ಮಂಗಳೂರು(ದಕ್ಷಿಣ ಕನ್ನಡ): ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ನಾವೂರ ಗ್ರಾಮದ ನೀರಕಟ್ಟೆ ಎಂಬಲ್ಲಿ ನಡೆದಿದೆ. ಅಶ್ರಾ ಹಾಗೂ ಮರಿಯಮ್ ನಾಶಿಯಾ (14) ಮೃತ ಬಾಲಕಿಯರು.
ಮೂಲತಃ ನಾವೂರ ನಿವಾಸಿಯಾದ ಇಲ್ಯಾಸ್ ಅವರು ಇತ್ತೀಚಿಗೆ ಉಳ್ಳಾಲದಲ್ಲಿ ಮನೆ ಕಟ್ಟಿದ್ದರು. ರವಿವಾರ ನಾವೂರ ಮೈಂದಾಳದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಸಂಜೆ ವೇಳೆ ಮನೆಯವರ ಜೊತೆಗೆ ನಾವೂರದ ನೀರಕಟ್ಟೆ ಎಂಬಲ್ಲಿ ನೇತ್ರಾವತಿ ನದಿಗೆ ತೆರಳಿದ್ದು, ಮನೆಯವರ ಮುಂದೆ ಮಕ್ಕಳು ನೀರಿನಲ್ಲಿ ಆಟ ಆಡುತ್ತಾ ಇದ್ದರು. ಮನೆಯವರ ಮುಂದೆಯೇ ಈ ಎರಡು ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ. ನೀರಿನಲ್ಲಿ ಮುಳುಗುವುದನ್ನು ಕಣ್ಣಾರೆ ಕಂಡರೂ ಈಜು ಬಾರದ ಕಾರಣ ಮಕ್ಕಳನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎಂಬ ಕೂಗು ಕೇಳಿ ಬಂದಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.