ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಯುದ್ಧ ನಿಲ್ಲಿಸುವುದೆಂದರೆ ತುಂಬಾ ಇಷ್ಟವಂತೆ. ಯಾವುದೇ ದೇಶ ಯುದ್ದ ಮಾಡಿದ್ರು ಅದನ್ನು ತಡೆಯುತ್ತೇನೆ ಎಂದು ಹೇಳಿದ್ದಾರೆ. ಈ ಹಿಂದೆ ಭಾರತ ಹಾಗೂ ಪಾಕಿಸ್ತಾನದ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಎಲ್ಲ ಕಡೆ ಹೇಳಿಕೊಂಡು ಬಂದಿದ್ದರು, ಇಸ್ರೇಲ್, ರಷ್ಯಾ, ಉಕ್ರೇನ್ ಹೀಗೆ ಅನೇಕ ದೊಡ್ಡ ದೊಡ್ಡ ರಾಷ್ಟ್ರಗಳ ಯುದ್ಧ ನಿಲ್ಲಿಸಲು ಪ್ರಯತ್ನ ಇದೆ ಎಂದು ಹೇಳಿಕೊಂಡಿದ್ದಾರೆ.
ಇದರ ಜತೆಗೆ ಯುದ್ಧ ನಿಲ್ಲಿಸಿದಕ್ಕೆ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು ಎಂದೆಲ್ಲ ಹೇಳಿಕೊಂಡಿದ್ದರು, ಪಾಕ್ ಪ್ರಧಾನಿ ಕೂಡ ಇವರಿಗೆ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ಡೊನಾಲ್ಡ್ ಟ್ರಂಪ್ ಮುಂದೆನೇ ಹೇಳಿದರು. ಇದೀಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆ ಕಡಿಮೆ ಮಾಡಲು ಮುಂದಾಗಿದ್ದಾರೆ. ಯುದ್ಧವನ್ನು ಪರಿಹರಿಸಲು ಇಷ್ಟಪಡುತ್ತೇನೆ ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಹೇಳಿದ್ದಾರೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಲೇ ಇದೆ, ಈಗಾಗಲೇ ಪಾಕಿಸ್ತಾನ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಕಾರವಾಗಿ ಅಫ್ಘಾನಿಸ್ತಾನ ಕೂಡ ಪಾಕ್ ಮೇಲೆ ದಾಳಿಯನ್ನು ನಡೆಸಿತ್ತು. ಇದೀಗ ಮತ್ತೊಮ್ಮೆ ಪಾಕ್ ಸೇನೆಯು ಗಡಿ ಭಾಗದಲ್ಲಿ ದಾಳಿ ನಡೆಸಿದ್ದು, ಈ ದಾಳಿಯಿಂದಾಗಿ ಅಫ್ಘಾನಿಸ್ತಾನದ ಮೂವರು ಕ್ರಿಕೆಟಿಗರು ಮೃತಪಟ್ಟಿದ್ದಾರೆ. ಇದರಿಂದ ಪಾಕ್ ಹಾಗೂ ಅಫ್ಘಾನಿಸ್ತಾನದ ಗಡಿಯಲ್ಲಿ ಯುದ್ಧ ವಾತಾವರಣ ಸೃಷ್ಟಿಯಾಗಿದ್ದು, ಇದನ್ನು ಪರಿಹಾರ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸ್ತಕ್ಷೇಪ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಈ ಸಂಘರ್ಷವನ್ನು ಪರಿಹರಿಸಿದರೆ ಅವರು ಪರಿಹರಿಸುವ ಒಂಬತ್ತನೇ ಯುದ್ಧವಾಗಿರುತ್ತದೆ.
ಇನ್ನು ಮಾಧ್ಯಮಗಳ ಮುಂದೆ ಮಾತನಾಡಿ ಟ್ರಂಪ್, ಈ ಸಂಘರ್ಷವನ್ನು ಪರಿಹರಿಸುವುದು ಸುಲಭ, ಹಾಗಾಗಿ ಯಾವುದೇ ಯುದ್ಧ ನಡೆದರು, ಅದನ್ನು ಮೊದಲು ಅಮೆರಿಕ ಪರಿಹರಿಸಬೇಕು ಎಂದು ಹೇಳಿದ್ದಾರೆ. “ಪಾಕಿಸ್ತಾನ ದಾಳಿ ಮಾಡಿದೆಯೇ ಅಥವಾ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಯುತ್ತಿದೆ ಎಂದು ನನಗೆ ಅರ್ಥವಾಗಿದೆ. ಅದನ್ನು ಪರಿಹರಿಸುವುದು ನನಗೆ ಸುಲಭ.ಅದಕ್ಕೂ ಮೊದಲು ಅಮೆರಿಕದಲ್ಲಿ ಈ ಬಗ್ಗೆ ಚರ್ಚಿಸಬೇಕು, ಆದರೆ ಯುದ್ಧಗಳನ್ನು ಪರಿಹರಿಸಲು ನನಗೆ ಇಷ್ಟ, ಯಾವ ಕಾರಣಕ್ಕೆ ಎಂಬುದು ನಿಮಗೆ ಗೊತ್ತಿದೆ. ಜನರು ಸಾಯುವುದನ್ನು ತಡೆಯಲು ನಾನು ಇಷ್ಟಪಡುತ್ತೇನೆ ಮತ್ತು ನಾನು ಲಕ್ಷಾಂತರ ಜೀವಗಳನ್ನು ಉಳಿಸಿದ್ದೇನೆ.” ಎಂದು ಹೇಳಿದ್ದಾರೆ.
ಡುರಾಂಡ್ ರೇಖೆಯ ಉದ್ದಕ್ಕೂ ಹಲವಾರು ಪಾಕಿಸ್ತಾನಿ ಮಿಲಿಟರಿ ಪೋಸ್ಟ್‌ಗಳನ್ನು ವಶಪಡಿಸಿಕೊಂಡಿತು, ಹಾಗೂ ಪಾಕ್ ಸೈನಿಕರನ್ನು ಹತ್ಯೆ ಮಾಡಿದೆ. ಇದರ ನಡುವೆ ಪಾಕಿಸ್ತಾನ ಸರ್ಕಾರವು 48 ಗಂಟೆಗಳ ಕದನ ವಿರಾಮಕ್ಕೆ ಕರೆ ನೀಡಿತ್ತು. ಶುಕ್ರವಾರ ಕದನ ವಿರಾಮ ಮುಕ್ತಾಯಗೊಂಡ, ಇದೀಗ ಮತ್ತೆ ಪಾಕಿಸ್ತಾನಿ ಪಡೆಗಳು ಮತ್ತೊಮ್ಮೆ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿ, ಮೂವರು ಅಫ್ಘಾನ್ ಕ್ರಿಕೆಟಿಗರು ಸೇರಿದಂತೆ ಎಂಟು ಜನರನ್ನು ಹತ್ಯೆ ಮಾಡಿದೆ.
ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಕಾಬೂಲ್‌ನಲ್ಲಿ ವೈಮಾನಿಕ ದಾಳಿ ನಡೆಸಿದ ನಂತರ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಅಫ್ಘಾನಿಸ್ತಾನವು ಟಿಟಿಪಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ನಿರಂತರವಾಗಿ ಆರೋಪಿಸುತ್ತಿದೆ, ಆದರೆ ಈ ಆರೋಪವನ್ನು ಅಫ್ಘಾನಿಸ್ತಾನ ನಿರಾಕರಿಸಿದೆ. ಇನ್ನು ಪಾಕ್ ದಾಳಿಗೆ ಪ್ರತಿಯಾಗಿ ಅಫ್ಘಾನಿಸ್ತಾನ ಕೂಡ ದಾಳಿಯನ್ನು ನಡೆಸಿದೆ.















