ಮಂಡ್ಯ: ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಜಿಲ್ಲಾ ಹಾಲು ಒಕ್ಕೂಟದಿಂದ ನಂದಿನಿ ಪನ್ನೀರ್ ನಿಪ್ಪಟ್ಟು ಹಾಗೂ ನಂದಿನಿ ಸ್ಪೆಷಲ್ ಹಾಲಿನ ಬರ್ಫಿ ಎಂಬ ಎರಡು ನೂತನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
ಗೆಜ್ಜಲಗೆರೆಯಲ್ಲಿರುವ ಮನ್ ಮುಲ್ ಡಾ.ವರ್ಗೀಸ್ ಕುರಿಯನ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಬಿ.ಬೋರೇಗೌಡ ನೂತನ ಉತ್ಪನ್ನವನ್ನು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು ಮಂಡ್ಯ ಹಾಲು ಒಕ್ಕೂಟದಿಂದ ಹೊಸ ಉತ್ಪನ್ನ ಮಾರುಕಟ್ಟೆಗೆ ಬರುತ್ತಿದೆ.ಈಗಾಗಲೇ ನಂದಿನಿ ತುಪ್ಪ ಸಾಕಷ್ಟು ಪ್ರಮಾಣದಲ್ಲಿ ಖರೀದಿಯಾಗುತ್ತಿವೆ.ಇದು ಕೂಡ ಹಾಗೇಯೆ ಖರೀದಿಯಾಗಿ ಜನಮನ್ನಣೆ ಗಳಿಸಲಿದೆ ಎಂಬ ವಿಶ್ವಾಸವಿದೆ ಎಂದರು.
ಮನ್ ಮುಲ್ ನಿಂದ ಇನ್ನು ಹೊಸ ಹೊಸ ರೀತಿಯಲ್ಲಿ ಉತ್ಪನ್ನ ಕೊಡುತ್ತೇವೆ.ಹೊಸ ಉತ್ಪನ್ನ ತಯಾರಿಕೆಯಿಂದ ಮನ್ ಮುಲ್ ಗೆ ಮತ್ತಷ್ಟು ಆದಾಯ ಬರಲು ಸಾಧ್ಯವಾಗಿದೆ.ಸಾರ್ವಜನಿಕರು ಮನ್ ಮುಲ್ ಪ್ರಾಡಕ್ಟ್ ಗಳನ್ನು ಮತ್ತಷ್ಟು ಖರೀದಿಸಿ ಸಹಕರಿಸುವಂತೆ ಮನವಿ ಮಾಡಿದರು.
ಮನ್ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಆರ್.ಮಂಜೇಶ್ ಮಾತನಾಡಿ, ಉತ್ಕೃಷ್ಟ ದರ್ಜೆಯ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸುವ ನಂದಿನಿ ಸಂಸ್ಥೆಯು ದೇಶದ ಹಾಲು ಬಳಕೆದಾರರ ಹೆಮ್ಮೆಯ ಸಂಸ್ಥೆಯಾಗಿದ್ದು,ಇದರ ಅಧೀನ ಸಂಸ್ಥೆಯಾಗಿರುವ ಮನ್ ಮುಲ್ ತನ್ನ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡುವ ಯೋಜನೆ ಹೊಂದಿದೆ ಎಂದರು.
ನಂದಿನಿ ಉತ್ಪನ್ನಗಳಿಗೆ ರಾಜ್ಯ, ಅಂತರರಾಜ್ಯ ಹಾಗೂ ವಿದೇಶಗಳಲ್ಲೂ ಗ್ರಾಹಕರಿದ್ದು, ನಮ್ಮ ನೂತನ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವ ಉದ್ದೇಶದಿಂದ ಮಾನ್ಯತೆ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ ಎಂದರು.
ರಾಜ್ಯದಲ್ಲಿ ಅತೀ ಹೆಚ್ಚು ಹಾಲು ಉತ್ಪಾದಿಸುವ ಮನ್ ಮುಲ್ ಭವಿಷ್ಯದಲ್ಲಿ ಮತ್ತಷ್ಟು ಉತ್ಪನ್ನಗಳನ್ನು ತಯಾರಿಸುವ ಮೂಲಕ ವಿದೇಶಿ ಮಾರುಕಟ್ಟೆ ಪ್ರವೇಶಿಸಲಿದೆ,ಕಳೆದ ಸಾಲಿನಲ್ಲಿ 1,553 ಕೋಟಿ ರೂ. ವಹಿವಾಟು ನಡೆಸಿರುವ ನಮ್ಮ ಸಂಸ್ಥೆಯ ಪ್ರಸಕ್ತ ಸಾಲಿನಲ್ಲಿ 2,000 ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಲಾಗಿದ್ದು, ಇಂದು ಬಿಡುಗಡೆಗೊಳಿಸಿರುವ ನೂತನ ಉತ್ಪನ್ನಗಳಾದ ನಂದಿನಿ ಪನ್ನೀರ್ ನಿಪ್ಪಟ್ಟು ಹಾಗೂ ನಂದಿನಿ ಸ್ಪೆಷಲ್ ಬರ್ಫಿಗಳನ್ನು ಖರೀದಿಸುವ ಮೂಲಕ ಗ್ರಾಹಕರು ಸಂಸ್ಥೆಯ ಬಲವರ್ಧನೆಗೆ ಸಹಕಾರಿಯಾಗಬೇಕೆಂದು ಕರೆ ನೀಡಿದರು.
ಮುಂದಿನ ದಿನಗಳಲ್ಲಿ ಕೋವಾ ಹಾಗೂ ಬೆಳ್ಳುಳ್ಳಿ, ವೀಳ್ಯದೆಲೆ ಹಾಗೂ ಒಗ್ಗರಣೆ ಬಳಸಿ ತಯಾರಿಸುವ ದೇಶಿ ಮಾದರಿ ತುಪ್ಪ ತಯಾರಿಕೆ ಸಂಸ್ಥೆ ಮುಂದಾಗಲಿದ್ದು, ಗ್ರಾಹಕರಿಗೆ ಪರಿಪೂರ್ಣ ನೈಜ್ಯತೆಯ ಉತ್ಪನ್ನಗಳನ್ನು ಪೂರೈಸುವ ಗುರಿ ನಮ್ಮದಾಗಿದೆ ಎಂದರು.
ಹಾಲು ಒಕ್ಕೂಟದ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಮಾತನಾಡಿ ರಾಜ್ಯ ಹಾಗೂ ದೇಶದಲ್ಲಿ 140 ಬಗೆಯ ನಂದಿನಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಗ್ರಾಹಕರ ಬೇಡಿಕೆಗೆ ಅಗತ್ಯವಾಗಿ ಸ್ವಾದಕರ ಹಾಗೂ ಆರೋಗ್ಯಕರ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಪೂರೈಸಲಾಗುವುದು ಎಂದು ತಿಳಿಸಿದರು.