ಮುಂಬೈ(ಮಹಾರಾಷ್ಟ್ರ): ಕೋವಿಡ್-19 ಹಿನ್ನೆಲೆ 10 ಮತ್ತು 12ನೇ ತರಗತಿಗಳಿಗೆ ಆನ್‌ಲೈನ್ ಪರೀಕ್ಷೆ ನಡೆಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಪ್ರೇರೇಪಿಸಿದ ಆರೋಪದ ಮೇಲೆ ಯೂಟ್ಯೂಬರ್ ‘ಹಿಂದೂಸ್ಥಾನಿ ಭಾವು ಯಾನೆ ವಿಕಾಸ್ ಪಾಠಕ್’ ಸೇರಿದಂತೆ ಇಬ್ಬರನ್ನು ಧಾರಾವಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತ ಎರಡನೇ ಆರೋಪಿಯನ್ನು ಇಕ್ರಾರ್ ಖಾನ್ ವಖಾರ್ ಖಾನ್ ಎಂದು ಗುರುತಿಸಲಾಗಿದೆ. ಹಿಂದೂಸ್ತಾನಿ ಭಾವು ತನ್ನ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು, ಅದರಲ್ಲಿ ಮಹಾರಾಷ್ಟ್ರದ ಶಿಕ್ಷಣ ಸಚಿವ ವರ್ಷಾ ಗಾಯಕ್‌ವಾಡ್ ಅವರ ನಿವಾಸದ ಬಳಿಯಿರುವ ಧಾರಾವಿ ಪ್ರದೇಶದಲ್ಲಿ ಪ್ರತಿಭಟಿಸಲು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವಂತೆ ಅವರು ಹೇಳಿದ್ದಾರೆ.
ಕೋವಿಡ್ನಿಂದ ಅನೇಕ ಸಾವುಗಳು ಸಂಭವಿಸಿವೆ. ಈಗ ಒಮಿಕ್ರಾನ್ ರೂಪಾಂತರ ಬಂದಿದೆ. ಸರ್ಕಾರ ಮನೆಯಲ್ಲಿಯೇ ಇದ್ದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಹೇಳುತ್ತಿದೆ. ಆದ್ದರಿಂದ ಆಫ್‌ಲೈನ್ ಪರೀಕ್ಷೆ ನಡೆಸುವ ಮೂಲಕ ಮಕ್ಕಳ ಆರೋಗ್ಯವನ್ನು ಏಕೆ ಅಪಾಯಕ್ಕೆ ತಳ್ಳುತ್ತಿದ್ದಾರೆ ಎಂದು ಅವರು ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ.
ಆಫ್‌ಲೈನ್ ಪರೀಕ್ಷೆ ರದ್ದುಗೊಳಿಸುವಂತೆ ನಾನು ನಿಮಗೆ (ಸರ್ಕಾರ) ವಿನಂತಿಸಲು ಬಯಸುತ್ತೇನೆ. ಇಲ್ಲದಿದ್ದರೆ, ನಾನು ಮತ್ತು ನನ್ನ ವಿದ್ಯಾರ್ಥಿಗಳು ವರ್ಷಾ ಗಾಯಕ್‌ವಾಡ್ ಅವರ ಮನೆ ಬಾಗಿಲಿನ ಮುಂದೆ ಪ್ರತಿಭಟನೆ ನಡೆಸುತ್ತೇವೆ. ಅವರಿಗೆ ನ್ಯಾಯ ಸಿಗುವವರೆಗೂ ನಾನು ನಿಲ್ಲುವುದಿಲ್ಲ ಎಂದು ಭಾವು ಹೇಳಿದ್ದಾರೆ.
ವಿಡಿಯೋ ವೈರಲ್ ಆದ ನಂತರ, ಮಹಾರಾಷ್ಟ್ರದ ಮುಂಬೈನಲ್ಲಿರುವ ರಾಜ್ಯ ಶಿಕ್ಷಣ ಸಚಿವ ವರ್ಷಾ ಏಕನಾಥ್ ಗಾಯಕ್ವಾಡ್ ಅವರ ನಿವಾಸದ ಹೊರಗೆ ವಿದ್ಯಾರ್ಥಿಗಳು ಆಫ್‌ಲೈನ್ ಪರೀಕ್ಷೆಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಕೋವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 10 ಮತ್ತು 12ನೇ ತರಗತಿಗಳಿಗೆ ಆನ್‌ಲೈನ್ ಪರೀಕ್ಷೆಗಳನ್ನು ನಡೆಸಬೇಕೆಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು. ಈ ಹಿನ್ನೆಲೆ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ವಿಕಾಸ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.