ಮೈಸೂರು:ಕೊರೊನಾ ಕಾರಣದಿಂದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಸಂಶೋಧನಾ ಕಾರ್ಯಗಳಿಗೆ ಅನುದಾನ ನೀಡುವಂತೆ ಮೈಸೂರು ವಿಶ್ವವಿದ್ಯಾನಿಲಯವು ಯುಜಿಸಿಯನ್ನು ಮನವಿ ಮಾಡಿದೆ.
ಬುಧವಾರ ದೆಹಲಿಯಲ್ಲಿ ಯುಜಿಸಿ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಸಂಶೋಧನೆಗಾಗಿ ಹೆಚ್ಚಿನ ಅನುದಾನ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಪ್ರೊ.ಜಿ.ಹೇಮಂತ್ ಕುಮಾರ್ ಅವರು, ಕೊರೊನಾ ಪರಿಸ್ಥಿತಿಯಿಂದಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಶೋಧನೆ ಚಟುವಟಿಕೆಗಳಿಗೆ ಹಣಕಾಸಿನ ಕೊರತೆ ಎದುರಾಗಿದೆ. ಉನ್ನತ ಶಿಕ್ಷಣದ ಅಧ್ಯಯನ, ಸಂಶೋಧನಾ ಕಾರ್ಯಕ್ರಮಗಳಿಗೆ ಅನುದಾನ ಇಲ್ಲವಾಗಿದೆ. ಸದ್ಯ ಲಭ್ಯವಿರುವ ಸಂಪನ್ಮೂಲವು ವಿಶ್ವವಿದ್ಯಾನಿಲಯದ ನಿರ್ವಹಣೆಗೆ ಖರ್ಚಾಗುತ್ತಿದ್ದು, ಸಂಶೋಧನಾಗೆ ಯಾವುದೇ ಪ್ರತ್ಯೇಕ ಅನುದಾನ ಇಲ್ಲ ಎಂಬುದನ್ನು ಯುಜಿಸಿ ಮುಖ್ಯಸ್ಥರಿಗೆ ವಿವರಿಸಿದ್ದೇನೆ,’’ ಎಂದು ಹೇಳಿದರು.
ರಾಜ್ಯ ಸರಕಾರ ಸಂಶೋಧನಾ ಉದ್ದೇಶಕ್ಕೆ ಅನುದಾನ ನೀಡುವುದಿಲ್ಲ. ಯುಜಿಸಿಯೂ ಸಹ ಕಳೆದ ಹಲವು ವರ್ಷಗಳಿಂದ ಅನುದಾನ ಕಡಿತಗೊಳಿಸಿರುವುದರಿಂದ ವೈಜ್ಞಾನಿಕ ವಿಷಯಗಳ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಈ ಹಿಂದೆ ಪ್ರೊ.ತಳವಾರ ಅವರು ಕುಲಪತಿಗಳಾಗಿದ್ದ ಅವಧಿಯಲ್ಲಿ 150 ಕೋಟಿ ರೂ. ಅನ್ನು ಯುಜಿಸಿ ಅನುದಾನ ನೀಡಿತ್ತು. ಅದರಲ್ಲಿ ಶೇ.55ರಷ್ಟನ್ನು ಸಂಶೋಧನಾ ಕಾರ್ಯಕ್ಕೆ ಹಾಗೂ ಶೇ.45ರಷ್ಟು ಹಣವನ್ನು ಕಟ್ಟಡ ಮತ್ತು ಮೂಲ ಸೌಕರ್ಯ ಕಲ್ಪಿಸಲು ಬಳಸಿಕೊಳ್ಳಲಾಗಿತ್ತು ಎಂದೂ ಪ್ರೊ ಹೇಮಂತ್ ಕುಮಾರ್ ವಿವರಿಸಿದ್ದಾರೆ.