ಔಷಧೀಯ ಗುಣಗಳನ್ನು ಒಳಗೊಂಡಿರುವ ಅರಿಶಿನದ ಪಾತ್ರವನ್ನು ಆರೋಗ್ಯದ ವಿಷಯದಲ್ಲಿ ಮರೆಯುವ ಹಾಗಿಲ್ಲ.
ಅರಿಶಿನ ಮೈಕೈ ನೋವು, ಕೀಲು ನೋವು, ಮಂಡಿ ನೋವಿನಂತಹ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಹಾಯಕ್ಕೆ ಬರುತ್ತದೆ.
ಮೈ-ಕೈ ನೋವು ಎಂದು ನೋವು ನಿವಾರಕ ಮಾತ್ರೆಗಳು ಅಥವಾ ನೋವು ನಿವಾರಕ ಆಯಿಂಟ್‌ಮೆಂಟ್ ಬಳಸದೆ ಒಮ್ಮೆ ಅರಶಿನವನ್ನು ಬಳಸಿ.
ನೈಸರ್ಗಿಕವಾಗಿ ಮೈಕೈ ನೋವು ನಿವಾರಣೆ ಮಾಡುವಲ್ಲಿ ಅರಿಶಿನವನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಅರಿಶಿನದ ಹಾಲು
ಅರಿಶಿನ ಹಾಲು ಅಂದರೆ ಹಾಲಿಗೆ ಚಿಟಿಕೆಯಷ್ಟು ಅರಿಶಿನ ಸೇರಿಸಿ ಕುಡಿಯುವ ರೂಢಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮೊದಲಿನಿಂದಲೂ ಇದೆ. ಹಾಲಿಗೆ ಅರಿಶಿನ ಸೇರಿಸಿ ಕುಡಿಯುವುದರಿಂದ, ಆರೋಗ್ಯ ವೃದ್ಧಿಯಾಗುವುದು ಮಾತ್ರವಲ್ಲದೆ, ಅನೇಕ ಆರೋಗ್ಯ ಸಮಸ್ಯೆಗಳು ಕೂಡ ದೂರವಾಗುತ್ತದೆ. ಅದರಲ್ಲೂ ಈ ಹಾಲಿನಲ್ಲಿ ಉರಿಯೂತವನ್ನು ಪರಿಹಾರ ಮಾಡುವ ಎಲ್ಲಾ ಗುಣಲಕ್ಷಣಗಳು ಕೂಡ ಸಿಗುವುದರಿಂದ, ಮೈಕೈ ನೋವಿನ ಸಮಸ್ಯೆಗೆ ಬಹಳ ಬೇಗನೇ ಪರಿಹಾರ ಒದಗಿಸುತ್ತದೆ.
ಅರಿಶಿನ ಶುಂಠಿ ಮತ್ತು ಜೇನುತುಪ್ಪ
ಅರಿಶಿನ ಹಾಗೂ ಶುಂಠಿ ಇವೆರಡೂ ಕೂಡ ತನ್ನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳ ಜೊತೆಗೆ ನೋವು ನಿವಾರಕ ಗುಣಲಕ್ಷಣಗಳನ್ನು ಅಧಿಕ ಪ್ರಮಾಣದಲ್ಲಿ ಒಳಗೊಂಡಿದೆ. ಅಷ್ಟೇ ಅಲ್ಲದೆ ಇದರಲ್ಲಿಆಂಟಿ ಆಕ್ಸಿಡೆಂಟ್ ಅಂಶಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.
ಇನ್ನು ಜೇನು ತುಪ್ಪದಲ್ಲಿ ಕೂಡ ಅಷ್ಟೇ, ತನ್ನಲ್ಲಿ ಯಥೇಚ್ಛವಾಗಿ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಡಿರುವ ಕಾರಣದಿಂದಾಗಿ ಕೈ ಕಾಲುಗಳ ಸೆಳೆತ ಇಲ್ಲಾಂದ್ರೆ ಮೈಕೈ ನೋವು ಸಮಸ್ಯೆಯನ್ನು ದೂರ ಮಾಡುವಲ್ಲಿ ಈ ಮೂರು ನೈಸರ್ಗಿಕ ಪದಾರ್ಥಗಳು ನೆರವಿಗೆ ಬರುತ್ತದೆ.
ಹೀಗೆ ಮಾಡಿ: ಮೊದಲಿಗೆ 2 ಕಪ್ ಆಗುವಷ್ಟು ನೀರನ್ನು ಬಿಸಿಮಾಡಿಕೊಂಡು ಅದಕ್ಕೆ 1 ಟೀ ಚಮಚ ಅರಿಶಿನ ಪುಡಿ ಮತ್ತು ಸಣ್ಣ ತುಂಡು ಶುಂಠಿಯನ್ನು ಜಜ್ಜಿ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಒಂದು ವೇಳೆ, ನಿಮ್ಮಲ್ಲಿ ಅರಿಶಿನದ ಹಸಿ ಕೊಂಬು ಇದ್ದರೆ, ಸಣ್ಣ ತುಂಡನ್ನು ಈ ಕುದಿಯುವ ನೀರಿಗೆ ಹಾಕಿಕೊಳ್ಳಬಹುದು.
ಒಮ್ಮೆ ಈ ಪಾನೀಯ ಚೆನ್ನಾಗಿ ಕುದಿದ ಬಳಿಕ, ಗ್ಯಾಸ್ ಒಲೆ ಆಫ್ ಮಾಡಿ, ಇದನ್ನು ಇನ್ನೊಂದು ಲೋಟಕ್ಕೆ ಸೋಸಿಕೊಳ್ಳಿ. ಬಳಿಕ ಇದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ, ಪ್ರತಿ ದಿನ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಅರಿಶಿನ ಮತ್ತು ತೆಂಗಿನ ಎಣ್ಣೆ
ಚಿನ್ನದ ರಾಣಿ ಎಂದೇ ಕರೆಯಲಾಗುವ ಈ ಅರಿಶಿನದಲ್ಲಿ ಕರ್ಕ್ಯೂಮಿನ್ ಎನ್ನುವ ಆರೋಗ್ಯಕಾರಿ ಅಂಶವು ಯಥೇಚ್ಛವಾಗಿ ಕಂಡು ಬರುವುದರಿಂದ, ಇವು ಮಾರಕ ರೋಗಗಳ ವಿರುದ್ಧ ಹೋರಾಡುವುದರ ಜೊತೆಗೆ, ಸಣ್ಣ-ಪುಟ್ಟ ಸಮಸ್ಯೆಗಳಿಂದ ಕೂಡ ನಮ್ಮನ್ನೂ ದೂರವಿರಿಸುತ್ತದೆ.
ಇನ್ನು ತೆಂಗಿನ ಎಣ್ಣೆಯ ಬಗ್ಗೆ ನಿಮಗೆ ಗೊತ್ತೇ ಇದೆ. ಹೀಗಾಗಿ ಇವೆರಡನ್ನೂ ಕೂಡ ಮಿಶ್ರಣಮಾಡಿ, ಮನೆಮದ್ದು ರೀತಿ ನೋವು ಕಂಡು ಬರುವ ಅನ್ವಯಿಸುತ್ತಾ ಬಂದರೆ, ಮೈಕೈ ನೋವು, ಕೀಲು ನೋವು, ಮಂಡಿ ನೋವಿನಂತಹ ಸಮಸ್ಯೆಗಳು ದೂರವಾಗುತ್ತದೆ.
ಹೀಗೆ ಮಾಡಿ
ಒಂದು ಟೀಚಮಚ ಅರಿಶಿನ ಪುಡಿಗೆ, ಇಷ್ಟೇ ಪ್ರಮಾಣದಲ್ಲಿ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ, ದಪ್ಪಗೆ ಪೇಸ್ಟ್ ರೀತಿ ರೆಡಿ ಮಾಡಿಕೊಂಡು, ನೋವು ಕಂಡುಬರುತ್ತಿರುವ, ನಿಮ್ಮ ಕೀಲುಗಳ ಭಾಗದಲ್ಲಿ ಅನ್ವಯಿಸಿ. ಆಮೇಲೆ ಒಂದು ಗಂಟೆ ಬಿಟ್ಟು ಆನಂತರ ನೀರಿನಲ್ಲಿ ಸ್ವಚ್ಛ ಮಾಡಿಕೊಳ್ಳಬೇಕು.