ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಸರಿಯಾದ ವಾದ ಮಂಡಿಸದೆ ರೈತರಿಗೆ ಅನ್ಯಾಯ ಮಾಡಿದೆ. ರಾಜ್ಯದಿಂದ ಹಣ ಲೂಟಿ ಮಾಡಿ ದೆಹಲಿಗೆ ಕಳುಹಿಸುವುದರಲ್ಲೇ ಕಾಂಗ್ರೆಸ್ ನಾಯಕರು ನಿರತರಾಗಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಹರಿಹಾಯ್ದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಸರ್ಕಾರ ಪದೇ ಪದೆ ಎಡವುತ್ತಿದೆ. ಕಾವೇರಿ ಟ್ರಿಬ್ಯೂನಲ್ ಮತ್ತೆ ಎರಡೂವರೆ ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಲು ಆದೇಶಿಸಿದೆ. ಆದರೆ ಕಾಂಗ್ರೆಸ್ ಸರ್ಕಾರ ದುಡ್ಡು ಹೊಡೆಯಲು ಗಮನ ಕೊಡುತ್ತಿದೆಯೇ ಹೊರತು ನೀರುಳಿಸಲು ಗಮನ ನೀಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಾಧಿಕರಣದಲ್ಲಿ ಸರಿಯಾದ ವಾದ ಮಾಡಲು ವ್ಯವಸ್ಥೆ ಮಾಡುತ್ತಿಲ್ಲ. ಕಾವೇರಿ ನೀರಿನ ಬಗ್ಗೆ ಹಾಗೂ ರೈತರ ಬಗ್ಗೆ ಈ ಸರ್ಕಾರ ನಿರ್ಲಕ್ಷ್ಯ ತಾಳಿದೆ. ರೈತರು ಹೋರಾಟ ಮಾಡುತ್ತಿದ್ದರೂ, ಕಾಂಗ್ರೆಸ್ ನಾಯಕರು ದೆಹಲಿಗೆ ಎಷ್ಟು ಹಣ ಎಟಿಎಂನಲ್ಲಿ ಕಳುಹಿಸಬೇಕೆಂದು ಯೋಚನೆ ಮಾಡುತ್ತಿದ್ದಾರೆ. ಕಾವೇರಿ ನದಿ ಪ್ರದೇಶದ ಜನರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಸರ್ಕಾರ ಎಚ್ಚೆತ್ತುಕೊಂಡು ಸರಿಯಾದ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ವಿರೋಧ ಪಕ್ಷಗಳ ಸದಸ್ಯರ ಮೇಲೆ ಪ್ರಕರಣ ದಾಖಲಿಸುತ್ತಿದ್ದು, ಈಗ ಸರ್ಕಾರ ಶಾಸಕ ಹರೀಶ್ ಪೂಂಜಾ ಅವರನ್ನು ಬಂಧಿಸಲು ಮುಂದಾಗಿದೆ. ಇದನ್ನು ನಿಜಕ್ಕೂ ಖಂಡನಾರ್ಹ. ಇದು ಮುಂದುವರಿದರೆ ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯುವುದಿಲ್ಲ. ಶಾಸಕರ ಧ್ವನಿ ಅಡಗಿಸಲು ಮುಂದಾಗುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಕಾಂಗ್ರೆಸ್ ಶಾಸಕರು ಆವಾಜ್ ಹಾಕುವ, ಹಲ್ಲೆ ಮಾಡುವ ಎಷ್ಟೋ ಘಟನೆಗಳು ರಾಜ್ಯದಲ್ಲಿ ನಡೆದಿವೆ. ಇತ್ತೀಚೆಗೆ ಕೆಂಗೇರಿಯಲ್ಲಿ ಪೊಲೀಸ್ ಠಾಣೆಗೆ ಮೂರು ಜನರು ನುಗ್ಗಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗೆ ಕಪಾಳಕ್ಕೆ ಹೊಡೆದಿದ್ದಾರೆ. ಆದರೆ ಅವರನ್ನು ಬಂಧಿಸದೆ, ಇಲ್ಲಿ ಬೈದವರನ್ನು ಬಂಧಿಸಲು ಸರ್ಕಾರ ಮುಂದಾಗಿದೆ. ಇದು ಸರ್ಕಾರದ ದ್ವಿಮುಖ ನೀತಿ ಎಂದು ಟೀಕಿಸಿದರು.