ಭಾರತದ ಟಾಪ್ ನಿರ್ಮಾಣ ಸಂಸ್ಥೆಗಳಲ್ಲಿ ಒಂದೆನಿಸಿಕೊಂಡಿರುವ ಕರ್ನಾಟಕದ ಹೊಂಬಾಳೆ ಫಿಲಮ್ಸ್ ಹೊಸ ಸಿನಿಮಾ ಘೋಷಣೆ ಮಾಡಿದೆ. ನವೆಂಬರ್ 15 ರಂದು ಪೋಸ್ಟರ್ ಒಂದನ್ನು ಹಂಚಿಕೊಂಡಿರುವ ಹೊಂಬಾಳೆ, ಸಿನಿಮಾದ ಕುರಿತು ಕುತೂಹಲ ಹುಟ್ಟಿಸಿದೆ. ‘ಈಗ ಬಿಡುಗಡೆ ಮಾಡಲಾಗಿರುವ ಪೋಸ್ಟರ್ನಲ್ಲಿ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ, ಆದರೆ ಪೋಸ್ಟರ್ ನೋಡಿದವರಿಗೆ ಇದು ಪೌರಾಣಿಕ ಸಿನಿಮಾ ಇರಬಹುದು ಎಂಬ ಅನುಮಾನ ಮೂಡಿದೆ. ಜೊತೆಗೆ ಇದು ಅನಿಮೇಷನ್ ಸಿನಿಮಾ ಆಗಿರಬಹುದೆಂಬ ಅನುಮಾನವೂ ಮೂಡುತ್ತಿದೆ.
ಹೊಂಬಾಳೆ ಈಗ ಹಂಚಿಕೊಂಡಿರುವ ಪೋಸ್ಟರ್ನಲ್ಲಿ ರಕ್ತ ಮೆತ್ತಿದ ಕೈ ಮಾತ್ರವೇ ಕಾಣುತ್ತಿದ್ದು, ಪೌರಾಣಿಕ ಕತೆಯಾದ ನರಸಿಂಹನ ಕೈ ರೀತಿ ಕಾಣುತ್ತಿದೆ. ಚೂಪಾದ ಉಗುರುಗಳು ಜೊತೆಗೆ ಕೈಗೆ ಧರಿಸಿರುವ ಕೆಲವು ಆಭರಣಗಳು ಗಮನ ಸೆಳೆಯುತ್ತಿವೆ. ಪೋಸ್ಟರ್ ಬಿಡುಗಡೆ ಮಾಡಿರುವ ಹೊಂಬಾಳೆ, ‘ನಂಬಿಕೆಗೆ ಸವಾಲು ಬಂದಾಗ ಅವನು ಬರುತ್ತಾನೆ’ ಎಂಬ ಅಡಿಬರಹವನ್ನು ನೀಡಿದೆ. ಸಿನಿಮಾದ ಇತರೆ ಮಾಹಿತಿಯನ್ನು ನಾಳೆ ಅಂದರೆ ನವೆಂಬರ್ 16 ಮಧ್ಯಾಹ್ನ 3:33 ಕ್ಕೆ ಹಂಚಿಕೊಳ್ಳುವುದಾಗಿ ಘೋಷಿಸಿದೆ.
ಸಿನಿಮಾ ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬರುತ್ತಿರುವಾಗಿ ಪೋಸ್ಟರ್ನಲ್ಲಿದ್ದು, ಸಿನಿಮಾವನ್ನು ಅಶ್ವಿನ್ ಕುಮಾರ್ ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ ಈ ಅಶ್ವಿನ್ ಕುಮಾರ್ ಯಾರು ಎಂಬುದು ಸಹ ಸದ್ಯಕ್ಕೆ ಅನುಮಾನ. ಆಸ್ಕರ್ಗೆ ನಾಮಿನೇಟ್ ಆಗಿದ್ದ ‘ಲಿಟಲ್ ಟೆರರಿಸ್ಟ್’, ‘ನೋ ಫಾದರ್ ಇನ್ ಕಾಶ್ಮೀರ್’ ಅಂಥಹಾ ಸಿನಿಮಾಗಳನ್ನು ನಿರ್ದೇಶಿಸಿರುವ ಬೆಂಗಾಲಿ ನಿರ್ದೇಶಕ ಅಶ್ವಿನ್ ಕುಮಾರ್ ಅವರೇ ಈ ಸಿನಿಮಾ ನಿರ್ದೇಶಿಸುತ್ತಿದ್ದಾರಾ ಎಂಬ ಅನುಮಾನ ಇದೆಯಾದರೂ ಖಾತ್ರಿಗೆ ನಾಳೆಯ ವರೆಗೂ ಕಾಯಬೇಕಿದೆ.
ಸಿನಿಮಾವನ್ನು ಹೊಂಬಾಳೆ ಹಾಗೂ ಕ್ಲೀನ್ ಪ್ರೊಡಕ್ಷನ್ಸ್ ಒಟ್ಟಿಗೆ ನಿರ್ಮಾಣ ಮಾಡುತ್ತಿದ್ದು, ಕ್ಲೀನ್ ಪ್ರೊಡಕ್ಷನ್ಸ್ನವರು ಅನಿಮೇಷನ್ ಸಿನಿಮಾಗಳನ್ನು ಮಾಡುವುದಕ್ಕೆ ಜನಪ್ರಿಯ. ಹಾಗಾಗಿ ಇದು ಅನಿಮೇಟೆಡ್ ಸಿನಿಮಾ ಆಗಿರಬಹುದಾ ಎಂಬ ಅನುಮಾನ ಮೂಡಿದೆ. ಪೋಸ್ಟರ್ನಲ್ಲಿ ಕಾಣಿಸಿಕೊಂಡಿರುವ ವಾನರ ರೂಪಿಯ ಕೈ ಸಹ ಇದಕ್ಕೆ ಪುಷ್ಠಿ ನೀಡುತ್ತಿದೆ.