ಮೈಸೂರು: ಮೈಸೂರಿನ ಪಶ್ಚಿಮ ಆರ್ ಟಿಓ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಅನಧಿಕೃತ ನೌಕರರ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಆದರೆ ಎಫ್ ಐ ಆರ್ ದಾಖಲಾಗಿರುವ ಶೇ.75 ರಷ್ಟು ಅನಧಿಕೃತ ನೌಕರರು ಆರ್ ಟಿ ಓ ಕಚೇರಿಯಲ್ಲಿ ಯಾವುದೇ ಭೀತಿಯಿಲ್ಲದೆ ಮೊದಲಿನಂತೆಯೇ ಕೆಲಸ ನಿರ್ವಹಿಸುತ್ತಿದ್ದಾರೆ.
ಅನಧಿಕೃತ ನೌಕರರು ಕೆಲಸ ಮಾಡುತ್ತಿರುವ ಕುರಿತು ಸಾಕ್ಷ್ಯಾಧಾರ ಕಲೆ ಹಾಕಿ, ಅಲ್ಲಿಯೇ ಕೆಲಸ ಮಾಡುತ್ತಿರುವ ನೌಕರರಿಂದ ಮತ್ತು ಏಜೆಂಟ್ ಗಳಿಂದ ಮಾಹಿತಿ ಪಡೆದು ಬಳಿಕ ಅನಧಿಕೃತ ನೌಕರರ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ‘ಸವಾಲ್ ವಾಹಿನಿ ಸಂಪಾದಕ ಪ್ರದೀಪ್ ಕುಮಾರ್’ ದೂರು ನೀಡಿದ್ದು, 31/2023 ನಂಬರ್ ನಲ್ಲಿ ಎಫ್ ಐ ಆರ್ ದಾಖಲಾಗಿತ್ತು.
ಎಫ್ ಐ ಆರ್ ದಾಖಲಾಗಿ 5 ತಿಂಗಳು ಕಳೆದ ಮೇಲೆ ಮತ್ತೆ ಅನಧಿಕೃತ ನೌಕರರು ಆರ್ ಟಿ ಓ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕಾನೂನಿನ ಭಯ ಇಲ್ಲವಾಗಿದೆ. ಇದು ಪ್ರಾದೇಶಿಕ ಸಾರಿಗೆ ಅಧಿಕಾರಿ ಬೇಜವಬ್ದಾರಿಗೆ ಸಾಕ್ಷಿಯಾಗಿದೆ.
ಆರ್ ಟಿಓ ಎಲ್ಲ ಕೆಲಸ ಕಾರ್ಯಗಳಲ್ಲೂ ಇವರ ಹಾವಳಿ ಇದ್ದು, ಲಂಚ, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಡಿಎಲ್ ಸೆಕ್ಷನ್, ಕ್ಯಾಶ್ ಕೌಂಟರ್, ಕಂಪ್ಯೂಟರ್ ಆಪರೇಟಿಂಗ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ಈ ಅನಧಿಕೃತ ನೌಕರರು ನಿರ್ವಹಣೆ ಮಾಡುತ್ತಾರೆ.
ಎಫ್ ಐಆರ್ ದಾಖಲಾಗಿದ್ದರೂ ಅನಧಿಕೃತ ನೌಕರರು ಮತ್ತದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಂದರೆ, ದಾಖಲಾಗಿರುವ ಎಫ್ ಐಆರ್ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೈಗೊಂಡ ಕ್ರಮವಾದರೂ ಏನು? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಇಲ್ಲ ಎಫ್ ಐಆರ್ ಮುಚ್ಚಿ ಹಾಕಲು ಅಧಿಕಾರಿಗಳು ಎಷ್ಟು ಲಂಚ ಪಡೆದಿದ್ದಾರೆ ? ಅಥವಾ ಅನಧಿಕೃತ ನೌಕರರಿಂದ ಲಂಚ ಪಡೆದು ಮತ್ತೆ ಕೆಲಸಕ್ಕೆ ನೇಮಿಸಿಕೊಂಡಿದ್ದಾರೆಯೆ ಎಂಬುದು ಈಗಿರುವ ಪ್ರಶ್ನೆಯಾಗಿದೆ.
ಅನಧಿಕೃತ ನೌಕರರ ಹಾವಳಿ ಹಿಂದೆ ದೊಡ್ಡ ಕೈಗಳು ಶಾಮೀಲಾಗಿವೆ. ಅನಧಿಕೃತ ನೌಕರರು ಕೆಲಸ ನಿರ್ವಹಿಸದೇ ಇದ್ದುದರಿಂದ ಅವರ ಹಿಂದಿದ್ದ ಕಾಣದ ಕೈಗಳಿಗೆ ಸಾಕಷ್ಟು ನಷ್ಟ ಉಂಟಾಗಿದ್ದಕ್ಕೆ ಅವರಿಗೆ ತಲುಪುತ್ತಿದ್ದ ಕಮಿಷನ್ ಗೆ ಬ್ರೇಕ್ ಬಿದ್ದ ಕಾರಣಕ್ಕಾಗಿ ಮತ್ತೆ ಅವರನ್ನೇ ಸೇರಿಸಿಕೊಂಡಿದ್ದಾರೆಯೇ ಎಂಬ ಅನುಮಾನವು ಸಾರ್ವಜನಿಕರಲ್ಲಿ ಕಾಡುತ್ತಿದೆ.
ಪ್ರಕರಣ ಸಂಬಂಧ ಎಫ್ ಐ ಆರ್ ಆದವರಲ್ಲಿ 10 ಮಂದಿ ಸರ್ಕಾರಿ ನೌಕರರಾಗಿದ್ದು, 25 ಮಂದಿ ಅನಧಿಕೃತ ನೌಕರರಿದ್ದಾರೆ. ಇದಲ್ಲದೇ ಇನ್ನೂ 8 ಮಂದಿ ಅನಧಿಕೃತ ನೌಕರರಿದ್ದಾರೆ. ಅವರಿಗೆ ಸಹಾಯಕರಾಗಿ ಇನ್ನಿಬ್ಬರು ಸರ್ಕಾರಿ ನೌಕರರು ಇದ್ದಾರೆ ಎಂದು ದೂರಿನಲ್ಲಿಯೇ ತಿಳಿಸಲಾಗಿತ್ತು.
ಅನಧಿಕೃತ ನೌಕರರು ನಿಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ಜಂಟಿ ಸಾರಿಗೆ ಆಯುಕ್ತರಿಗೆ ಪ್ರಕರಣ ದಾಖಲಿಸುವ ಒಂದೂವರೆ ತಿಂಗಳ ಮುಂಚೆಯೇ ಎರಡು ಬಾರಿ ದೂರು ನೀಡಿದ್ದು, ಅದಕ್ಕೆ ಪ್ರತಿಕ್ರಿಯಿಸದೇ, ಮೂರನೇ ಬಾರಿ ದೂರು ನೀಡಿದಾಗ ತಮ್ಮ ಇಲಾಖೆಯ ಮುಖ್ಯ ಕಚೇರಿಗೆ ದೂರನ್ನು ಪರಿಶೀಲಿಸುವಂತೆ ಕಳಿಸುತ್ತಾರೆ. ಆದರೆ ಅವರ ಕಛೇರಿಯಲ್ಲಿಯೇ ಅನಧಿಕೃತ ನೌಕರರು ಕೆಲಸ ಮಾಡುತ್ತಿದ್ದರೂ ಅವರು ಪ್ರಶ್ನಿಸಿಲ್ಲ. ಆದರೆ ಮತ್ತೆ ಈಗ ಎಫ್ ಐ ಆರ್ ದಾಖಲಾದವರನ್ನೇ ಮತ್ತೆ ಕೆಲಸ ತೆಗೆದುಕೊಂಡ ಹಿಂದಿರುವ ಮರ್ಮವೇನು ಎಂಬುದು ತನಿಖೆಯಿಂದಷ್ಟೇ ಹೊರ ಬರಲು ಸಾಧ್ಯ.
ಆದ್ದರಿಂದ ಎಫ್ ಐ ಆರ್ ದಾಖಲಾದ ಅಧಿಕಾರಿಗಳು, ಅನಧಿಕೃತ ನೌಕರರು ಅದೇ ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಸಾಕ್ಷ್ಯವನ್ನು ನಾಶ ಮಾಡುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಸಂಬಂಧಪಟ್ಟ ಮೇಲಾಧಿಕಾರಿಗಳು ಹಾಗೂ ಪೊಲೀಸರ ಎಫ್ ಐ ಆರ್ ದಾಖಲಾದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಸಾರ್ವಜನಿಕರಿಗೆ ನ್ಯಾಯಯುತ ಸೇವೆ ದೊರಕಿಸಿಕೊಡಲು ಶ್ರಮಿಸಬೇಕೆಂದು ‘ಸವಾಲ್ ವಾಹಿನಿ’ಯ ಕಳಕಳಿಯ ಮನವಿಯಾಗಿದೆ.