ಬೆಂಗಳೂರು: ಅಪಾರ್ಟ್‌ಮೆಂಟ್‌ನ ಬೇಸ್ಮೆಂಟ್ ನಲ್ಲಿ ನಿಂತಿದ್ದ ಮಳೆಯ ನೀರನ್ನು ಮೋಟಾರ್‌ನಿಂದ ತೆರವು ಮಾಡಲು ಹೋಗಿ ಎಲೆಕ್ಟ್ರಿಕ್ ಶಾಕ್ ತಗುಲಿ 9 ವರ್ಷದ ಬಾಲಕ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ನಡೆದಿದೆ.
ಘಟನೆಯಲ್ಲಿ ಮನಮೋಹನ್ ಕಾಮತ್ (63), ದಿನೇಶ್ (12) ಮೃತ ದುರ್ದೈವಿಗಳು. ಇವರು ಬಿಟಿಎಂ 2ನೇ ಹಂತದಲ್ಲಿರುವ ಎನ್.ಎಸ್ ಪಾಳ್ಯದಲ್ಲಿರುವ ಮಧುವನ ಅಪಾರ್ಟ್ಮೆಂಟ್ ನಿವಾಸಿಗಳು.
ಇಂದು ಸಂಜೆ 6:15 ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್‌ನ ಬೇಸ್ಮೆಂಟ್ ನಲ್ಲಿ ನಿಂತಿದ್ದ ನೀರನ್ನು ಮೋಟಾರ್ ಮೂಲಕ ಹೊರಹಾಕಲು ಮುಂದಾಗಿದ್ದರು. ಹೊರಗಡೆಯಿಂದ ಮೋಟಾರ್ ತಂದು ಸ್ವಿಚ್‌ಗೆ ಕನೆಕ್ಷನ್ ನೀಡಿ ನೀರನ್ನು ಹೊರ ತೆಗೆಯುವಾಗ ಶಾರ್ಟ್ ಸರ್ಕ್ಯೂಟ್‌ನಿಂದ ಕರೆಂಟ್ ತಗುಲಿ ಮನಮೋಹನ್ ಕಾಮತ್ ಮೃತಪಟ್ಟಿದ್ದಾರೆ. ಇದರೊಂದಿಗೆ ಅದೇ ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ಭರತ್ ಎಂಬವರ ಮಗ ದಿನೇಶ್‌ಗೂ ಕರೆಂಟ್ ಶಾಕ್ ತಗುಲಿ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಮೈಕೋ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವಗಳು ಸೇಂಟ್ ಜಾನ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಮಧುವನ ಅಪಾರ್ಟ್ಮೆಂಟ್ಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ.














