ಮೈಸೂರು(Mysuru): ಅ.13 ರಿಂದ 16 ವರೆಗೆ ಕೆ.ಆರ್. ಪೇಟೆ ತಾಲೂಕಿನ ತ್ರಿವೇಣಿ ಸಂಗಮದ ಶ್ರೀ ಮಲೆ ಮಹದೇಶ್ವರ ಮಹಾ ಕುಂಭಮೇಳದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾಹಿತಿ ನೀಡಿದರು.
ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಈ ಕುರಿತು ಶ್ರೀಗಳು ಮಾತನಾಡಿದರು. ಸಿಎಂ ಯೋಗಿ ಆದಿತ್ಯನಾಥ ಸೇರಿದಂತೆ ದೇಶಾದ್ಯಂತ ಸಾಧು-ಸಂತರು ಮೇಳದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಅ. 13 ರಿಂದ 16 ರವರೆಗೆ ಕೆ.ಆರ್. ಪೇಟೆ ತಾಲೂಕಿನ ಅಂಬಿಗರ ಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ಆಯೋಜಿಸಲಾಗಿದೆ. 2013ರಲ್ಲಿ ಆಯೋಜಿಸಲಾಗಿದ್ದ ಕುಂಭಮೇಳ ಯಶಸ್ವಿಯಾಗಿತ್ತು. ಈಗ ಒಂಬತ್ತು ವರ್ಷಗಳ ನಂತರ ಮತ್ತೆ ಕುಂಭಮೇಳ ನಡೆಯಲಿದೆ. ನಾಳೆಯಿಂದ ವಿಶೇಷ ಪೂಜೆ ಇರಲಿವೆ. ತ್ರಿನೇತ್ರ ಸ್ವಾಮಿ ಸಾನಿಧ್ಯದಲ್ಲಿ ವಿಧಿವಿಧಾನಗಳು ಜರುಗಲಿವೆ. ಮಹದೇಶ್ವರ ಮೂರ್ತಿ ಸ್ಥಾಪನೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.
ಇದೊಂದು ಪವಿತ್ರ ಕ್ಷೇತ್ರ. ಮಹದೇಶ್ವರರು ಮೊದಲಿಗೆ ಇಲ್ಲಿ ಅನುಷ್ಠಾನ ಮಾಡಿದ್ದರು. ಇದು ಬಾಳೆ ಎಲೆಯಲ್ಲಿ ನದಿ ದಾಟಿದ ಪವಾಡ ಸ್ಥಳವಾಗಿದೆ. ಮೇಳದಲ್ಲಿ ಅ.16 ರಂದು ನಡೆಯುವ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾಲ್ಗೊಳ್ಳಲಿದ್ದಾರೆ. ಅಂದು ನದಿ ಮಟ್ಟ ನೋಡಿಕೊಂಡು ಗಂಗಾರತಿ ಮಾಡಲಾಗುವುದು. ಎಲ್ಲ ಭಕ್ತಾದಿಗಳಿಗೆ ಸ್ನಾನಘಟ್ಟ ಸೇರಿದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಪ್ರಪ್ರಥಮ ಬಾರಿಗೆ ಪೂಜ್ಯರ ಸಮ್ಮುಖದಲ್ಲಿ ಟಿ. ನರಸೀಪುರದಲ್ಲಿ ಕುಂಭಮೇಳ ಪ್ರಾರಂಭವಾಗಿತ್ತು. ಕೆಆರ್ ಪೇಟೆ ತಾಲೂಕಿನ ಅಂಬಿಗರ ಹಳ್ಳಿ, ಸಂಗಾಪುರ, ಪುರ ಎಂಬ 3 ಊರುಗಳಲ್ಲಿ ಮೂರು ನದಿಗಳು ಕಾಣುತ್ತವೆ. ಬೇರೆ ಕಡೆ ಗುಪ್ತ ಗಾಮಿನಿಯಾಗಿ ನದಿಗಳು ಹರಿದರೆ, ಇಲ್ಲಿ ಮೂರು ನದಿಗಳು ಕಣ್ಣಾರೆ ಕಾಣುತ್ತವೆ ಎಂದು ಹೇಳಿದರು.
ಮಂಡ್ಯ ಜಿಲ್ಲಾಧಿಕಾರಿ ಅಶ್ವತಿ ಮಾತನಾಡಿ, 9 ವರ್ಷಗಳ ನಂತರ ಕುಂಭಮೇಳ ನಡೆಯುತ್ತಿದ್ದು, 5 ರಿಂದ 6 ಲಕ್ಷ ಜನ ಸೇರಬಹುದು. ಸಮಾರಂಭಕ್ಕಾಗಿ ಹೆಚ್ಚುವರಿ ಬಸ್ ಓಡಿಸಲಾಗುವುದು. ಭೂ ವರಾಹಸ್ವಾಮಿ ದೇವಸ್ಥಾನಕ್ಕೆ ಬೋಟ್ ವ್ಯವಸ್ಥೆ ಕೂಡ ಮಾಡಿದ್ದೇವೆ. ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಸಚಿವ ನಾರಾಯಣಗೌಡ ಮಾತನಾಡಿ, ಕಳೆದ ಬಾರಿ ನಡೆದ ಕುಂಭಮೇಳದ ಬಗ್ಗೆ ಜನರಿಗೆ ಸರಿಯಾಗಿ ಗೊತ್ತಿರಲಿಲ್ಲ. ನಾನೂ ಹೊಸದಾಗಿ ಗೆದ್ದಿದ್ದರಿಂದ ಅಷ್ಟೊಂದು ಮಾಹಿತಿ ಇರಲಿಲ್ಲ. ಈ ಬಾರಿ ದೊಡ್ಡ ಮಟ್ಟದ ಶೆಡ್ ಹಾಕಿದ್ದೇವೆ. ಮಳೆ ಬಂದರೂ ತೊಂದರೆಯಾಗದ ಹಾಗೆ ವ್ಯವಸ್ಥೆ ಮಾಡಲಾಗಿದೆ. ಇದು ಭಗವಂತನ ಸ್ಥಾನ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಸೇವಕನಾಗಿ ದುಡಿಯುತ್ತಿದ್ದೇನೆ. ಇದು ನಾರಾಯಣ ಗೌಡರ ಸಮಾರಂಭವಲ್ಲ ಎಂದು ನುಡಿದರು.
ಸಚಿವ ಗೋಪಾಲಯ್ಯ ಮಾತನಾಡಿ, ಕುಂಭಮೇಳಕ್ಕಾಗಿ ಸರ್ಕಾರದಿಂದ 4 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕಳೆದ ಸಾರಿ 50 ಲಕ್ಷ ಕೊಡಲಾಗಿತ್ತು. ಭಕ್ತಾದಿಗಳಿಂದ, ದಾನಿಗಳಿಂದ 1000 ಕ್ವಿಂಟಲ್ ಅಕ್ಕಿ ಬಂದಿದೆ. ಭಕ್ತಾದಿಗಳು, ದಾನಿಗಳು ಇನ್ನೂ ಸಹಕಾರ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.