ಬೀಜಿಂಗ್ : ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಜೊತೆಯಾಗಿ ಔರಸ್ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಚೀನಾದ ಟಿಯಾಂಜಿನ್‌ನಲ್ಲಿ ಶಾಂಘೈ ಸಹಕಾರ ಶೃಂಗಸಭೆ ನಡೆದ ಸ್ಥಳದಿಂದ ದ್ವಿಪಕ್ಷೀಯ ಮಾತುಕತೆ ನಡೆಯುವ ಸ್ಥಳಕ್ಕೆ ಇಬ್ಬರು ನಾಯಕರು ಜೊತೆಯಾಗಿ ಕಾರಿನಲ್ಲಿ ಪ್ರಯಾಣ ಬೆಳೆಸಿದರು.
ಪ್ರಯಾಣದ ಫೋಟೋವನ್ನು ಎಕ್ಸ್‌ನಲ್ಲಿ ಪ್ರಕಟಿಸಿದ ಮೋದಿ, ಶೃಂಗಸಭೆಯ ನಡೆದ ಸ್ಥಳದಿಂದ ನಮ್ಮ ದ್ವಿಪಕ್ಷೀಯ ಸಭೆ ನಡೆಯುವ ಜಾಗಕ್ಕೆ ಒಟ್ಟಿಗೆ ಪ್ರಯಾಣಿಸಿದೆವು. ಪುಟಿನ್ ಜೊತೆಗಿನ ಸಂಭಾಷಣೆಗಳು ಯಾವಾಗಲೂ ಒಳನೋಟದಿಂದ ಇರುತ್ತದೆ ಎಂದು ಬರೆದುಕೊಂಡಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಚೀನಾದ ರಾಜತಾಂತ್ರಿಕ ಪರವಾನಗಿ ಫಲಕಗಳನ್ನು ಹೊಂದಿರುವ ತಮ್ಮ ಅಧ್ಯಕ್ಷೀಯ ʼಔರಸ್ʼ ಕಾರನ್ನು ಬಳಸುತ್ತಿದ್ದಾರೆ. ಔರಸ್ ರಷ್ಯಾದ ವಾಹನ ತಯಾರಕ ಔರಸ್ ಮೋಟಾರ್ಸ್ ತಯಾರಿಸಿದ ರೆಟ್ರೋ-ಶೈಲಿಯ ಐಷಾರಾಮಿ ವಾಹನವಾಗಿದೆ.
ಪುಟಿನ್ ಮತ್ತು ಮೋದಿ ಜೊತೆಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಬ್ರಿಕ್ಸ್ ಶೃಂಗಸಭೆ ಮೋದಿ ರಷ್ಯಾಗೆ ಭೇಟಿ ನೀಡಿದಾಗಲೂ ಇಬ್ಬರು ನಾಯಕರು ಜೊತೆಯಾಗಿ ಕಾರಿನಲ್ಲಿ ಪ್ರಯಾಣಿಸಿದ್ದರು ಎನ್ನಲಾಗಿದೆ.















