ಜೈಪುರ (Jaipur): ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಅವರ ಭೀಕರ ಹತ್ಯೆಯ ಇಬ್ಬರು ಆರೋಪಿಗಳಲ್ಲಿ ಒಬ್ಬನಿಗೆ ಪಾಕಿಸ್ತಾನದ ನಂಟಿದೆ.
ಇಬ್ಬರು ಪ್ರಮುಖ ಆರೋಪಿಗಳಲ್ಲಿ ಒಬ್ಬ ಪಾಕಿಸ್ತಾನ ಮೂಲದ ದಾವತ್-ಎ-ಇಸ್ಲಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನೆ ಮತ್ತು ಈತ 2014 ರಲ್ಲಿ ಕರಾಚಿಗೆ ಭೇಟಿ ನೀಡಿದ್ದನೆಂದು ರಾಜಸ್ತಾನ ಪೊಲೀಸ್ ಮಹಾನಿರ್ದೇಶಕ ಎಂ.ಎಲ್.ಲಾಥರ್ ತಿಳಿಸಿದ್ದಾರೆ.
ಹತ್ಯೆಗೆ ಸಂಬಂಧಿಸಿದಂತೆ ಇನ್ನೂ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕನ್ಹಯ್ಯಾ ಲಾಲ್ ಅವರ ಹತ್ಯೆ ಆರೋಪವನ್ನು ರಿಯಾಜ್ ಅಖ್ತರಿ ಮತ್ತು ಘೌಸ್ ಮಹಮ್ಮದ್ ಎದುರಿಸುತ್ತಿದ್ದಾರೆ.
ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಪ್ರಕಟಿಸಿದ್ದಕ್ಕಾಗಿ (ಮಂಗಳವಾರ) ಟೈಲರ್ ಕನ್ಹಯ್ಯ ಲಾಲ್ ಅವರ ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿತ್ತು. ಈ ಅಮಾನವೀಯ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹರಿಬಿಡಲಾಗಿತ್ತು.