ಮನೆ ಸುದ್ದಿ ಜಾಲ ರಾಯಚೂರಿನಲ್ಲಿ ಅಕಾಲಿಕ ಮಳೆ – ಸಜ್ಜೆ-ಜೋಳ ಬೆಳೆ ಹಾನಿ..!

ರಾಯಚೂರಿನಲ್ಲಿ ಅಕಾಲಿಕ ಮಳೆ – ಸಜ್ಜೆ-ಜೋಳ ಬೆಳೆ ಹಾನಿ..!

0

ರಾಯಚೂರು : ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಹಲವೆಡೆ ಸಜ್ಜೆ, ಜೋಳದ ಬೆಳೆ ಹಾಳಾಗಿದ್ದು, ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಜಿಲ್ಲೆಯ ದೇವದುರ್ಗ ತಾಲೂಕಿನ ಹೆಚ್.ಸಿದ್ದಾಪುರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆಹಾನಿಯಾಗಿದೆ.

ಹೆಚ್.ಸಿದ್ದಾಪುರ ಗ್ರಾಮದ ರೈತ ಕೃಷ್ಣಾಗೆ ಸೇರಿದ 7 ಎಕರೆ ಸಜ್ಜೆ ಬೆಳೆ ಸಂಪೂರ್ಣ ನೆಲಕ್ಕಚ್ಚಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆ ನಷ್ಟದಿಂದ ರೈತ ಕಂಗಾಲಾಗಿದ್ದಾರೆ. ನೆಲಕ್ಕಚ್ಚಿದ ಬೆಳೆಯನ್ನ ಎತ್ತಿನಿಲ್ಲಿಸಿ ಉಳಿಸಿಕೊಳ್ಳಲು ರೈತ ಹರಸಾಹಸ ಪಡುತ್ತಿದ್ದಾರೆ. ಗಾಳಿ ಹಾಗೂ ಮಳೆಗೆ ಜಿಲ್ಲೆಯ ಹಲವೆಡೆ ಭತ್ತ, ಜೋಳದ ಬೆಳೆಗಳಿಗೆ ಹಾನಿಯಾಗಿದೆ. ಕೂಡಲೇ ಬೆಳೆ ಪರಿಶೀಲನೆ ನಡೆಸಿ, ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಅಕಾಲಿಕ ಮಳೆ ಸುರಿಯುತ್ತಿದ್ದು, ಜಿಲ್ಲೆಯ ರೈತರನ್ನ ಕಂಗೆಡಿಸಿದೆ. ಒಣಗಲು ಹಾಕಿದ್ದ ಮೆಣಸಿನಕಾಯಿಗೂ ಸಹ ಪರಿಣಾಮ ಬೀರಿದೆ. ಮೆಣಸಿನಕಾಯಿ ಒದ್ದೆಯಾಗಿದ್ದು, ರೈತರನ್ನ ಚಿಂತೆಗೀಡುಮಾಡಿದೆ.