ಮನೆ ರಾಜಕೀಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತೀರ್ಮಾನವಾಗಿಲ್ಲ: ಬಿ.ವೈ.ವಿಜಯೇಂದ್ರ

ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತೀರ್ಮಾನವಾಗಿಲ್ಲ: ಬಿ.ವೈ.ವಿಜಯೇಂದ್ರ

0

ಹೊಸದುರ್ಗ (Hosadurga): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಬಿಜೆಪಿ ಮುಖಂಡ ಎಸ್‌.ಲಿಂಗಮೂರ್ತಿ ಅವರ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿಯಬೇಕು ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ಪಕ್ಷ ನೀಡಿದ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದರು.

ಚುನಾವಣೆ ಸಮೀಪಿಸಿದಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಗುಬ್ಬಿ, ವರುಣಾ ಮತ್ತು ಹೊಸದುರ್ಗ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಜನರು ನನ್ನನ್ನು ಅಪೇಕ್ಷೆ ಪಡುತ್ತಿದ್ದಾರೆ. ಪಕ್ಷ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಹೇಳಿದರು.

ಎಸ್‌.ಲಿಂಗಮೂರ್ತಿ ಅವರು ಹೊಸದುರ್ಗ ಕ್ಷೇತ್ರದಲ್ಲಿದ್ದು, ಸಾಕಷ್ಟು ಜನಸೇವೆ ಮಾಡಿದ್ದಾರೆ. ಜನಸೇವೆಗೆ ಯಾವುದೇ ಸ್ಥಾನಮಾನ ಬೇಕಿಲ್ಲ. ಜನರಿಗೆ ಇನ್ನಷ್ಟು ಹತ್ತಿರವಾಗಿ ಅವರ ಕಷ್ಟ-ಸುಖಗಳನ್ನು ಆಲಿಸಲು ಜನಸಂಪರ್ಕ ಕೇಂದ್ರವನ್ನು ತೆರೆದಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಅವಕಾಶ ಸಿಗಬಹುದೇ ಎಂಬುದನ್ನು ಪಕ್ಷ ತೀರ್ಮಾನ ಮಾಡಲಿದೆ ಎಂದರು.

ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಅನಗತ್ಯ ಗೊಂದಲ ನಿರ್ಮಾಣ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸದ್ಯದಲ್ಲೇ ಇದನ್ನು ಸುಖಾಂತ್ಯ ಮಾಡಲಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.

ಕಲ್ಪನೆಯ ಆಧಾರದ ಮೇರೆಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಊಹಾಪೋಹ ಆಧರಿಸಿ ವಿವಾದ ಸೃಷ್ಟಿಸಲಾಗಿದೆ. ಶಿಕ್ಷಣ ಸಚಿವರು ಮಠಾಧೀಶರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ತಪ್ಪು ಕಲ್ಪನೆ ಹಾಗೂ ವಾಸ್ತವ ಮನವರಿಕೆ ಮಾಡಿಕೊಟ್ಟಿದ್ದಾರೆ. ಎಲ್ಲವನ್ನೂ ಪರಾಮರ್ಶಿಸಿ ತೀರ್ಮಾನಕ್ಕೆ ಬರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ವಿನಾಕಾರಣ ರಾಜಕೀಯ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಗೂಳಿಹಟ್ಟಿ ಶೇಖರ್‌ ನಮ್ಮೊಂದಿಗೆ ಇದ್ದಾರೆ. ಅವರು ಗೈರಾಗಿರುವುದರಿಂದ ಭಿನ್ನಾಭಿಪ್ರಾಯವಿದೆ ಎನ್ನಲಾಗದು. ಬೇರೆ ಕಾರ್ಯಕ್ರಮಗಳಿಗೆ ಬರಲಿದ್ದಾರೆ. ಕಾರ್ಯಕರ್ತರು ಒಗ್ಗೂಡಿ ಚುನಾವಣೆ ಎದುರಿಸಲಿದ್ದಾರೆ ಎಂದು ಹೇಳಿದರು.

ರಾಜ್ಯ ಕನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ ಇದ್ದರು.

ಹಿಂದಿನ ಲೇಖನ2 ವರ್ಷದ ಮಗುವಿನ ಮೇಲೆ ದೊಡ್ಡಪ್ಪನಿಂದಲೇ ಅತ್ಯಾಚಾರ
ಮುಂದಿನ ಲೇಖನಸಿದ್ದರಾಮಯ್ಯಗೆ ಮತಾಂಧರೆಲ್ಲರೂ ಆಪ್ತರೇ: ಸಿದ್ದರಾಮಯ್ಯ