸುಲಭವಾಗಿ ಬಗ್ಗುವ ವ್ಯಕ್ತಿಯಲ್ಲ. ಅವರೊಬ್ಬ ಕಠಿಣ ವ್ಯಕ್ತಿ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯಾ ಪೆಸಿಫಿಕ್ ಆರ್ಥಿಕ ಸಹಕಾರ ಸಿಇಒಗಳ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್ ಮತ್ತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದೇನೆ ಎಂದು ಹೇಳುವ ಮೂಲಕ ಮತ್ತೆ ತನ್ನ ಬೆನ್ನನ್ನು ತಟ್ಟುವ ಕೆಲಸವನ್ನು ಮುಂದುವರಿಸಿದ್ದಾರೆ.
ಇದೇ ವೇಳೆ ಶೀಘ್ರವೇ ಭಾರತದ ಜೊತೆ ವ್ಯಾಪಾರ ಒಪ್ಪಂದ ಮಾಡುವ ಬಗ್ಗೆ ಟ್ರಂಪ್ ಸುಳಿವು ನೀಡಿದ್ದಾರೆ. ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದ್ದೇನೆ ಮತ್ತು ಪ್ರಧಾನಿ ಮೋದಿಯವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಪ್ರೀತಿ ಇದೆ. ನಮ್ಮಿಬ್ಬರ ನಡುವೆ ಉತ್ತಮ ಸಂಬಂಧವಿದೆ ಎಂದು ಹೇಳಿದರು.
ಪ್ರಧಾನಿ ಮೋದಿಯವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಪ್ರೀತಿ ಇದೆ. ನಮಗೆ ಉತ್ತಮ ಸಂಬಂಧವಿದೆ. ಅದೇ ರೀತಿ, ಪಾಕಿಸ್ತಾನದ ಪ್ರಧಾನಿ ಒಬ್ಬ ಉತ್ತಮ ವ್ಯಕ್ತಿ. ಅವರಲ್ಲಿ ಫೀಲ್ಡ್ ಮಾರ್ಷಲ್ ಇದ್ದಾರೆ. ಅವರು ಫೀಲ್ಡ್ ಮಾರ್ಷಲ್ ಯಾಕೆ ಎನ್ನುವುದು ನಿಮಗೆ ತಿಳಿದಿದ್ಯಾ? ಅವರು ಒಬ್ಬ ಉತ್ತಮ ಹೋರಾಟಗಾರರು ಎಂದರು.
ಸುಂದರವಾಗಿರುವ ಏಳು ಹೊಸ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ನಾನು ಓದಿದ್ದೇನೆ. ಎರಡು ಪರಮಾಣು ರಾಷ್ಟ್ರಗಳು ಯುದ್ಧದಲ್ಲಿ ತೊಡಗಿದ್ದಾಗ ನಾನು ಮೋದಿ ಮತ್ತು ಪಾಕಿಸ್ತಾನಕ್ಕೆ ಕರೆ ಮಾಡಿ ಯುದ್ಧವನ್ನು ನಿಲ್ಲಿಸುವಂತೆ ಕೇಳಿದೆ. ಯುದ್ಧ ನಿಲ್ಲಿಸದೇ ಇದ್ದರೆ ವ್ಯಾಪಾರ ಒಪ್ಪಂದ ಮಾಡುವುದಿಲ್ಲ ಎಂದು ಹೇಳಿದ್ದೆ. ಎರಡು ದಿನಗಳ ನಂತರ ಈ ಯುದ್ಧ ನಿಂತಿತು ಎನ್ನಲಾಗಿದೆ.
ಯುದ್ಧ ನಿಂತಿರುವುದು ಅದ್ಭುತವಲ್ಲವೇ? ಒಂದು ವೇಳೆ ಜೋ ಬೈಡೆನ್ ಅಧಿಕಾರದಲ್ಲಿ ಇದ್ದರೆ ಯುದ್ಧ ನಿಲ್ಲಿಸುತ್ತಿದ್ದರು ಎಂದು ಭಾವಿಸುತ್ತೀರಾ? ನಾನು ಹಾಗೆ ಭಾವಿಸುವುದಿಲ್ಲ ಎಂದು ಹೇಳಿ ತಾನೊಬ್ಬ ಶಾಂತಿದೂತ ಎಂದು ಬಿಂಬಿಸುವ ಪ್ರಯತ್ನ ಮಾಡಿದರು.















