ಲಕ್ನೋ : ಉತ್ತರ ಪ್ರದೇಶದ ಏಳು ಹಂತಗಳಲ್ಲಿ ಚುನಾವಣೆಯಲ್ಲಿ ನಾಳೆ ಮೊದಲ ಹಂತದ ಚುನಾವಣಾ ಮತದಾನ ನಡೆಯಲಿದ್ದು, 11 ಜಿಲ್ಲೆಗಳ 58 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಶಾಮ್ಲಿ, ಹಾಪುರ್, ಗೌತಮ್ ಬುದ್ಧ ನಗರ, ಮುಜಾಫರ್‌ನಗರ, ಮೀರತ್, ಬಾಗ್‌ಪತ್, ಘಾಜಿಯಾಬಾದ್, ಬುಲಂದ್‌ಶಹರ್, ಅಲಿಘರ್, ಮಥುರಾ ಮತ್ತು ಆಗ್ರಾ ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಸುಮಾರು 2.27 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯಲಿದ್ದು, ಸಂಜೆ ಆರು ಗಂಟೆವರೆಗೆ ಮತದಾನ ಚಲಾಯಿಸಲು ಅವಕಾಶ ಇದೆ. ಮೊದಲ ಹಂತದ ಚುನಾವಣೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳು ನಡೆಸಿದೆ.
ಕ್ಷೇತ್ರದಲ್ಲಿ ನಿನ್ನೆ ಸಂಜೆಯಿಂದಲೇ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಇಂದು ಮನೆ ಮನೆ ಪ್ರಚಾರ ಆರಂಭವಾಗಿದೆ. ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು 623 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ರಾಜ್ಯ ಸರ್ಕಾರದ ಸಚಿವರಾದ ಶ್ರೀಕಾಂತ್ ಶರ್ಮಾ, ಸುರೇಶ್ ರಾಣಾ, ಸಂದೀಪ್ ಸಿಂಗ್, ಕಪಿಲ್ ದೇವ್ ಅಗರ್ವಾಲ್, ಅತುಲ್ ಗಾರ್ಗ್ ಮತ್ತು ಚೌಧರಿ ಲಕ್ಷ್ಮೀ ನಾರಾಯಣ್ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಮೊದಲ ಹಂತದ ಮತದಾನದ ಕ್ಷೇತ್ರದಲ್ಲಿ ಬಹುತೇಕ ರಾಜಕೀಯ ಪಕ್ಷಗಳು ಡಿಜಿಟಲ್ ಮೂಲಕ ಪ್ರಚಾರ ನಡೆಸಿ, ಮತದಾರರ ಓಲೈಕೆ ನಡೆಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಸಮಾವೇಶ ಮತ್ತು ರೋಡ್ ಶೋಗೆ ನಿರ್ಬಂಧ ವಿಧಿಸಿದ ಹಿನ್ನಲೆ ವರ್ಚುಯಲ್ ಸಮಾವೇಶವನ್ನು ರಾಜಕೀಯ ಪಕ್ಷಗಳು ಆಯ್ಕೆ ಮಾಡಿಕೊಂಡವು