ಈಶ್ವರನ ಪೂಜೆಗೆ ತುಂಬ ಶ್ರೇಷ್ಠವಾದದ್ದು ತುಂಬೆ ಹೂ. ಹಿಮಾಲಯದಿಂದ ಕನ್ಯಾಕುಮಾರಿ ಯವರೆಗೆ ಎಲ್ಲೆಡೆಯೂ ಬೆಳೆಯುತ್ತದೆ. ಬಿಳಿಯ ವರ್ಣದ ಹೂಗಳ ಪುಟ್ಟಗಿಡ ತುಂಬೆ.
ಸಸ್ಯವರ್ಣನೆ
ಲ್ಯೂಕಸ್ ಆಸ್ಪೆರಾ ಎಂಬ ವೈಜ್ಞಾನಿಕ ಹೆಸರುಳ್ಳ ಈ ಗಿಡವು ಲ್ಯಾಮಿಯೇಸಿ ಕುಟುಂಬಕ್ಕೆ ಸೇರಿದೆ. ಕಾಂಡವು ಮೃದುವಾಗಿದ್ದು, ಚಿಕ್ಕ ಗಿಡವಾಗಿ ಸಾಮಾನ್ಯವಾಗಿ ಮೂವತ್ತರಿಂದ ಅರವತ್ತು ಸೆಂ.ಮೀ. ಎತ್ತರ ಬೆಳೆಯುತ್ತದೆ. ಹಸಿರು ಬಣ್ಣದ ಎಲೆಗಳು, ಕಾಂಡದ ಮೇಲೆ ಅಭಿಮುಖವಾಗಿ ಜೋಡಣೆಗೊಂಡು ಎರಡರಿಂದ ಎರಡೂವರೆ ಅಂಗುಲ ಉದ್ದವಾಗಿ ಇರುತ್ತದೆ. ಇದರ ಕಾಂಡ ಹಾಗೂ ಎಲೆಗಳನ್ನು ತುಪ್ಪಳದಂಥ ಮೃದುರೋಮಗಳು ಅವರಿಸಿವೆ. ಹೂವು ಬಿಳಿಯ ಬಣ್ಣದಾಗಿದ್ದು ಮಧ್ಯಾರಂಭಿ ಮಾದರಿಯ ಹೂಗೊಂಚಲುಗಳಲ್ಲಿ ಎಲೆಯ ಕಂಕುಳಲ್ಲಿ ಇದೆ.
ಮಣ್ಣು
ಎಲ್ಲಾ ರೀತಿಯ ಮಣ್ಣಿನಲ್ಲಿ ಇದನ್ನು ಬೆಳೆಸಬಹುದು. ಬದುಗಳ ಮೇಲೆ ಕೃಷಿ ಪ್ರದೇಶದಲ್ಲಿ ಸಾಮಾನ್ಯವಾಗಿ ಎಲ್ಲಾ ಕಡೆ ಕಂಡುಬರುತ್ತದೆ. ಹಾಳುಬಿದ್ದ ಪ್ರದೇಶಗಳಲ್ಲಿ, ಗದ್ದೆಗಳಲ್ಲಿ, ರಸ್ತೆಯ ಇಬ್ಬದಿಗಳಲ್ಲಿ ಕಳೆಗಿಡವಾಗಿ ಬೆಳೆಯುತ್ತದೆ.
ಹವಾಗುಣ
ಎಲ್ಲಾ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಎಲ್ಲಾ ಋತುಗಳಲ್ಲಿ ಬೆಳೆಸಬಹುದು. ಸಮುದ್ರಮಟ್ಟ ದಿಂದ ಹಿಡಿದು 3000 ಅಡಿಗಳ ಎತ್ತರದವರೆಗಿನ ಎಲ್ಲಾ ಪ್ರದೇಶಗಳಲ್ಲಿಯೂ ಕಂಡುಬರುತ್ತದೆ.
ಸಸ್ಯಾಭಿವೃದ್ಧಿ
ಇದನ್ನು ಬೀಜದಿಂದ ಸಸ್ಯಾಭಿವೃದ್ಧಿ ಮಾಡಬಹುದು. ಬೀಜ ಬಿತ್ತಿ 12-15 ದಿನಗಳ ನಂತರ ಮೊಳಕೆಯೊಡೆಯುತ್ತದೆ. ಸಾಲಿನಿಂದ ಸಾಲಿಗೆ 30 ಸೆಂ.ಮೀ. ಮತ್ತು ಗಿಡದಿಂದ ಗಿಡಕ್ಕೆ 30 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು.
ಬೇಸಾಯ ಕ್ರಮಗಳು
ನಾಟಿ ಮಾಡಿದ ನಂತರದ ಮೊದಲ ವಾರದಲ್ಲಿ ಪ್ರತಿದಿನವೂ ನೀರು ಕೊಡುವುದು ಒಳ್ಳೆಯದು. ನಂತರದ ದಿನಗಳಲ್ಲಿ 5-6 ದಿನಕ್ಕೊಮ್ಮೆ ನೀರು ಕಟ್ಟಿದರೆ ಸಾಕು. ಸೆಪ್ಟೆಂಬರ್- ನವೆಂಬರ್ ಹೂ ಬಿಡುವ ಕಾಲ ಕೀಟಬಾಧೆಗೆ ಈ ಸಸ್ಯ ಈಡಾಗುವುದಿಲ್ಲ.
ಕೊಯ್ದು ಮತ್ತು ಇಳುವರಿ :
ಪ್ರತಿಗಿತವಿಂದ 500 ಗ್ರಾಂನಷ್ಟು ಎಲೆಯ ಇಳುವರಿಯನ್ನು ಪಡೆಯಬಹುದು ಹಾಗೂ ವರ್ಷದಲ್ಲಿ ಎರಡು ಸಾರಿಯ ಹೂವಿನ ಇಡುವರಿಯನ್ನು ಪಡೆಯಬಹುದು
ಉಪಯುಕ್ತ ಭಾಗಗಳು :
ಖಂಬೆಯಲ್ಲಿ ಬೇರು, ಕಾಂಡ, ಎಲೆ, ಹೂ, ಹಣ್ಣು ಎಲ್ಲವೂ ಔಷಧೀಯ ಗುಣ ಹೊಂದಿವೆ.
ರಾಸಾಯನಿಕ ಅಂಶಗಳು
ಲಾಬಲ್ಲೆನಿಕ್ ಆಮ್ಲ, ಬೀಟಾ ಸಿಟೊಸ್ಪಿರಾಲ್, ಟ್ರೈಕೊಸೈಡ್ ಇರುತ್ತವೆ.
ಔಷಧೀಯ ಗುಣಗಳು
★ ಜ್ವರದಿಂದ ಬಳಲುವವರಿಗೆ ತುಂಬೆಯ ಸೊಪ್ಪಿನ ರಸದೊಡನೆ ಒಂದು ಚಿಟಿಕೆ ಕಾಳು ಮೆಣಸಿನಪುಡಿ ಬೆರೆಸಿ ಕೊಡಬೇಕು.
★ ಕೆಮ್ಮು ಮತ್ತು ದಮ್ಮು ಇರುವವರು ತುಂಬೆಯ ಗಿಡವನ್ನು ತೊಳೆದು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಕುಡಿಯಬೇಕು.
★ ದೇಹದ ಯಾವುದೇ ಭಾಗದಲ್ಲಿ ಊತವಿರುವಾಗ ತುಂಬೆ ಸೊಪ್ಪಿನ ಕಷಾಯದಿಂದ ಶಾಖ ಕೊಡಬೇಕು.
★ಅಜೀರ್ಣ ಮತ್ತು ಅರುಚಿಯಿರುವಾಗ ತುಂಬೆಯ (ಸಮಗ್ರ ಗಿಡ) ಕಷಾಯ ತಯಾರಿಸಿ ಸೈಂಧವಲವಣ ಬೆರೆಸಿ ಕುಡಿಯಬೇಕು.
★ಚಿಕ್ಕಮಕ್ಕಳಲ್ಲಿ ಹೊಟ್ಟೆನೋವಿನ ತೊಂದರೆಯಿದ್ದಲ್ಲಿ ಆರು ಹನಿ ತುಂಬೆಯ ಹೂವಿನ ರಸವನ್ನು ಉತ್ತತ್ತಿ (ಒಣಖರ್ಜೂರ) ಯ ಪುಡಿಯೊಡನೆ ಬೆರೆಸಿ ತಿನ್ನಿಸಬೇಕು.
★ಮುಟ್ಟು ನಿಯಮಿತವಾಗಿ ಆಗದಿದ್ದಲ್ಲಿ ಸ್ತ್ರೀಯರು ತುಂಬೆ ಹೂವಿನ ರಸವನ್ನು ದಿನಕ್ಕೆರಡು ಬಾರಿ ನಾಲ್ಕು ಚಮಚೆಯಷ್ಟನ್ನು ಖಾಲಿಹೊಟ್ಟೆಗೆ ಕುಡಿಯಬೇಕು.
★ನೆಗಡಿ, ತಲೆನೋವು, ಹಾವು ಕಡಿತದಲ್ಲಿ ಹೂವಿನ ರಸ ನಸ್ಯವಾಗಿ ಬಳಸಬೇಕು.
★ಕಜ್ಜಿ ಮತ್ತು ಹಾವು ಕಡಿತದಲ್ಲಿ ತುಂಬೆ ಎಲೆಯನ್ನು ಜಜ್ಜಿ ಲೇಪಿಸಬೇಕು.
ಇತರ ಭಾಷೆಗಳಲ್ಲಿ
ಸಂಸ್ಕೃತ – ದ್ರೋಣಪುಷ್ಟಿ,ಚಿತ್ರಕುಪ
ಹಿಂದಿ – ಗೊಮಾ ಮಧುಪತಿ, ಚೋಟಾ ಕಾಲ್ಕಶಾ
ಮರಾಠಿ – ತುಂಬಾ
ತೆಲುಗು – ತುಮ್ಮಿ, ತಂಮ್ಮ ಚೆಟ್ಟು
ತಮಿಳು – ತುಂಬೈ ಕೀರೆ, ತುಂಬಿರಿ,ಥುಂಬಾಯಿ
ಮಲಯಾಳಂ -ಥುಂಬಾ