ಮೈಸೂರು : 40 ಡಿಗ್ರಿಗೆ ಬಿಸಿಲಿನ ತಾಪ ಏರಿಕೆಯಾಗಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ 37 ರಿಂದ 39 ಡಿಗ್ರಿವರೆಗೆ ತಾಪಮಾನ ದಾಖಲಾಗುತ್ತಿರುವ ಮೈಸೂರಿನಲ್ಲಿಯೂ ಬದಲಾವಣೆ ತರಬೇಕೆಂಬ ಒತ್ತಾಯ ನಿತ್ಯವೂ ಬಿಸಿಲಿನಲ್ಲಿ ದುಡಿಯುವ ಅಸಂಘಟಿತ ಕಾರ್ಮಿಕ ವಲಯದಿಂದ ಕೇಳಿಬಂದಿದೆ ಎನ್ನಲಾಗಿದೆ.
ಹೀಗೆ ಮೈಸೂರು ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿಕೊಂಡಿರುವ 1.5 ಲಕ್ಷ ಹಾಗೂ ನೋಂದಾಯಿಸಿಕೊಳ್ಳದ ಅಂದಾಜು 60 ಸಾವಿರ ಸೇರಿ ಒಟ್ಟು 2 ಲಕ್ಷಕ್ಕೂ ಅಧಿಕ ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ. ಇವರೆಲ್ಲರೂ ನಿತ್ಯವೂ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಕಟ್ಟಡ ನಿರ್ಮಾಣ ಸೇರಿದಂತೆ ಇನ್ನಿತರ ಕೆಲಸಗಳನ್ನು ಬಿಸಿಲಿನಲ್ಲಿಯೇ ಮಾಡುತ್ತಾರೆ. ಹಿತಕರ ಹವಾಮಾನಕ್ಕೆ ಹೆಸರುವಾಸಿಯಾದ ಮೈಸೂರಿನ ತಾಪಮಾನವು ಇತ್ತೀಚೆಗೆ ದಾಖಲೆ ಮಟ್ಟದ 38-39 ಡಿಗ್ರಿ ತಲುಪಿದೆ. ಮಧ್ಯಾಹ್ನದ ವೇಳೆ ರಸ್ತೆಗಿಳಿಯುವುದು ಕಷ್ಟಸಾಧ್ಯವಾಗುತ್ತಿದೆ. ಇದರಿಂದ ಮುಖ್ಯವಾಗಿ ಬಿಸಿಲಿನಲ್ಲಿ ಕೂಲಿ ಕೆಲಸ ಮಾಡುವವರು ತೊಂದರೆಗೆ ಸಿಲುಕಿದ್ದಾರೆ. ಹೀಟ್ ಸ್ಟೊ್ರೕಕ್ನಂತಹ ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ಒಳಗಾಗುವ ಆತಂಕದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ 40 ಡಿಗ್ರಿ ತಾಪಮಾನವಿರುವ ಕಲ್ಯಾಣ ಕರ್ನಾಟಕದ ಬೀದರ್, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಸರಕಾರ ಕೆಲಸದ ಅವಧಿಯನ್ನು ಬದಲಿಸಿದೆ ಎನ್ನಲಾಗಿದೆ.
ಇದೇ ಮಾದರಿಯಲ್ಲಿಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ತಾಪಮಾನ ಹೆಚ್ಚುತ್ತಿದ್ದು, ಇಲ್ಲಿಯೂ ಕೆಲಸದ ವೇಳಾಪಟ್ಟಿ ಬದಲಾವಣೆ ಮಾಡಬೇಕೆಂಬುದು ಸರಕಾರಿ ನೌಕರರು, ಕಾರ್ಮಿಕ ಸಂಘಟನೆಗಳ ಒತ್ತಾಯವಾಗಿದೆ ಎಂಬ ಮಾಹಿತಿ ಬಂದಿರುವ ಹಿನ್ನೆಲೆ ಮೈಸೂರು ಮಹಾನಗರ ಪಾಲಿಕೆಯು 2026ರ ಏಪ್ರಿಲ್ನಿಂದ ಜಾರಿಗೆ ಬರುವಂತೆ ಪರಿಷ್ಕರಿಸಿದೆ. ಈ ಮೊದಲು ಬೆಳಗ್ಗೆ 6.30ರಿಂದ ಮಧ್ಯಾಹ್ನ 2 ಗಂಟೆವರೆಗೆ ಕೆಲಸದ ಅವಧಿ ಇತ್ತು. ಅದನ್ನು ಈಗ ಬೆಳಗ್ಗೆ 5.30ರಿಂದ ಮಧ್ಯಾಹ್ನ 1 ಗಂಟೆಗೆ ಬದಲಾಯಿಸಲಾಗಿದೆ. ಸೂರ್ಯನ ಪ್ರಖರತೆ ಹೆಚ್ಚಾಗುವ ಮೊದಲೇ ಸ್ವಚ್ಛತಾ ಕಾರ್ಯವನ್ನು ಪೂರ್ಣಗೊಳಿಸುಧಿತ್ತಾರೆ. ತೀವ್ರ ಬಿಸಿಲು, ನಿರ್ಜಲೀಕರಣ ಮತ್ತು ಸುಸ್ತಿನಂತಹ ಸಮಸ್ಯೆಗಳಿಂದ ರಕ್ಷಿಸುವುದು ಇದರ ಮುಖ್ಯ ಉದ್ದೇಶ. ಇದೇ ರೀತಿಯ ಬದಲಾವಣೆಗಳನ್ನು ಸರಕಾರಿ ನೌಕರರು, ಅಸಂಘಟಿತ ವಲಯದ ಕಾರ್ಮಿಕರಿಗೂ ಅನ್ವಯವಾಗುವಂತೆ ಜಾರಿಗೆ ತರಬೇಕು ಎಂಬ ಒತ್ತಾಯ ಹೆಚ್ಚಾಗಿದೆ ಎನ್ನಬಹುದು.















