ಮನೆ ಸ್ಥಳೀಯ ಬುಡಕಟ್ಟು ಜನಾಂಗದವರು ಸರ್ಕಾರ ನೀಡುವ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕು: ಎಚ್.ಡಿ.ಕುಮಾರ ಸ್ವಾಮಿ

ಬುಡಕಟ್ಟು ಜನಾಂಗದವರು ಸರ್ಕಾರ ನೀಡುವ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕು: ಎಚ್.ಡಿ.ಕುಮಾರ ಸ್ವಾಮಿ

ಭಗವಾನ್ ಶ್ರೀ ಬಿರ್ಸಾ ಮುಂಡರವರ 150 ನೇ ಜಯಂತಿಯ ಪ್ರಯುಕ್ತ ಜನಜಾತೀಯ ಗೌರವ ದಿವಸ ಸಮಾರಂಭ

0

ಮೈಸೂರು: ಬುಡಕಟ್ಟು ಜನಾಂಗದವರನ್ನು ಮುಖ್ಯ ವಾಹಿನಿಗೆ ತರಲೆಂದು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಬುಡಕಟ್ಟು ಜನಾಂಗದವರು ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಯಾಗಿ ಮುಖ್ಯ ವಾಹಿನಿಗೆ ಬರಲು ಮುಂದಾಗಬೇಕು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಖಾತೆ ಸಚಿವರಾದ ಎಚ್. ಡಿ ಕುಮಾರಸ್ವಾಮಿ ಅವರು ಹೇಳಿದರು.

Join Our Whatsapp Group

ಇಂದು ನಗರದ ಕೇರ್ಗಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ, ಭಗವಾನ್ ಶ್ರೀ ಬಿರ್ಸಾ ಮುಂಡರವರ 150 ನೇ ಜಯಂತಿಯ ಪ್ರಯುಕ್ತ ಜನಜಾತೀಯ ಗೌರವ ದಿವಸ ಸಮಾರಂಭದಲ್ಲಿ ಮಾತನಾಡಿದ ಅವರು, ಬುಡಕಟ್ಟು ಜನಾಂಗದವರಿಗಾಗಿ ಬಿರ್ಸಾ ಮುಂಡ ಅವರ ಹೆಸರಿನಲ್ಲಿ ಇಂದು ಸುಮಾರು 6.600 ಕೋಟಿ ವೆಚ್ಚದಲ್ಲಿ ರಸ್ತೆಗಳ ನಿರ್ಮಾಣ, ಶಿಕ್ಷಣಕ್ಕೆ ಏಕಲವ್ಯ ರೆಸಿಡೆನ್ಸಿಯಲ್ ಶಾಲೆಗಳ ನಿರ್ಮಾಣ, ಪ್ರತಿಯೊಂದು ಗ್ರಾಮಗಳಿಗೆ ಪಕ್ಕಾ ಮನೆ, ಸುಸರ್ಜಿತವಾದ ರಸ್ತೆಗಳ ನಿರ್ಮಾಣ, ಟೆಲಿಕಾಂ ಕನೆಕ್ಷನ್, ಸೋಲಾರ್ ಮೂಲಕ ವಿದ್ಯುತ್ ಸಂಪರ್ಕ, ಆಹಾರದಲ್ಲಿ ಇರುವ ಕೊರತೆ ನೀಗಿಸಲು ಪೌಷ್ಟಿಕ ಆಹಾರದ ಪೂರೈಕೆ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಸ್ಕಿಲ್ ಡೆವಲಪ್ಮೆಂಟ್ ಪ್ರೋಗ್ರಾಂ ಗಳನ್ನು ಒಳಗೊಂಡಿರುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಬುಡಕಟ್ಟು ಜನಾಂಗದವರ ಬಗ್ಗೆ, ಅವರು ದೇಶಕ್ಕಾಗಿ ನೀಡಿರುವ ಕೊಡುಗೆಗಳ ಬಗ್ಗೆ ತಿಳಿಸಲು ಮ್ಯೂಸಿಯಂಗಳನ್ನು ಸ್ಥಾಪಿಸಲಾಗಿದ್ದು, ಯುವ ಜನರು ವೀಕ್ಷಿಸಿ ಅವರ ಕೊಡುಗೆಯನ್ನು ಅರಿತುಕೊಳ್ಳಬೇಕು. ಬುಡಕಟ್ಟು ಜನಾಂಗದವರನ್ನು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿ ನಿಲ್ಲಿಸಬೇಕು. ಇದಕ್ಕೆ ನಿಮ್ಮೆಲ್ಲರ ಸಹಕಾರವು ಅಗತ್ಯ ಎಂದು ಹೇಳಿದರು.

ಬಿರ್ಸಾ ಮುಂಡ ಅವರ ದಿನವನ್ನು ಜನಜಾತೀಯ ಗೌರವ ದಿನವನ್ನಾಗಿ ಆಚರಣೆ ಮಾಡಲು 2016 ರ ಸ್ವತಂತ್ರ ದಿನಾಚರಣೆಯ ಸಂದರ್ಭದಲ್ಲಿ ತೀರ್ಮಾನಿಸಲಾಯಿತು. 1885 ರಲ್ಲಿ ಬಿಹಾರದ ಬುಡಕಟ್ಟು ಜನಾಂಗದಲ್ಲಿ ಜನಿಸಿದ ಬಿರ್ಸಾ ಮುಂಡ ಅವರು, ದೇಶದಲ್ಲಿ ಬ್ರಿಟಿಷರು ಆಡಳಿತ ಬಂದಾಗ ಅವರ ಕ್ರೂರ ಆಡಳಿತದ ವಿರುದ್ಧ ಹೋರಾಡಿ ದೇಶದ ಸ್ವಾತಂತ್ರ್ಯಡಕ್ಕೆ ಹೋರಾಟ ಮಾಡಿದವರಲ್ಲಿ ಒಬ್ಬರಾಗಿದ್ದಾರೆ. ಬಿಹಾರದಲ್ಲಿ ಬ್ರಿಟಿಷ್ ದೌರ್ಜನ್ಯದ ವಿರುದ್ಧ ಎಲ್ಲರನ್ನು ಒಟ್ಟುಗೂಡಿಸಿ ಹೋರಾಡಿದಂತಹ ಮಹಾನ್ ವ್ಯಕ್ತಿಯಾಗಿದ್ದಾರೆ. ಹಾಗಾಗಿ ಇಂದು ಈ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ಸಮಾಜದಲ್ಲಿ ಪ್ರತಿಯೊಬ್ಬರೂ ಸರಿ ಸಮಾನರಾಗಿ ಬದುಕಬೇಕು. ಬಡವ ಶ್ರೀಮಂತ ಎನ್ನುವ ಭೇದವಿಲ್ಲದೆ ಪ್ರತಿಯೊಬ್ಬರೂ ಆರ್ಥಿಕವಾಗಿ ಮುಂದೇಬರಬೇಕೆoದರೆ, ಹೆಣ್ಣು-ಗಂಡು ಎಂಬ ಬೇಧವಿಲ್ಲದೆ ಕುಟುಂಬದ ಪ್ರತಿಯೊಬ್ಬರೂ ವಿದ್ಯೆ ಕಲಿಯಬೇಕು. ವಿದ್ಯೆ ಇಲ್ಲದಿದ್ದರೆ ಸ್ವಾವಲಂಬನೆಯಿoದ ಬದುಕಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬ ಬುಡಕಟ್ಟು ಜನಾಂಗದವರು ಎಲ್ಲರಂತೆ ಮುಖ್ಯ ವಾಹಿನಿಗೆ ಬರಲು ವಿದ್ಯೆ ಕಲಿಯಬೇಕು ಎಂದು ಸಲಹೆ ನೀಡಿದರು.

ಪ್ರಸ್ತುತ 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳು ಏಕಲವ್ಯ ರೆಸಿಡೆನ್ಸಿಯಲ್ ಸ್ಕೂಲ್ನಲ್ಲಿ ಓದುತ್ತಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗಿ ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶವಿದೆ. ಅದನ್ನು ಬಳಸಿಕೊಂಡು ತಮ್ಮನ್ನು ತಾವು ನಂಬಿ ಛಲಬಿಡದೆ ಮುಂದೆ ಬರಬೇಕು ಎಂದರು.

ಸರ್ಕಾರದ ಸಾಲ ಸೌಲಭ್ಯ ಯೋಜನೆಯನ್ನು ಬಳಸಿಕೊಂಡು ಸ್ವ-ಉದ್ಯೋಗವನ್ನು ಪ್ರಾರಂಭಿಸಿ, ತಾವು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಿ, ನಾವು ಯಾರಿಗೂ ಕಡಿಮೆ ಇಲ್ಲ ಎಂಬoತೆ ಸಮಾಜದಲ್ಲಿ ಬದುಕಬೇಕು. ಇಲ್ಲವಾದರೆ ಸಮಾಜದ ಮುಖ್ಯ ವಾಹಿನಿ ಬರಲು, ಎಲ್ಲರಂತೆ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಅಧಿಕಾರಿಗಳು ವಾರದಲ್ಲಿ ಒಂದು ಬಾರಿಯಾದರು ಬುಡಕಟ್ಟು ಜನರಿರುವ ಸ್ಥಳಗಳಿಗೆ ತೆರಳಿ ಅವರಿಗೆ ತರಬೇತಿಗಳನ್ನು ನೀಡಬೇಕು. ಇಲ್ಲಿನ ಆಗು-ಹೋಗುಗಳ ಬಗ್ಗೆ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿ ಅವರನ್ನು ಮುಖ್ಯ ವಾಹಿನಿಗೆ ತರವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಣ್ಣ, ಅತಿ ಸಣ್ಣ ಮತ್ತು ಮದ್ಯಮ ಹಾಗೂ ಕಾರ್ಮಿಕ ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಅದಿವಾಸಿ ಜನಾಂಗದಲ್ಲಿ ಹುಟ್ಟಿದ ವ್ಯಕ್ತಿ ಭಗವಾನ್ ಆಗಬಹುದೆಂದು ತೋರಿಸಿದ ವ್ಯಕ್ತಿ ಬಿರ್ಸಾ ಮುಂಡ ಅವರು. ವಿಶಾಲವಾದ ಸಾಮ್ರಾಜ್ಯದ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ವ್ಯಕ್ತಿ. ಕಾಡಿನಲ್ಲಿ ಇರುವ ಗಿಡಮೂಲಿಕೆ ಔಷಧ, ಉತ್ಪನ್ನಗಳು ಆಹಾರವಾಗಿದೆ. ಜೇನುಕುರುಬ, ಕಾಡು ಕುರುಬ ಸೇರಿದಂತೆ ಹಲವಾರು ಸಮುದಾಯಗಳಿಗೆ ಆರೋಗ್ಯ ಶಿಕ್ಷಣ, ಆರ್ಥಿಕ, ಸಾಮಾಜಿಕ ಸೌಲಭ್ಯ ದೊರೆಯಬೇಕು. ವಸತಿ ಯೋಜನೆಯಡಿ ಮನೆ ಮಂಜೂರು ಆಗಿರುವ ಫಲಾನುಭವಿಗಳಿಗೆ ಜಾಗ ಸಿಗದ ಕಡೆಗಳಲ್ಲಿ ಕಂದಾಯ ಭೂಮಿಯನ್ನು ಕೊಡಿಸಿ ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದರು.

ಒರಿಸ್ಸಾ, ಬಿಹಾರ, ಜಾರ್ಖಂಡ್ ರಾಜ್ಯಗಳಲ್ಲಿ ಕೀಟನಾಶಕ ಬೆರೆಸದೆ ಹಲಸಿನ ಹಣ್ಣು, ಪೈನಾಪಲ್ ಬೆಳೆಯುವ ಕಾರಣ ಈ ಹಣ್ಣುಗಳಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆ ಬರಲಿದೆ. ಆರೋಗ್ಯಕ್ಕೆ ಒತ್ತು ನೀಡಿರುವ ಕಾರಣ ಸಿಕೆಲ್ ಸೆಲ್ ಅನಿಮೀಯಾ ಪತ್ತೆ ಮಾಡಲು ಪ್ರತಿಯೊಬ್ಬರ ತಪಾಸಣೆ ಮಾಡಿ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಹಚ್ಚುವ ಕೆಲಸ ಶುರು ಮಾಡಲಾಗಿದೆ. ಸ್ವ-ಉದ್ಯೋಗಕ್ಕೆ ತರಬೇತಿ ಪಡೆದವರಿಗೆ ನೂರಕ್ಕೆ ನೂರರಷ್ಟು ಸಾಲ ಕೊಡಿಸುವ ಜೊತೆಗೆ ಮಾರುಕಟ್ಟೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ವೇಳೆ ಸಂಸ್ಥೆಯಲ್ಲಿ ಏರ್ಪಡಿಸಿದ್ದ ವರ್ಚುವಲ್ ಮೂಲಕ ಕಾರ್ಯಕ್ರಮದ ವೀಕ್ಷಣೆ ಹಾಗೂ ಪ್ರಧಾನ ಮಂತ್ರಿಗಳು ಬಿರ್ಸಾ ಮುಂಡ ಜಯಂತಿಯ ಅಂಗವಾಗಿ ಬುಡಕಟ್ಟು ಸಮುದಾಯದ ಫಲಾನುಭವಿಗಳಿಗೆ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ಸಿತಾರ, ನೇತ್ರಾವತಿ, ವರ್ಷ ಅವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಿರಿಯಾಪಟ್ಟಣ ತಾಲ್ಲೂಕಿನ ಆಲನಕಟ್ಟೆ ಹಾಡಿಯ ಗೀತಾ, ಸಿದ್ದ ಅವರಿಗೆ ಮನೆ ಬೀಗದ ಕೀ ವಿತರಣೆ, ಜನ್ಧನ್ ಯೋಜನೆಯಡಿ ಬ್ಯಾಂಕ್ ಖಾತೆಯ ಪಾಸ್ ಪುಸ್ತಕವನ್ನು ವೀರಯ್ಯ, ನಾಗಯ್ಯ, ಕರಿಯಯ್ಯ ಅವರಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ, ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಎನ್ ಮಂಜೇಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಕೆ.ಎಂ ಗಾಯತ್ರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಡಾ.ಪಿ.ಸಿ ಕುಮಾರಸ್ವಾಮಿ, ಬೆಂಗಳೂರಿನ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಯೋಗೇಶ್ ಟಿ, ಬುಡಕಟ್ಟು ಸಮುದಾಯದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.