ಬೆಂಗಳೂರು(Bengaluru): ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾದ ಸಚಿವ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರವನ್ನು ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಏರ್ ಲಿಫ್ಟ್ ಮಾಡಲಾಯಿತು.
ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ನಿಗದಿತ ಅವಧಿಗೆ ಮೃತದೇಹದ ಏರ್ ಲಿಫ್ಟ್ ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಹುಟ್ಟೂರಿನಲ್ಲಿ ಅಂತಿಮ ದರ್ಶನದ ವ್ಯವಸ್ಥೆಯಲ್ಲೂ ವ್ಯತ್ಯಯವಾಗುವಂತಾಗಿದೆ.
ಬೆಳಗ್ಗೆ 7 ಗಂಟೆಗೆ ಏರ್ ಆಂಬ್ಯುಲೆನ್ಸ್ ಮೂಲಕ ಕತ್ತಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ಕೊಂಡೊಯ್ಯುವ ನಿರ್ಧಾರ ಮಾಡಲಾಗಿತ್ತು. ಆದರೆ ಏರ್ ಲಿಫ್ಟ್ ಮಾಡಲು ಆಂಬ್ಯುಲೆನ್ಸ್ ವ್ಯವಸ್ಥೆ ಇರುವ ವಿಮಾನ ಚೆನ್ನೈನಿಂದ ಬರುವುದಕ್ಕೆ ಮಳೆ ಅಡ್ಡಿಯಾಯಿತು. ಹಾಗಾಗಿ ಹೈದರಾಬಾದ್ನಿಂದ ವಿಶೇಷ ವಿಮಾನವನ್ನು ತರಿಸಿಕೊಳ್ಳಲಾಯಿತು.
ಮಧ್ಯಾಹ್ನ 12.30 ಕ್ಕೆ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರವನ್ನು ಇರಿಸಿ ಬೆಳಗಾವಿಯತ್ತ ಪಾರ್ಥಿವ ಶರೀರವನ್ನು ರವಾನಿಸಲಾಯಿತು. ಕತ್ತಿ ಅವರ ಕುಟುಂಬ ಸದಸ್ಯರು ಈ ವಿಶೇಷ ವಿಮಾನದಲ್ಲಿ ತೆರಳಿದರು. ಮಧ್ಯಾಹ್ನ 1.30 ರ ವೇಳೆಗೆ ಬೆಳಗಾವಿಗೆ ವಿಮಾನ ತಲುಪಲಿದೆ.
ಪಾರ್ಥಿವ ಶರೀರವನ್ನು ರವಾನಿಸುವ ಮುನ್ನ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಸರ್ಕಾರಿ ಗೌರವ ಸಲ್ಲಿಸಲಾಯಿತು.
ಸಚಿವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಉಮೇಶ್ ಕತ್ತಿಯವರ ಅಂತ್ಯಸಂಸ್ಕಾರ ಸರ್ಕಾರಿ ಗೌರವದೊಂದಿಗೆ ಅವರ ಹುಟ್ಟೂರಿನಲ್ಲಿ ನಡೆಯಲಿದೆ.