ವಾಷಿಂಗ್ಟನ್ : ಭಾರತದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವರಿಗೆ ಸಿಕ್ಕಿದ ಭವ್ಯ ಸ್ವಾಗತಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಬೇಕೆಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ನಿವೃತ್ತ ಅಧಿಕಾರಿ ವ್ಯಂಗ್ಯ ಮಾಡಿದ್ದಾರೆ.
ಪೆಂಟಗನ್ ನಿವೃತ್ತ ಅಧಿಕಾರಿ ಮೈಕೆಲ್ ರೂಬಿನ್ ಭಾರತದ ಸುದ್ದಿ ಸಂಸ್ಥೆಯ ಜೊತೆ ಮಾತನಾಡಿ, ಭಾರತ ಮತ್ತು ರಷ್ಯಾವನ್ನು ಹತ್ತಿರಕ್ಕೆ ತಂದಿದ್ದಕ್ಕಾಗಿ ಟ್ರಂಪ್‌ಗೆ ನಾವು ಗೌರವ ನೀಡಬೇಕು. ಬೇರೆ ಕಡೆ ಸಿಗದಷ್ಟು ಗೌರವ ಪುಟಿನ್‌ಗೆ ಭಾರತ ನೀಡಿದೆ. ಈ ಗೌರವ ಸಿಗಲು ಕಾರಣರಾದ ಟ್ರಂಪ್ ಅವರ ಪಾತ್ರವನ್ನು ನಾವು ಕಡೆಗಣಿಸಬಾರದು ಎಂದು ಟಾಂಗ್ ನೀಡಿದ್ದಾರೆ.
ಪುಟಿನ್ ಅವರ ಭೇಟಿಯ ಸಮಯದಲ್ಲಿ ಸಹಿ ಹಾಕಲಾಗಿರುವ ಒಪ್ಪಂದಗಳು ಎರಡೂ ದೇಶಗಳಿಗೆ ಸಹಕಾರಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ರಂಪ್ ನಡೆಸಿಕೊಂಡ ರೀತಿಗೆ ಭಾರತ ಯಾವ ರೀತಿ ಅತೃಪ್ತಿ ವ್ಯಕ್ತಪಡಿಸಿದೆ ಎನ್ನುವುದನ್ನು ಈ ಒಪ್ಪಂದಗಳಿಂದ ತಿಳಿಯುತ್ತದೆ ಎಂದರು.
ಟ್ರಂಪ್ ಭಾರತಕ್ಕೆ ಉಪನ್ಯಾಸ ನೀಡುವುದನ್ನು ನಿಲ್ಲಿಸಬೇಕು. ಟ್ರಂಪ್ ಎಂದಿಗೂ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಭಾರತೀಯರು ಭಾರತದ ಹಿತಾಸಕ್ತಿಗಳನ್ನು ಪ್ರತಿನಿಧಿಸಲು ಪ್ರಧಾನಿ ಮೋದಿಯವರನ್ನು ಆಯ್ಕೆ ಮಾಡಿದ್ದಾರೆ ಎಂಬುದು ಅಮೆರಿಕನ್ನರಿಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.
ಭಾರತ ಅತ್ಯಂತ ಜನಸಂಖ್ಯೆ ಹೊಂದಿರುವ ದೇಶ. ಇದು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು ಅದಕ್ಕಾಗಿ ಅದಕ್ಕೆ ಇಂಧನ ಬೇಕು. ನಾವು ರಷ್ಯಾದಿಂದ ವಸ್ತುಗಳನ್ನು ಖರೀದಿಸುತ್ತಿರುವಾಗ ಭಾರತಕ್ಕೆ ಇಂಧನ ಖರೀದಿ ಮಾಡಬೇಡಿ ಎಂದು ಹೇಳುವುದು ಎಷ್ಟು ಸರಿ? ಈ ಬೂಟಾಟಿಕೆಯನ್ನು ನಾವು ಮೊದಲು ನಿಲ್ಲಿಸಬೇಕು. ಈ ಸಂದರ್ಭದಲ್ಲಿ ಉಪದೇಶ ನೀಡದೇ ನಾವು ಬಾಯಿ ಮುಚ್ಚುಕೊಳ್ಳುವುದು ಉತ್ತಮ ಎಂದು ಟ್ರಂಪ್ ವಿರುದ್ಧ ಕಿಡಿಕಾರಿದರು.















