ಮನೆ ಅಪರಾಧ ಮೈಸೂರು ಪಶ್ಚಿಮ ಆರ್.ಟಿ.ಓ ಕಛೇರಿಯಲ್ಲಿ ಅನಧಿಕೃತ ನೌಕರರ ಹಾವಳಿ: ೩೫ ಮಂದಿ ವಿರುದ್ಧ ಎಫ್.ಐ.ಆರ್ ದಾಖಲು

ಮೈಸೂರು ಪಶ್ಚಿಮ ಆರ್.ಟಿ.ಓ ಕಛೇರಿಯಲ್ಲಿ ಅನಧಿಕೃತ ನೌಕರರ ಹಾವಳಿ: ೩೫ ಮಂದಿ ವಿರುದ್ಧ ಎಫ್.ಐ.ಆರ್ ದಾಖಲು

0

ಮೈಸೂರು: ಮೈಸೂರು ಪಶ್ಚಿಮ ಆರ್.ಟಿ.ಓ ಕಛೇರಿಯಲ್ಲಿ ಸರ್ಕಾರಿ ಅಧಿಕಾರಿ ಮತ್ತು ನೌಕರರರಂತೆ ಕರ್ತವ್ಯ ನಿರ್ವಹಿಸುತ್ತಿರುವ ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸುತ್ತಿರುವ ಅನಧಿಕೃತ ವ್ಯಕ್ತಿಗಳು ಮತ್ತು ಇವರಿಗೆ ಸಹಕರಿಸುತ್ತಿರುವ ಇಲಾಖೆಯ ಮುಖ್ಯಸ್ಥರಾದ ಮೈಸೂರು ಸಾರಿಗೆ ವಿಭಾಗದ ಮುಖ್ಯಸ್ಥರಾದ ಜಂಟಿ ಸಾರಿಗೆ ಆಯುಕ್ತರು ಮತ್ತು ಮೈಸೂರು ಪಶ್ಚಿಮ ಸಾರಿಗೆ ಕಛೇರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವಿರುದ್ಧ ದೂರು ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Join Our Whatsapp Group

ಸವಾಲ್ ಪತ್ರಿಕೆ ಸಂಪಾದಕ ಪ್ರದೀಪ್ ಕುಮಾರ್ ನೀಡಿದ್ದ ದೂರಿಗೆ ಪ್ರತಿಯಾಗಿ ಸೋಮವಾರ (ಜುಲೈ ೩೧) ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಅಕ್ರಮದಲ್ಲಿ ಭಾಗಿಯಾದ ೩೫ ಮಂದಿ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ.

ಸಿ.ಟಿ ಮೂರ್ತಿ, ದೇವಿಕಾ, ಹರೀಶ್ ಡಿ.ಎಲ್, ಸತೀಶ್, ಪವನ್, ಚನ್ನವೀರಪ್ಪ, ಲತಾಮಣಿ, ಹರೀಶ್, ಶಿವಸ್ವಾಮಿ, ಸುಭಾಶ್, ಕುಮಾರ, ಚೇತನ್, ಸೋಮಶೇಖರ್, ಶಾರೂಕ್, ಪದ್ಮ, ರಾಮೇಗೌಡ, ರವಿ, ಮನು, ಗಿರೀಶ್, ಇರ್ಫಾನ್, ಮೂರ್ತಿ, ಮಹದೇವ, ನಾರಾಯಣ, ಬಸವರಾಜು, ನಿತಿನ್, ಜಗದೀಶ್, ಜಗದೀಶ್.ಡಿ.ಎಲ್, ಕಾಂತಾ, ರಾಮು, ಕುಮಾರ್, ಚೆನ್ನಬಸಪ್ಪ, ಮಾದಪ್ಪ, ಅಬ್ದುಲ್ ಹಾಶಮ್, ವೈದ್ಯ, ಯೋಗೇಶ್ ಎಂಬುವವರು ವಿರುದ್ಧ ಪ್ರಕರಣ ದಾಖಲಾಗಿದೆ.

ದೂರಿನಲ್ಲೇನಿದೆ ?

ಮೈಸೂರಿನ ಪಶ್ಚಿಮ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಲವು ಅನಧಿಕೃತ ವ್ಯಕ್ತಿಗಳು ಸರ್ಕಾರಿ ಅಧಿಕಾರಿ ಮತ್ತು ನೌಕರರಂತೆ ಕೆಲಸ ಮಾಡುತ್ತಾ, ಸರ್ಕಾರದ ಪೀಠೋಪಕರಣಗಳನ್ನು ಸೇರಿದಂತೆ ಕಂಪ್ಯೂಟರ್ಗಳನ್ನು ಉಪಯೋಗಿಸಿ, ಸರ್ಕಾರಿ ದಾಖಲೆಗಳನ್ನು ತಮಗೆ ಬೇಕಾದಂತೆ ದಾಖಲೆಗಳನ್ನು ಮಾರ್ಪಡಿಸಿ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದಾರೆ. ಈ ಕೃತ್ಯಗಳಿಗೆ ಸದರಿ ಸಾರಿಗೆ ಅಧಿಕಾರಿಗಳ ಕಚೇರಿಯ ಅಧಿಕಾರಿಗಳು ಸಹಕರಿಸುತ್ತಿದ್ದಾರೆ.

ಈ ಬಗ್ಗೆ ಹಿರಿಯ ಸಾರಿಗೆ ಅಧಿಕಾರಿಗಳಿಗೆ ದೂರರ್ಜಿಯನ್ನು ನೀಡಿದ್ದರೂ ಸಹ ಕ್ರಮ ತೆಗೆದುಕೊಂಡಿರುವುದಿಲ್ಲ. ಈ ಕೆಳಗಿನ ವ್ಯಕ್ತಿಗಳು ಅನಧಿಕೃತವಾಗಿ ಕಚೇರಿಯಲ್ಲಿರುವುದರ ಜೊತೆಗೆ ಕಚೇರಿಯ ಎಲ್ಲಾ ಕೆಲಸಗಳಲ್ಲಿಯೂ ಬೇನಾಮಿಯಾಗಿ ಭಾಗವಹಿಸುತ್ತಿದ್ದಾರೆ. ತಾವು ಸರ್ಕಾರಿ ನೌಕರರಂತೆ ನಟಿಸುವುದರ ಮೂಲಕ ವಂಚನೆ ಮಾಡುವುದು, ದಾಖಲೆಗಳನ್ನು ಮಾರ್ಪಾಡಿಸುವುದು, ಅಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ದಾಖಲೆಗಳನ್ನು ತಿದ್ದುವುದು ಮತ್ತು ಸರ್ಕಾರಿ ದಾಖಲೆಗಳಲ್ಲಿ ತಾವು ಬರೆಯುವುದು, ಸಾರ್ವಜನಿಕರನ್ನು ಮತ್ತು ಸರ್ಕಾರವನ್ನು ವಂಚಿಸುವ ಉದ್ದೇಶಕ್ಕಾಗಿ ಕಛೇರಿಯ ದಾಖಲೆಗಳ ಮೂಲಕ ಮೋಸ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಇದು ಅಧಿಕಾರ ದುರುಪಯೋಗ ಮಾತ್ರವಲ್ಲದೇ ಭ್ರಷ್ಟರು ತಮ್ಮ ಬೇಳೆ ಬೇಯಿಸಿಕೊಳ್ಳಲು ಅನುಕೂಲವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅನಧಿಕೃತ ನೌಕರರ ವಿವರಗಳು

  • ಕುಮಾರ್ ಎಂಬ ವ್ಯಕ್ತಿಯು ಕಲಿಕೆ ಪರವಾನಗಿ ಮತ್ತು ಚಾಲನಾ ಪರವಾನಗಿಯ ದಾಖಲೆಗಳನ್ನು ಪರಿಶೀಲನೆ ಮಾಡುವುದರ ಜೊತೆಗೆ ಅವುಗಳನ್ನು ಸರ್ಕಾರಿ ಕಂಪ್ಯೂಟರ್ ಗೆ ಖುದ್ದಾಗಿ ದಾಖಲೆಗಳ ಮಾಹಿತಿಗಳನ್ನು ದಾಖಲಿಸುತ್ತಾನೆ. ಕುಮಾರನು ಸಾರಿಗೆ ಇಲಾಖೆಯ ಸರ್ಕಾರಿ ನೌಕರ ಕೇಸ್ ವರ್ಕರ್ ಹರೀಶ್ ಮಾರ್ಗದರ್ಶನದಲ್ಲಿ ಅಕ್ರಮಗಳನ್ನು ಮಾಡುತ್ತಾನೆ.
  • ಚೇತನ್ ಎಂಬ ವ್ಯಕ್ತಿಯು ಸರ್ಕಾರಿ ಹಣವನ್ನು ಸರ್ಕಾರಿ ಕಛೇರಿಯ ನಗದು ವಿಭಾಗದಲ್ಲಿ ಕುಳಿತು ಶುಲ್ಕ ಸಂಗ್ರಹಣೆ ಮಾಡಿ ಕಂಪ್ಯೂಟರ್ ಉಪಯೋಗಿಸಿ ರಸೀದಿಯನ್ನು ನೀಡುತ್ತಾ ಮತ್ತು ಚಾಲನಾ ಪರವಾನಗಿಯ ಮತ್ತು ನೂತನವಾಗಿ ನೊಂದಯಿಸಿರುವ ವಾಹನಗಳ ನೋಂದಣಿ ಪ್ರಮಾಣ ಪತ್ರದ ಕಾರ್ಡುಗಳ ವಿತರಣೆಯನ್ನು ಮಾಡುತ್ತಾ ಸರ್ಕಾರಿ ಅಧಿಕಾರಿಯಂತೆ ನಟಿಸುತ್ತಾ ಸಾರ್ವಜನಿಕರಿಂದ ಹಣವನ್ನು ಅಕ್ರಮವಾಗಿ ವಸೂಲಿ ಮಾಡುತ್ತಾನೆ. ಇವನಿಗೆ ಬೆಂಗಾವಲಾಗಿ ಸದರಿ ಕಛೇರಿಯಲ್ಲಿ ಅನಧಿಕೃತವಾಗಿ ಗೈರು ಹಾಜರಾಗಿರುವ ಲಿಂಗರಾಜು ಎಂಬ ಸಿಬ್ಬಂಧಿಗೆ ಪರ್ಯಾಯವಾಗಿ ನೇಮಕವಾಗಿರುವ ಕೇಸ್ ವರ್ಕರ್ ಸತೀಶ್ ಎಂಬ ಸರ್ಕಾರಿ ನೌಕರನ ಕೃಪಕಟಾಕ್ಷವಿದೆ.
  • ಸೋಮಶೇಖರ್ ಎಂಬ ವ್ಯಕ್ತಿಯು ಕಛೇರಿಯ ಸಾರಿಗೆ ಮತ್ತು ಸಾರಿಗೇತರದ ನಗದು ವಿಭಾಗದಲ್ಲಿ ಸರ್ಕಾರಿ ನೌಕರನಂತೆ ಕುಳಿತು ಶುಲ್ಕ ಸಂಗ್ರಹಣೆ ಮಾಡಿ ಕಂಪ್ಯೂಟರ್ ಉಪಯೋಗಿಸಿ ರಸೀದಿಯನ್ನು ನೀಡುತ್ತಾನೆ. ಸಂಗ್ರಹಿಸಿದ ನಗದಿನ ಮೊತ್ತದಲ್ಲಿ ಹಲವಾರು ಬಾರಿ ಹಣವನ್ನು ತನ್ನ ವೈಯಕ್ತಿಕ ಕೆಲಸಗಳಿಗೆ ಉಪಯೋಗಿಸುತ್ತಾನೆ ಎಂಬ ಮಾಹಿತಿಯು ತಿಳಿದು ಬಂದಿದೆ. ಸೋಮ ಎಂಬ ನಕಲಿ ನೌಕರನು ಅಧಿಕೃತ ಸರ್ಕಾರಿ ನೌಕರನಾದ ಪವನ್ ಎಂಬುವವನ ಸಹಾಯದಲ್ಲಿ ಕೆಲಸ ಮಾಡುತ್ತಿದ್ದಾನೆ.                                               
  • ಶಾರುಕ್ ಎಂಬ ವ್ಯಕ್ತಿಯು ಸರ್ಕಾರಿ ಕಂಪ್ಯೂಟರ್ಗೆ ಡೇಟಾ ಎಂಟ್ರಿ ಮಾಡುವುದಲ್ಲದೆ, ಕಡತಗಳ ಪರಿಶೀಲನೆ ಮತ್ತು ನಿರ್ವಹಣೆ ಮಾಡುತ್ತಾನೆ. ಚನ್ನವೀರಪ್ಪ ಮತ್ತು ಲತಾಮಣಿ ಎಂಬ ಸರ್ಕಾರಿ ನೌಕರರ ಮಾರ್ಗದರ್ಶನದಲ್ಲಿ ಶಾರುಕ್ ಸಾರ್ವಜನಿಕರ ಎದುರು ಸರ್ಕಾರಿ ನೌಕರನ ರೀತಿ ನಟಿಸುತ್ತಾ ಎಲ್ಲರನೂ ಯಾಮಾರಿಸುತ್ತಿದ್ದಾನೆ.
  • ಪದ್ಮ ಎಂಬ ಮಹಿಳೆಯು ಮೊದಲು ರೋಸ್ಮಟ್ಟ ಎಂಬ ನೌಕರರ  ಹೊರಗುತ್ತಿಗೆ ಸಂಸ್ಥೆಯ ಮೂಲಕ ಕೆಲಸ ಮಾಡುತ್ತಿದ್ದರು. ಇವರು ಮಾಡಿದ ಅಕ್ರಮ ಬೆಳಕಿಗೆ ಬಂದ ನಂತರ ಇವರನ್ನು ಕೆಲಸದಿಂದ ತೆಗೆಯಲಾಗಿತ್ತು. ಕೆಲಸದಿಂದ ರೋಸ್ಮಟ್ಟ ಸಂಸ್ಥೆಯವರು ತೆಗೆದರೂ ಸಹ ಪದ್ಮ ಎಂಬ ಮಹಿಳೆ (ಹಾಲಿ ದೂರು ನೀಡುವ ಒಂದೆರಡು ದಿನಗಳಿಂದ ಕೆಲಸ ಮಾಡುತ್ತಿಲ್ಲ) ಚನ್ನವೀರಪ್ಪ ಎಂಬ ಸರ್ಕಾರಿ ನೌಕರರ ಮಾರ್ಗದರ್ಶನದಲ್ಲಿ ಚನ್ನವೀರಪ್ಪರವರ ಗುರುತಿನ ಮೂಲಕ ಸರ್ಕಾರಿ ಕಂಪ್ಯೂಟರ್ ಉಪಯೋಗಿಸುತ್ತಾರೆ.
  • ರಾಮೇಗೌಡ ಎಂಬ ವ್ಯಕ್ತಿಯು ಚಾಲನಾ ಪರವಾನಗಿ ನವೀಕರಣದ ಅಂಗೀಕಾರ ಮತ್ತು ಚಾಲನಾ ಪರವಾನಗಿ ವಿಭಾಗ ಹಾಗೂ ಸಾರಿಗೆ ವಾಹನಗಳ ವಿಭಾಗದ ದಾಖಲೆಗಳನ್ನು ತಿದ್ದುವ ಮತ್ತು ವಿವರಗಳನ್ನು ಬರೆಯುವ ಕೆಲಸವನ್ನು ನಿರ್ವಹಿಸುತ್ತಾನೆ. ಈತನು ಮಾಜಿ ಗೃಹರಕ್ಷಕ ದಳದ ನೌಕರ. ಈತ ಸದರಿ ವಿಭಾಗಗಳ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಅಕ್ರಮಗಳನ್ನು ಮಾಡುತ್ತಾನೆ.
  • ರವಿ ಎಂಬ ವ್ಯಕ್ತಿಯು ಸಾರಿಗೇತರ ವಿಭಾಗದಲ್ಲಿ ಕಾರ್ಡ್ ಗಳ ವಿತರಣೆಯನ್ನು ಸರ್ಕಾರಿ ನೌಕರರಾದ ಲತಾಮಣಿ ಅವರ ಅಣತಿಯಂತೆ ತಾನೂ ಸರ್ಕಾರಿ ನೌಕರ ಎಂಬಂತೆ ಬಿಂಬಿಸಿಕೊಂಡು ಕೆಲಸಗಳನ್ನು ನಿರ್ವಹಿಸುತ್ತಾನೆ.
  • ಮನು ಎಂಬ ವ್ಯಕ್ತಿಯು ಟಾಪಾಲಿನ ಮೂಲಕ ಬಂದ ದಾಖಲೆಗಳ ನೊಂದಣಿ ವಿಭಾಗದ ಪುಸ್ತಕಗಳು ಮತ್ತು ಟಿಪ್ಪಣಿ ಹಾಳೆಗಳಲ್ಲಿ ನಮೂದು ಮಾಡಿ ಸರ್ಕಾರಿ ನೌಕರರಾದ ಚನವೀರಪ್ಪ ಅವರ ಅಣತಿಯಂತೆ ತಾನೂ ಸರ್ಕಾರಿ ನೌಕರ ಎಂಬಂತೆ ಬಿಂಬಿಸಿಕೊಂಡು ಕೆಲಸಗಳನ್ನು ನಿರ್ವಹಿಸುತ್ತಾನೆ.
  • ಗಿರೀಶ್ ಎಂಬ ವ್ಯಕ್ತಿಯು ಕೆಲವು ದಿನಗಳವೆರೆಗೂ ಅನಧಿಕೃತನಾಗಿ ಕೆಲಸ ಮಾಡುತ್ತಿದ್ದನು. ಹಾಲಿ ಈಗ ಸಕಾಲದ ಕಾರ್ಯಗಳನ್ನು ನಿರ್ವಹಿಸಲು ಹೊರಗುತ್ತಿಗೆ ನೌಕರರ ಸಂಸ್ಥೆ ಮೂಲಕ ನೇಮಕಗೊಂಡಂತೆ ಆದೇಶವನ್ನು ಪಡೆದು ಅನಧಿಕೃತವಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಯ ವೈಯಕ್ತಿಕ ಸರ್ಕಾರಿ ಕೆಲಸಗಳನ್ನು ಮಾಡುತ್ತಾನೆ ಮತ್ತು ಅವರ ಕಛೇರಿಯ ಕಂಪ್ಯೂಟರ್ ನಿರ್ವಹಿಸುತ್ತಾನೆ. ಇವನಿಗೆ ಖುದ್ದಾಗಿ ಜಂಟಿ ಸಾರಿಗೆ ಆಯುಕ್ತ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿ ದೇವಿಕಾ ಕೃಪಕಟಾಕ್ಷವಿದೆ ಎಂದು ತಿಳಿದು ಬಂದಿದೆ. 
  • ಇರ್ಫಾನ್ ಅಲಿಯಾಸ್ ಅಯುಬ್ ಎಂಬ ವ್ಯಕ್ತಿಯು ಸರ್ಕಾರಿ ದಾಖಲೆಗಳ ಕೊಠಡಿಯಲ್ಲಿ ಕೆಲಸ ಮಾಡಿಕೊಂಡು ಅಕ್ರಮ ಮಾಡುವ ನೌಕರರಿಗೆ ಬೇಕಾಗುವ ನಕಲಿ ಸಹಿಗಳನ್ನು ಮಾಡುವಲ್ಲಿ ಪ್ರಾವೀಣ್ಯತೆ ಹೊಂದಿರುವುದಾಗಿ ತಿಳಿದು ಬಂದಿದೆ. ಕಡತಗಳನ್ನು ಪರಿಶೀಲಿಸಿದರೆ ಸಾಕ್ಷ್ಯಾಧಾರಗಳು ದೊರಕುವುದು. ಈತ ಕಛೇರಿಯ ಕೇಸ್ ವರ್ಕರ್ಗಳು ಮತ್ತು ಗುಮಾಸ್ತರ ಅಣತಿಯಂತೆ ಕೆಲಸ ಮಾಡುತ್ತಿರುತ್ತಾನೆ.
  • ಮೂರ್ತಿ ಎಂಬ ವ್ಯಕ್ತಿಯು ಸಾರಿಗೆ ಮತ್ತು ಸಾರಿಗೇತರ ವಿಭಾಗದ ದಾಖಲೆಗಳನ್ನು ನಿರ್ವಹಿಸುವುದರೊಂದಿಗೆ ಸದರಿ ವಿಭಾಗದ ದಾಖಲೆಗಳ ಹಾಳೆಯಲ್ಲಿ ಟಿಪ್ಪಣಿಯನ್ನು ನಮೂದು ಮಾಡಿರುವ ಪುರಾವೆಗಳು ಕಛೇರಿಯ ಕಡತಗಳನ್ನು ಪರಿಶೀಲಿಸಿದರೆ ದೊರಕುವುದು. ಸರ್ಕಾರಿ ನೌಕರ ಹರೀಶ್ ಎಂಬುವವರ ಮಾರ್ಗದರ್ಶನದಲ್ಲಿ ಈತ ಕೆಲಸ ಮಾಡುತ್ತಿರುತ್ತಾನೆ.
  • ಮಹದೇವ ಎಂಬ ವ್ಯಕ್ತಿಯು ಮೋಟಾರು ವಾಹನ ನಿರೀಕ್ಷಕರು ವಾಹನಗಳ ಅಪಘಾತ ಸಂದರ್ಭದಲ್ಲಿ ಪೊಲೀಸರ ಮತ್ತು ನ್ಯಾಯಾಲಯದ ಅಣತಿಯಂತೆ ನೀಡಬೇಕಾದ ವರದಿಗಳನ್ನು ತಯಾರು ಮಾಡುವುದರೊಂದಿಗೆ ಮೋಟಾರು ವಾಹನ ನಿರೀಕ್ಷಕರ ಅನುಪಸ್ಥಿತಿಯಲ್ಲಿ ವಾಹನಗಳ ಪರಿಶೀಲನೆ ಮಾಡಿ ಕೆಲವು ಬಾರಿ ಅಧಿಕಾರಿಗಳಂತೆ ಸಹಿ ಮಾಡುವ ಕೆಲಸವನ್ನು ಕಛೇರಿಯಲ್ಲಿ ಕೆಲಸ ಮಾಡುವ ಶುಭಾಶ್ ಮತ್ತು ಶಿವಸ್ವಾಮಿ ಮೋಟಾರು ವಾಹನ ನಿರೀಕ್ಷಕರ ಆದೇಶದಂತೆ ಕೆಲಸ ಮಾಡುತ್ತಿದ್ದಾನೆ.
  • ನಾರಾಯಣ ಎಂಬ ವ್ಯಕ್ತಿಯು ಚಾಲನಾ ಪರವಾನಿಗಿ ವಿಭಾಗದಲ್ಲಿ ಬ್ಯಾಕ್ ಲಾಗ್ ಕೆಲಸಗಳೊಂದಿಗೆ ಸದರಿ ವಿಭಾಗದ ದಾಖಲೆಗಳ ನಿರ್ವಹಣೆಯನ್ನು ಮಾಡುತ್ತಾನೆ. ಇವನಿಗೆ ಚನ್ನವೀರಪ್ಪ ಎಂಬ ನೌಕರರ ಕೃಪಾಕಟಾಕ್ಷವಿದೆ.
  • ಬಸವರಾಜು ಎಂಬ ವ್ಯಕ್ತಿಯು ಸರ್ಕಾರಿ ನೌಕರರಾದ ಲತಾಮಣಿ ಎಂಬುವವರ ಮಾರ್ಗದರ್ಶನದಲ್ಲಿ ಹೊಸ ನೊಂದಣಿಗಳ ದಾಖಲೆಗಳನ್ನು ನಿರ್ವಹಿಸುತ್ತಾನೆ.
  • ನಿತಿನ್ ಎಂಬ ವ್ಯಕ್ತಿಯು ಸಾರಿಗೆ ವಿಭಾಗದಲ್ಲಿ ಸರ್ಕಾರಿ ನೌಕರ ಮುಂಜುನಾಥ್ ಅವರ ಇಚ್ಚೆಯಂತೆ ಸರ್ಕಾರಿ ನೌಕರನಂತೆ ಕೆಲಸ ಮಾಡುತ್ತಿದ್ದಾನೆ.
  • ಜಗದೀಶ್ ಅಲಿಯಾಸ್ ಎಲ್.ಎಲ್ ಜಗಾ ಎಂಬ ವ್ಯಕ್ತಿಯು ಶುಭಾಶ್ ಮತ್ತು ಶಿವಸ್ವಾಮಿ ಮೋಟಾರು ವಾಹನ ನಿರೀಕ್ಷಕರ ಮಾರ್ಗದರ್ಶನದಲ್ಲಿ ಸಾರಿಗೇತರ ವಾಹನಗಳ ಅಂದರೆ (ವೈಟ್ ಬೋರ್ಡ್) ವಿಭಾಗದಲ್ಲಿ ನವೀಕರಣ ನೊಂದಣಿ ಮತ್ತು ಹಣ ವಸೂಲಿಯನ್ನು ಮಾಡುತ್ತಾನೆ.
  • ಜಗದೀಶ್ ಅಲಿಯಾಸ್ ಡಿ.ಎಲ್ ಜಗಾ ಎಂಬ ವ್ಯಕ್ತಿಯು ಪ್ಯಾಲೆಸ್ ಹೋಂಡಾ ಎಂಬ ದ್ವಿಚಕ್ರ ವಾಹನದ ಶೋರೂಂ ಪರವಾಗಿ ಏಜೆಂಟ್ ಕೆಲಸ ಮಾಡುತ್ತಾ ಸರ್ಕಾರಿ ಕಚೇರಿಯಲ್ಲಿ ಇತರೆ ಏಜೆಂಟರ ಚಾಲನ ಪರವಾನಿಗಿಯ ದಾಖಲೆಗಳನ್ನು ಅಧಿಕೃತ ನೌಕರನಂತೆ ನಿರ್ವಹಿಸುತ್ತಾನೆ. ಇವನಿಗೆ ಸದರಿ ವಿಭಾಗದ ಎ ಹರೀಶ್ ಎಂಬ ಸರ್ಕಾರಿ ನೌಕರ ಮತ್ತು ಎಲ್ಲಾ ಮೋಟಾರು ವಾಹನ ನಿರೀಕ್ಷಕರ ಬೆಂಗಾವಲಿದೆ.
  • ಕಾಂತ ಎಂಬ ವ್ಯಕ್ತಿಯು ಎಲ್ಲಾ ಮೋಟಾರು ವಾಹನ ತರಬೇತಿ ಶಾಲೆಗಳ ಚಾಲನಾ ಪರವಾನಿಗಿಯನ್ನು ನಿರ್ವಹಿಸುವುದರೊಂದಿಗೆ ಸದರಿ ವಿಭಾಗದ ಅನಧಿಕೃತ ಹಣ ವಸೂಲಿಯನ್ನು ಮಾಡಿ ವಿಭಾಗದ ಅಧಿಕಾರಿಗಳಿ ತಲುಪಿಸುವ ಕೆಲಸವನ್ನು ಮಾಡುತ್ತಾನೆ. ಈತ ಮಾಜಿ ಗೃಹ ರಕ್ಷಕ ದಳದ ನೌಕರನಾಗಿದ್ದು ಮೊದಲು ಸಾರಿಗೆ ಕಛೇರಿಯಲ್ಲೆ ಕೆಲಸ ನಿರ್ವಹಿಸುತ್ತಿದ್ದ ಎಂಬ ಮಾಹಿತಿಯಿದೆ.
  • ರಾಮು ಎಂಬ ವ್ಯಕ್ತಿಯು ಚಾಲನಾ ಪರವಾನಿಗಿ ವಿಭಾಗದಲ್ಲಿ ಬ್ಯಾಕ್ ಲಾಗ್ ಪುಸ್ತಕಗಳ ನಿರ್ವಹಣೆಯೊಂದಿಗೆ ಚಾಲನಾ ಪರವಾನಿಗಿ ನವೀಕರಣದ ಕೆಲಸಗಳನ್ನು ಮಾಡುತ್ತಾನೆ. ಇವನಿಗೆ ಚನ್ನವೀರಪ್ಪರವರ ಮಾರ್ಗದರ್ಶನವಿದೆ.
  • ಕುಮಾರ್ ಎಂಬ ವ್ಯಕ್ತಿಯು ದಾಖಲೆಗಳ ಕೊಠಡಿಯಲ್ಲಿ ಸಾರಿಗೇತರ ವಿಭಾಗದ ದಾಖಲೆಗಳನ್ನು ನಿರ್ವಹಿಸುತ್ತಿದ್ದಾನೆ. ಸದರಿ ವಿಭಾಗದ ಉಸ್ತುವಾರಿ ಸರ್ಕಾರಿ ನೌಕರರು ತಾವು ಕೆಲಸ ಮಾಡದೆ ಇವರ ಮುಖಾಂತರ ಕೆಲಸವನ್ನು ಮಾಡುತ್ತಿದ್ದಾರೆ.
  • ಅಭಿ ಎಂಬ ವ್ಯಕ್ತಿಯು ನಿಯಮಿತವಾಗಿ ಬದಲಾಗುವ ಗೃಹ ರಕ್ಷಕದಳದ ನೌಕರನಾಗಿ ಕೆಲಸ ಮಾಡುತ್ತಾನೆ. ನಿಯೋಜನೆ ಇಲ್ಲದ ಸಮಯದಲ್ಲಿ ಶುಭಾಶ್ ಮತ್ತು ಶಿವಸ್ವಾಮಿ ಮೋಟಾರಿ ವಾಹನ ನಿರೀಕ್ಷಕರ ಜೊತೆಯಲ್ಲಿ ಸೇರಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುವ ಮತ್ತು ವಾಹನಗಳ ಫಿಟ್ನೆಸ್ ಪ್ರಮಾಣ ಪತ್ರ ನೀಡುವ ಕೆಲಸವನ್ನು ಮಾಡುತ್ತಾನೆ.
  • ಚನ್ನಬಸಪ್ಪ ಮತ್ತು ಮಾದಪ್ಪ ಹಾಗೂ ಅಬ್ದುಲ್ ಹಶಮ್ ಎಂಬ ವ್ಯಕ್ತಿಗಳು ನಿಯಮಿತವಾಗಿ ಬದಲಾಗುವ ಗೃಹ ರಕ್ಷಕದಳದ ನೌಕರರಾಗಿ ಕೆಲಸ ಮಾಡುತ್ತಾರೆ. ತಾವೂ ನಿಯೋಜನೆ ಇಲ್ಲದ್ದಿದ್ದ ಸಮಯದಲ್ಲಿಯೂ ಸಹ ಅವರುಗಳು ಶುಭಾಶ್ ಮತ್ತು ಶಿವಸ್ವಾಮಿ ಮೋಟಾರು ವಾಹನ ನಿರೀಕ್ಷಕರ ಜೊತೆ ಅನಧಿಕೃತವಾಗಿ ರಸ್ತೆಯಲ್ಲಿ ವಾಹನಗಳನ್ನು ತಪಸಣೆ ಮಾಡುತ್ತಾ ಸರ್ಕಾರದ ಹಣವನ್ನು ವಸೂಲಿ ಮಾಡುತ್ತಾರೆ.
  • ವೈದ್ಯ ಎಂಬ ವ್ಯಕ್ತಿಯು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪರವಾಗಿ ಅನಧಿಕೃತವಾಗಿ ಸಾರಿಗೇತರ ವಿಭಾಗದ ಕೆಲಸದ ಲಂಚದ ಹಣವನ್ನು ವಸೂಲಿ ಮಾಡುತ್ತಾನೆ ಹಾಗೂ ಯೋಗೇಶ್ ಎಂಬ ವ್ಯಕ್ತಿಯು ಶುಭಾಶ್ ಮತ್ತು ಶಿವಸ್ವಾಮಿ ಮೋಟಾರು ವಾಹನ ನಿರೀಕ್ಷಕರ ಪರವಾಗಿ ವಾಹನಗಳ ಫಿಟ್ನೆಸ್ ಸರ್ಟಿಫಿಕೇಟ್ ಗಾಗಿ ಕೊಡುವ ಲಂಚದ ಹಣವನ್ನು ವಸೂಲು ಮಾಡುತ್ತಾನೆ.

ಇಷ್ಟೆಲ್ಲಾ ಕೆಲಸಗಳನ್ನು ಅನಧಿಕೃತ ನೌಕರರು ಸರ್ಕಾರಿ ಅಧಿಕಾರಿಗಳ ಮೂಗಿನಡಿ ನಡೆಯುತ್ತಿದ್ದರೂ, ಕಂಡು ಕಾಣದಂತೆ ಅವರಿಂದಲೇ ಹಣ ಪಡೆದು ಬೇಜವಬ್ದಾರಿತನದಿಂದ ಇರುವುದು ಪ್ರಾಮಾಣಿಕ ಅಧಿಕಾರಿಗಳು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇವರಿಗೆ ಸಾರಿಗೆ ಇಲಾಖೆಯ ಮುಖ್ಯಸ್ಥರಾದ ಇಲಾಖೆಯ ಸಾರಿಗೆ ಆಯುಕ್ತರು, ಮುಖ್ಯವಾಗಿ ಮೈಸೂರು ವಿಭಾಗದ ಜಂಟಿ ಸಾರಿಗೆ ಆಯುಕ್ತರಾದ ಸಿ.ಟಿ ಮೂರ್ತಿ, ಮೈಸೂರು ಪಶ್ಚಿಮ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಶ್ರೀಮತಿ ದೇವಿಕಾ ಮತ್ತು ಇತರೆ ಸಿಬ್ಬಂದಿಗಳು ಸಹಕರಿಸುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಅಧಿಕಾರಿ, ನೌಕರರಲ್ಲದಿದ್ದರೂ, ಸರ್ಕಾರಿ ಅಧಿಕಾರಿ, ನೌಕರರಂತೆ ಕೆಲಸ ಮಾಡುತ್ತಾ, ಸರ್ಕಾರಿ ಅಧಿಕಾರಿ, ನೌಕರರಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿಸುತ್ತಾ, ವಂಚನೆ ಮಾಡುತ್ತಿರುವ ಮೇಲ್ಕಂಡ ವ್ಯಕ್ತಿಗಳ ಮತ್ತು ಇವರಿಗೆ ಸಹಕರಿಸುತ್ತಿರುವ ಸಾರಿಗೆ ಇಲಾಖೆಯ ಅಧಿಕಾರಿಗಳ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿತ್ತು.

ದೂರಿನ ಹಿನ್ನಲೆಯಲ್ಲಿ ಸೋಮವಾರ (ಜುಲೈ ೩೧) ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಐಪಿಸಿ ೧೮೬೦(ಕಲಂ ೪೦೯, ೪೧೯, ೪೨೦, ೪೬೮, ೧೪೯) ಅಡಿ ಪ್ರಕರಣ ದಾಖಲಾಗಿದೆ.