ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2022-23ನೇ ಸಾಲಿನ ಬಜೆಟ್ ಭಾಷಣದಲ್ಲಿ ಸಚಿವರು ಕೃಷಿ ಕ್ಷೇತ್ರ, ರೈತರಿಗೆ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
ಮಂಗಳವಾರ ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಸುಮಾರು ಒಂದೂವರೆ ಗಂಟೆಗಳ ಕಾಲ ಬಜೆಟ್ ಮಂಡನೆ ಮಾಡಿದರು.
ಭಾಷಣದಲ್ಲಿ ಶೂನ್ಯ ಬಂಡವಾಳದ ಕೃಷಿ, ನೈಸರ್ಗಿಕ ಕೃಷಿಗೆ ಆದ್ಯತೆ ನೀಡಲಾಗುತ್ತದೆ. 2023ನೇ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಣೆ ಮಾಡಲಾಗುತ್ತದೆ ಎಂದರು.
ಕನಿಷ್ಠ ಬೆಂಬಲ ಬೆಲೆ ಘೋಷಣೆಗೆ ಬಜೆಟ್‌ನಲ್ಲಿ 2.87 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಜಮೀನು ನೋಂದಣಿಗಾಗಿ ಡಿಜಿಟಲೀಕರಣ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ ಎಂದು ಘೋಷಣೆ ಮಾಡಲಾಯಿತು. ಇದಕ್ಕಾಗಿ ‘ಒನ್ ನೇಷನ್ ಒನ್ ರಿಜಿಸ್ಟ್ರೇಷನ್’ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಎಂಟು ಭಾಷೆಗಳಲ್ಲಿ ಏಕರೂಪದ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ ಎಂದರು.
ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಯನ್ನು ದೇಶದಲ್ಲಿ ಪ್ರೋತ್ಸಾಹಿಸಲಾಗುತ್ತದೆ. ಸಣ್ಣ ರೈತರಿಗೆ ಪ್ರೋತ್ಸಾಹ ನೀಡಲು ರೈಲ್ವೆ ಮೂಲಕ ಮೂಲ ಸೌಕರ್ಯ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತದೆ.
ರಫ್ತು ಉತ್ತೇಜಿಸಲು ರಾಸಾಯನಿಕ ಮುಕ್ತ ಕೃಷಿಗೆ ಆದ್ಯತೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ರಾಸಾಯನಿಕ ಮುಕ್ತ ಉತ್ಪನ್ನಗಳ ರಫ್ತಿಗೆ ಬೇಡಿಕೆ ಇದೆ ಎಂದು ತಜ್ಞರು ಹೇಳಿದ್ದಾರೆ.
ಪರಿಶಿಷ್ಟ ಜಾತಿ/ ವರ್ಗದ ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಅರಣ್ಯ ಕೃಷಿ ಕಾರ್ಯಕ್ರಮ ಮಾಡುವವರಿಗೆ ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಬಜೆಟ್‌ನಲ್ಲಿ ಘೋಷಿಸಿದರು.