ಮನೆ ಅಪರಾಧ ಯುಜಿಸಿ ನೆಟ್‌ ಪರೀಕ್ಷೆ ರದ್ದು: ಪ್ರಕರಣದ ತನಿಖೆ ಸಿಬಿಐಗೆ ಹಸ್ತಾಂತರ

ಯುಜಿಸಿ ನೆಟ್‌ ಪರೀಕ್ಷೆ ರದ್ದು: ಪ್ರಕರಣದ ತನಿಖೆ ಸಿಬಿಐಗೆ ಹಸ್ತಾಂತರ

0

ನವದೆಹಲಿ : ಪರೀಕ್ಷಾ ಅಕ್ರಮದಿಂದಾಗಿ ವೈದ್ಯಕೀಯ ಪ್ರವೇಶದ ನೀಟ್‌ ವಿರುದ್ಧ ದೇಶದಾದ್ಯಂತ ವ್ಯಾಪಕ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಯುಜಿಸಿಯ ರಾಷ್ಟ್ರೀಯ ಅರ್ಹತಾ ಪರೀಕ್ಷೆಗೂ (ಎನ್‌ಇಟಿ) ಈ ಕಳಂಕ ತಗುಲಿದೆ. ಮಂಗಳವಾರವಷ್ಟೇ ನಡೆದಿದ್ದ ಈ ಪರೀಕ್ಷೆಯನ್ನು ಅಕ್ರಮಗಳು ನಡೆದಿರುವ ಕಾರಣಕ್ಕೆ ರದ್ದುಪಡಿಸಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ.

Join Our Whatsapp Group

ಪರೀಕ್ಷೆಯ ಪಾರದರ್ಶಕತೆಗೆ ಧಕ್ಕೆಯುಂಟಾಗಿರಬಹುದೆಂಬ ಮಾಹಿತಿಗಳು ಲಭಿಸಿರುವುದರಿಂದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ನಡೆಸಿದ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಶಿಕ್ಷಣ ಸಚಿವಾಲಯ ಬುಧವಾರ ಆದೇಶಿಸಿದೆ‌.

ಹೊಸದಾಗಿ ಪರೀಕ್ಷೆ ನಡೆಸಲು ನಿರ್ಧರಿಸಿದ್ದು, ಇದರ ಮಾಹಿತಿಯನ್ನು ಪ್ರತ್ಯೇಕವಾಗಿ ಹಂಚಿಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ಅಕ್ರಮಗಳು ನಡೆದಿರುವುದು ಭಾರಿ ಕೋಲಾಹಲ ಉಂಟುಮಾಡಿ, ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವಾಲಯವು ‘ಯುಜಿಸಿ ನೆಟ್‌’ ಪರೀಕ್ಷೆಯನ್ನು ರದ್ದುಪಡಿಸಿದೆ.

ಹಿಂದಿನ ಪರೀಕ್ಷಾ ವಿಧಾನವನ್ನು ಈ ಬಾರಿ ಬದಲಿಸಿ, ಪೆನ್ ಮತ್ತು ಪೇಪರ್ ಬಳಕೆಯ ಒಎಂಆರ್‌ ವಿಧಾನದಲ್ಲಿ ಪರೀಕ್ಷೆಯನ್ನು ಒಂದೇ ದಿನದಲ್ಲಿ ಎರಡು ಪಾಳಿಯಲ್ಲಿ ನಡೆಸಲಾಗಿತ್ತು. ದೇಶದಾದ್ಯಂತ 9 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 11 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದರು.

ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (ಐ4‌ಸಿ) ನ್ಯಾಷನಲ್‌ ಸೈಬರ್ ಕ್ರೈಮ್ ಥ್ರೆಟ್ ಅನಾಲಿಟಿಕ್ಸ್ ಯೂನಿಟ್‌ನಿಂದ, ಪರೀಕ್ಷೆಯಲ್ಲಿ ಕೆಲವು ಅಕ್ರಮಗಳು ನಡೆದಿರುವ ಬಗ್ಗೆ ಯುಜಿಸಿಗೆ ಮಾಹಿತಿ ಲಭಿಸಿದೆ. ಪರೀಕ್ಷೆಯ ಪಾರದರ್ಶಕತೆ ಮತ್ತು ಸಮಗ್ರತೆಗೆ ಈ ಅಕ್ರಮಗಳಿಂದ ಧಕ್ಕೆ ಉಂಟಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಮತ್ತು ಜೂನಿಯರ್ ರಿಸರ್ಚ್‌ ಫೆಲೋಶಿಪ್‌ಗೆ (ಜೆಆರ್‌ಎಫ್‌) ಹಾಗೂ ಪಿಎಚ್‌.ಡಿ ಪ್ರವೇಶಕ್ಕೆ ಅರ್ಹತೆಯನ್ನು ನಿರ್ಧರಿಸಲು ನೆಟ್‌ ಪರೀಕ್ಷೆ ನಡೆಸಲಾಗುತ್ತದೆ.