ಮನೆ ಪೌರಾಣಿಕ ಉಪಮನ್ಯು

ಉಪಮನ್ಯು

0

ಉಪಮನ್ಯುವಿನ ಈ ಕಥೆಯು ವ್ಯಾಸ ಮಹಾಭಾರತದ ಆದಿ ಪರ್ವದ ಪೌಷ್ಯಪರ್ವ (ಅಧ್ಯಾಯ ೩) ದಲ್ಲಿ ಬರುತ್ತದೆ. ಈ ಕಥೆಯನ್ನು ನೈಮಿಷಾರಣ್ಯದಲ್ಲಿ ಸೂತ ಪೌರಾಣಿಕ ಉಗ್ರಶ್ರವನು ಶೌನಕಾದಿ ಮುನಿಗಳಿಗೆ ಹೇಳಿದನು.

ಅಯೋದ ಧೌಮ್ಯನ ಇನ್ನೊಬ್ಬ ಶಿಷ್ಯನ ಹೆಸರು ಉಪಮನ್ಯು. ಉಪಾಧ್ಯಾಯನು ಅವನನ್ನು “ವತ್ಸ ಉಪಮನ್ಯು! ಗೋವುಗಳನ್ನು ರಕ್ಷಿಸು” ಎಂದು ಕಳುಹಿಸಿದನು. ಉಪಾಧ್ಯಾಯನ ವಚನದಂತೆ ಅವನು ಗೋವುಗಳನ್ನು ರಕ್ಷಿಸಲು ಹೋದನು. ಇಡೀ ದಿನ ಗೋವುಗಳನ್ನು ರಕ್ಷಿಸಿ ದಿವಸಕ್ಷಯವಾಗುತ್ತಿದ್ದಂತೆ ಉಪಾಧ್ಯಾಯನ ಬಳಿಬಂದು ನಮಸ್ಕರಿಸಿ ಅವನ ಎದಿರು ನಿಂತನು. ಅವನು ದಷ್ಟಪುಷ್ಟನಾಗಿರುವುದನ್ನು ನೋಡಿ ಉಪಾಧ್ಯಾಯನು ಹೇಳಿದನು: “ವತ್ಸ ಉಪಮನ್ಯು! ಇಷ್ಟು ದಷ್ಟಪುಷ್ಟನಾಗಿರಲು ಏನು ಮಾಡುತ್ತೀಯೆ?”

ಅವನು ಉಪಾಧ್ಯಾಯನಿಗೆ ಉತ್ತರಿಸಿದನು: “ಭಿಕ್ಷೆಬೇಡಿ ನನ್ನ ಹೊಟ್ಟೆ ಹೊರೆದುಕೊಳ್ಳುತ್ತೇನೆ.” ಉಪಾಧ್ಯಾಯನು ಅವನಿಗೆ ಪುನಃ ಹೇಳಿದನು: “ಭಿಕ್ಷವನ್ನು ನನಗೆ ನೈವೇದ್ಯಮಾಡದೇ ಉಪಯೋಗಿಸಕೂಡದು.” ಹೀಗೆ ಕೇಳಿದನಂತರ ಪುನಃ ಅವನು ಗೋವುಗಳನ್ನು ರಕ್ಷಿಸಲು ಹೋದನು. ರಕ್ಷಿಸಿಯಾದ ನಂತರ ಉಪಾಧ್ಯಾಯನ ಎದಿರು ನಿಂತು ನಮಸ್ಕರಿಸಿದನು. ಈಗಲೂ ಕೂಡ ಅವನು ದಷ್ಟ ಪುಷ್ಠನಾಗಿದ್ದುದನ್ನು ನೋಡಿ ಕೇಳಿದನು: “ವತ್ಸ ಉಪಮನ್ಯು! ಏನನ್ನೂ ಇಟ್ಟುಕೊಳ್ಳದೇ ನಿನ್ನ ಸರ್ವ ಭಿಕ್ಷವನ್ನೂ ನನಗೆ ಕೊಟ್ಟಿದ್ದೀಯೆ. ಈಗ ನೀನು ಹೇಗೆ ನಿನ್ನ ಹೊಟ್ಟೆ ಹೊರೆದುಕೊಳ್ಳುತ್ತಿರುವೆ?”

ಹೀಗೆ ಕೇಳಿದ ಉಪಾಧ್ಯಾಯನಿಗೆ ಅವನು ಉತ್ತರಿಸಿದನು: “ಒಮ್ಮೆ ಪಡೆದ ಭಿಕ್ಷೆಯನ್ನು ನಿಮಗೆ ಒಪ್ಪಿಸಿ ನಂತರ ಪುನಃ ಭಿಕ್ಷೆಬೇಡಲು ಹೋಗುತ್ತೇನೆ. ಈ ರೀತಿ ನನ್ನ ಹೊಟ್ಟೆ ಹೊರೆದುಕೊಳ್ಳುತ್ತೇನೆ.” ಅದಕ್ಕೆ ಉಪಾಧ್ಯಾಯನು ಉತ್ತರಿಸಿದನು: “ಇದು ಗುರುವಿಗೆ ನಡೆದುಕೊಳ್ಳುವ ನ್ಯಾಯ ಮಾರ್ಗವಲ್ಲ. ಎರಡನೇ ಸಾರಿ ಭಿಕ್ಷೆಬೇಡುವುದರಿಂದ ನೀನು ಅನ್ಯ ಭಿಕ್ಷುಕರಿಗೆ ಹೊಟ್ಟೆ ಹೊರೆದುಕೊಳ್ಳಲು ಅಡ್ಡಿಯಾಗುತ್ತಿರುವೆ. ನಿನ್ನ ಈ ರೀತಿಯು ಲುಬ್ಧವಾಗಿದೆ.”

ಹೀಗೆ ಕೇಳಿದ ಅವನು ಗೋವುಗಳನ್ನು ರಕ್ಷಿಸಲು ಹೋದನು. ಗೋವುಗಳನ್ನು ರಕ್ಷಿಸಿ ಪುನಃ ಉಪಾಧ್ಯಾಯನನ ಮನೆಗೆ ಬಂದು ಉಪಾಧ್ಯಾಯನ ಎದುರಿನಲ್ಲಿ ನಿಂತು ನಮಸ್ಕರಿಸಿದನು. ಈಗಲೂ ಅವನು ದಷ್ಟಪುಷ್ಟನಾಗಿರುವುದನ್ನು ನೋಡಿ ಉಪಾಧ್ಯಾಯನು ಪುನಃ ಕೇಳಿದನು: “ನಿನ್ನ ಸರ್ವ ಭಿಕ್ಷವನ್ನೂ ನಾನು ತೆಗೆದುಕೊಂಡಿದ್ದೇನೆ, ಮತ್ತು ನೀನು ಎರಡನೇ ಬಾರಿ ಭಿಕ್ಷೆಗೆಂದು ಹೋಗುವುದಿಲ್ಲ. ಆದರೂ ನೀನು ದಷ್ಟಪುಷ್ಟನಾಗಿದ್ದೀಯೆ. ನಿನ್ನ ಹೊಟ್ಟೆಯನ್ನು ಹೊರೆಯಲು ಏನು ಮಾಡುತ್ತಿರುವೆ?” ಆಗ ಅವನು ಉಪಾಧ್ಯಾಯನಿಗೆ ಉತ್ತರಿಸಿದನು: “ಈ ಹಸುಗಳ ಹಾಲನ್ನು ಕುಡಿದು ನನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದೇನೆ.” ಅದಕ್ಕೆ ಉಪಾಧ್ಯಾಯನು ಉತ್ತರಿಸಿದನು: “ನನ್ನ ಅನುಮತಿಯಿಲ್ಲದೇ ನೀನು ಹಾಲನ್ನು ಕುಡಿಯುವುದು ಸರಿಯಲ್ಲ.”

“ಹಾಗೆಯೇ ಮಾಡುತ್ತೇನೆ” ಎಂದು ವಚನವನ್ನಿತ್ತ ಅವನು ಗೋವುಗಳನ್ನು ರಕ್ಷಿಸಿ ಪುನಃ ಉಪಾಧ್ಯಾಯನ ಮನೆಗೆ ಬಂದು ಗುರುವಿನ ಎದಿರು ನಿಂತು ಸಮಸ್ಕರಿಸಿದನು. ಪುನಃ ದಷ್ಟಪುಷ್ಟವಾಗಿರುವ ಅವನನ್ನು ನೋಡಿ ಉಪಾಧ್ಯಾಯನು ಹೇಳಿದನು: “ಭಿಕ್ಷೆಯನ್ನೂ ಬೇಡುತ್ತಿಲ್ಲ. ಹಾಲನ್ನೂ ಕುಡಿಯುವುದಿಲ್ಲ. ಆದರೂ ದಷ್ಟಪುಷ್ಠನಾಗಿರುವೆ. ನಿನ್ನ ಹೊಟ್ಟೆ ಹೊರೆಯಲು ಏನು ಮಾಡುತ್ತಿರುವೆ?” ಉಪಾಧ್ಯಾಯನ ಈ ಪ್ರಶ್ನೆಗೆ ಅವನು ಉತ್ತರಿಸಿದನು: “ಕರುಗಳು ತಾಯಂದಿರ ಮೊಲೆ ಕುಡಿಯುವಾಗ ಹೊರಗೆ ಬೀಳುವ ಹಾಲಿನ ನೊರೆಯನ್ನು ನಾನು ಕುಡಿಯುತ್ತೇನೆ.” ಅದಕ್ಕೆ ಉಪಾಧ್ಯಾಯನು ಉತ್ತರಿಸಿದನು: “ನಿನ್ನ ಮೇಲಿನ ಅನುಕಂಪದಿಂದ ಈ ಕರುಗಳು ಹೆಚ್ಚು ನೊರೆಯನ್ನು ಚೆಲ್ಲುತ್ತವೆ. ಈ ರೀತಿಯಲ್ಲಿ ಅವುಗಳು ತಮಗೇ ಆಹಾರವನ್ನು ಕಡಿಮೆಮಾಡಿಕೊಳ್ಳುತ್ತವೆ. ಈ ರೀತಿ ಮಾಡುವುದೂ ಸರಿಯಲ್ಲ.”

“ಹಾಗೆಯೇ ಮಾಡುತ್ತೇನೆ” ಎಂದು ವಚನವನ್ನಿತ್ತು ಅವನು ನಿರಾಹಾರನಾಗಿ ಗೋವುಗಳನ್ನು ಕಾಯಲು ಹೋದನು. ಅವನು ಭಿಕ್ಷೆ ಬೇಡಲು ಹೋಗಲಿಲ್ಲ, ಹಾಲನ್ನು ಕುಡಿಯಲಿಲ್ಲ, ಕೆನೆಯನ್ನೂ ನೆಕ್ಕಲಿಲ್ಲ.

ಒಮ್ಮೆ ಅರಣ್ಯದಲ್ಲಿ ಹಸಿವೆಯಿಂದ ಬಳಲಿದ ಅವನು ಅರ್ಕಪತ್ರಗಳನ್ನು ತಿಂದನು. ಅರ್ಕಪತ್ರಗಳನ್ನು ಸೇವಿಸಿದುದರಿಂದ ಅದರ ಕ್ಷಾರ, ಕಟು ಮತ್ತು ಉಷ್ಣದ ಗುಣಗಳಿಂದಾಗಿ ಅವನ ಕಣ್ಣುಗಳು ಕುರುಡಾದವು. ಅಂಧನಾಗಿ, ದಾರಿಯನ್ನು ಕಾಣದೇ ಒಂದು ಬಾವಿಯಲ್ಲಿ ಬಿದ್ದನು. ಅವನು ಬರದೇ ಇದ್ದುದನ್ನು ನೋಡಿ ಉಪಾಧ್ಯಾಯನು ತನ್ನ ಶಿಷ್ಯರಿಗೆ ಹೇಳಿದನು: “ಉಪಮನ್ಯುವು ನನ್ನ ಎಲ್ಲ ರೀತಿಯ ಪ್ರತಿಬಂಧದಿಂದ ಸಿಟ್ಟಾಗಿರಬಹುದು. ಅದಕ್ಕಾಗಿಯೇ ಅವನು ಬರುವುದನ್ನು ತಡಮಾಡುತ್ತಿದ್ದಾನೆ.” ಹೀಗೆ ಹೇಳುತ್ತಾ ಅವನು ಅರಣ್ಯಕ್ಕೆ ಹೋಗಿ ಅಲ್ಲಿ ಉಪಮನ್ಯುವನ್ನು ಕರೆಯ ತೊಡಗಿದನು: “ಉಪಮನ್ಯು! ಎಲ್ಲಿದ್ದೀಯೆ? ವತ್ಸ! ಇಲ್ಲಿ ಬಾ.”

ಉಪಾಧ್ಯಾಯನ ಆ ಕರೆಯನ್ನು ಕೇಳಿ ಉಚ್ಛ ಸ್ವರದಲ್ಲಿ ಕೂಗಿ ಹೇಳಿದನು: “ಉಪಾಧ್ಯಾಯರೇ! ನಾನು ಇಲ್ಲಿ ಬಾವಿಯಲ್ಲಿ ಬಿದ್ದಿದ್ದೇನೆ.” ಆಗ ಉಪಾಧ್ಯಾಯನು ತಿರುಗಿ ಕೇಳಿದನು: “ಬಾವಿಯಲ್ಲಿ ಹೇಗೆ ಬಿದ್ದೆ?” ಅದಕ್ಕೆ ಉತ್ತರಿಸಿದನು: “ಅರ್ಕಪತ್ರಗಳನ್ನು ತಿಂದು ಅಂಧನಾಗಿದ್ದೇನೆ. ಆದ್ದರಿಂದ ಬಾವಿಯಲ್ಲಿ ಬಿದ್ದಿದ್ದೇನೆ.”

ಆಗ ಉಪಾಧ್ಯಾಯನು ಹೇಳಿದನು: “ಅಶ್ವಿನಿಯರನ್ನು ಸ್ತುತಿಸು. ಆ ದೇವವೈದ್ಯರು ನಿನ್ನ ದೃಷ್ಟಿಯನ್ನು ಸರಿಮಾಡುವರು.”

ಉಪಾಧ್ಯಾಯನ ಮಾತಿನಂತೆ ಋಗ್ವೇದದಲ್ಲಿರುವ ಶ್ಲೋಕಗಳಿಂದ ಅಶ್ವಿನೀ ದೇವತೆಗಳನ್ನು ಸ್ತುತಿಸಲು ತೊಡಗಿದನು: “ಅಶ್ವಿನೀ ದೇವತೆಗಳೇ! ನೀವು ಎಲ್ಲರಿಗಿಂತಲೂ ಮೊದಲು ಯಜ್ಞಕ್ಕೆ ಹೋಗುವವರು. ಅಶ್ವಜಾತಿಯ ಸ್ವಭಾವವನ್ನು ಅನುಸರಿಸಿ ಹುಟ್ಟಿದವರು. ನಿಮ್ಮ ಪ್ರಕಾಶವು ಅಗ್ನಿ ಸಮಾನ. ನೀವು ಸ್ವಸಾಮರ್ಥ್ಯದಿಂದ ಅನೇಕ ರೂಪಗಳನ್ನು ಧರಿಸುತ್ತೀರಿ. ನಿಮ್ಮ ಗಮನವು ಮನೋಹರವಾದುದು. ನೀವು ರಜೋಗುಣ ರಹಿತರಾಗಿದ್ದು ಎಲ್ಲ ಲೋಕಗಳಲ್ಲಿಯೂ ನಿಮ್ಮ ವಿಮಾನವನ್ನು ನಡೆಸುತ್ತೀರಿ. ನಿಮ್ಮನ್ನು ನಾನು ಈ ವಾಕ್ಕುಗಳಿಂದ ಸ್ತುತಿಸುತ್ತೇನೆ. ಪಕ್ಷಿಗಳಂತೆ ವೇಗವಾಗಿ ಹೋಗುವ ಸುವರ್ಣಮಯ ವಿಮಾನಗಳಲ್ಲಿ ಕುಳಿತು ನೀವು ಹೋಗುತ್ತೀರಿ. ನಿಮ್ಮ ಮೈ ಚಿನ್ನದ ಬಣ್ಣದ್ದು. ನೀವು ಆರೋಗ್ಯ ಶಕ್ತಿಯನ್ನು ಕೊಡುತ್ತೀರಿ. ನೀವು ಪರಲೋಕ ಬಂಧುಗಳನ್ನೂ ಭಕ್ತರನ್ನೂ ಆಪತ್ತುಗಳಿಂದ ಉದ್ಧರಿಸುತ್ತೀರಿ. ನೀವು ಸುಳ್ಳಾಡುವುದಿಲ್ಲ. ನೀವು ಅಶ್ವರೂಪದಲ್ಲಿದ್ದ ಸೂರ್ಯದೇವನ ಮೂಗಿನ ಹೊಳ್ಳೆಗಳಿಂದ ಹುಟ್ಟಿದಿರಿ. ನಿಮ್ಮ ಮೂಗುಗಳು ಸುಂದರ. ಸೂರ್ಯನ ಮಕ್ಕಳಾಗಿದ್ದು ತಂದೆಯ ಸಾಮರ್ಥ್ಯದಿಂದ ಕೃಷ್ಣ ಕುಷ್ಠ ರೋಗವನ್ನು ಯಶಸ್ವಿಯಾಗಿ ಹೋಗಲಾಡಿಸುವ ವೈದ್ಯರು ನೀವು. ನೀವು ಒಳ್ಳೆಯ ಮೈಬಣ್ಣವನ್ನೂ ನೇತ್ರಶಕ್ತಿಯನ್ನೂ ನೀಡುತ್ತೀರಿ. ಹೇಗೆ ನೇಕಾರರು ದಾರದ ಜೊತೆ ಸೇರಿದ ಕಪ್ಪು ಕೂದಲು ಮುಂತಾದವುಗಳನ್ನು ತೆಗೆದು ಹಾಕಿ ಶುದ್ಧ ದಾರದಿಂದ ನೇಯುತ್ತಾರೆಯೋ ಹಾಗೆ ನೀವು ಶ್ಯಾಮ ಕುಷ್ಠವನ್ನು ತೊಡೆದುಹಾಕಿ ಒಳ್ಳೆಯ ಶುಕ್ರಕಾಂತಿಯನ್ನು ನೀಡುತ್ತೀರಿ. ಅಶ್ವಿನೀ ದೇವತೆಗಳೇ! ಗರುಡನಷ್ಟೇ ಪರಾಕ್ರಮಿ ಮತ್ತು ವೇಗಶಾಲಿಯಾದ ಒಂದು ನಾಯಿಯು ಗುಬ್ಬಚ್ಚಿಯ ಜಾತಿಯ ಒಂದು ಹೆಣ್ಣು ಪಕ್ಷಿಯನ್ನು ಬಾಯಲ್ಲಿ ಕಚ್ಚಿ ಕೊಂಡಿದ್ದಾಗ ನೀವು ಅದನ್ನು ಬಿಡಿಸಿ ಅದಕ್ಕೆ ಪುನಃ ಜೀವನ ಸೌಖ್ಯವನ್ನು ದೊರಕಿಸಿಕೊಟ್ಟಿರಿ. ಸೋಮಯಾಗದಲ್ಲಿ ಇಂದ್ರನೇ ಮೊದಲಾದ ದೇವತೆಗಳಿದ್ದರೂ ಯಜಮಾನನನ್ನು ಕಾಡಿಸುವ ತುಂಟ ಹಸುಗಳ ಮೇಲ್ವಿಚಾರಣೆಯು ನಿಮ್ಮಿಬ್ಬರ ಹೊರತು ಬೇರೆ ಯಾರಿಗೂ ಸಾದ್ಯವಿಲ್ಲ ಎಂದು ತಿಳಿದು ಅವುಗಳನ್ನು ಕಾಪಾಡುವುದಕ್ಕೆ ನಿಮ್ಮನ್ನೇ ಪ್ರಾರ್ಥಿಸಿದ್ದನು. ೩೬೦ ಹಸುಗಳು ಒಂದು ವರ್ಷ ಪರ್ಯಂತವೂ ತಮ್ಮ ಸರದಿಯ ಪ್ರಕಾರ ಹಾಲು ಕರೆದು ಘರ್ಮವನ್ನು ಸಿದ್ಧಪಡಿಸಿ ಕೊಡುತ್ತವೆ. ಘರ್ಮವನ್ನು ತಯಾರಿಸಲು ಒಂದೊಂದು ದಿನಕ್ಕೆ ಒಂದೊಂದು ಹಸುವು ಹಾಲನ್ನು ನೀಡುವುದರಿಂದ, ಅವುಗಳೆಲ್ಲವೂ ಪ್ರತ್ಯೇಕ ಕೊಟ್ಟಿಗೆಗಳಲ್ಲಿ ಇರುವಂತೆ ತೋರುತ್ತವೆ. ಅವುಗಳನ್ನು ಅಧ್ವರ್ಯ ಎಂಬ ಒಬ್ಬನೇ ಋತ್ವಿಕನು ಕರೆಯುತ್ತಾನೆ. ಹೀಗೆ ಸಿದ್ಧಪಡಿಸಿದ ಉತ್ತಮ ಘರ್ಮವನ್ನು ಯಾಜ್ಞಿಕರು ಅಶ್ವಿನೀದೇವತೆಗಳಿಗೆ ಸಮರ್ಪಿಸುತ್ತಾರೆ. ಜಗತ್ಪಾಲಕ ಸೂರ್ಯನ ರಥಕ್ಕೆ ಕಾಲವೇ ಚಕ್ರ. ಆ ಕಾಲಚಕ್ರಕ್ಕೆ ಸಂವತ್ಸರವೇ ಒಂದು ಸ್ಥೂಲ ನಾಭಿ. ಕಾಲಚಕ್ರಕ್ಕೆ ಒಟ್ಟು ೭೦೦ ಅರಗಳಿವೆ: ೩೫೦ ಹಗಲುಗಳು ಮತ್ತು ೩೫೦ ರಾತ್ರಿಗಳು. ಈ ಚಕ್ರದ ಹಳಿಗೆ ಸಾವನ ಸಂವತ್ಸರದ ೩೬೦ ದಿವಸಗಳಲ್ಲಿ ಉಳಿದ ಹತ್ತು ಹಗಲುಗಳು ಮತ್ತು ಹತ್ತು ರಾತ್ರಿಗಳು ಉದ್ದವಾದ ಅರಗಳಂತೆ ಸೇರಿಕೊಂಡಿವೆ. ಒಂದು ಚಕ್ರದಿಂದ ರಥವು ಚಲಿಸುವುದಿಲ್ಲ. ಆದುದರಿಂದ ಇನ್ನೊಂದು ಚಕ್ರದ ಕಲ್ಪನೆಯನ್ನು ಮಾಡಿದ್ದಾರೆ. ಕಾಲಚಕ್ರದ ಸಂವತ್ಸರವೆಂಬ ಸ್ಥೂಲ ನಾಭಿಯಲ್ಲಿ ಹನ್ನೆರಡು ಮಾಸಗಳು ಹನ್ನೆರಡು ಅರಗಳಂತಿವೆ. ಆರು ಋತುಗಳು ಆ ಚಕ್ರದ ಆರು ನಾಭಿಗಳು. ಆ ಚಕ್ರಕ್ಕೆ ಒಂದೇ ಒಂದು ದೃಢ ಅಚ್ಚು ಮರವಿದೆ. ಸ್ವರ್ಗ ರಕ್ಷಕ ಮತ್ತು ಎಲ್ಲ ದೇವತೆಗಳ ಆಧಾರವಾಗಿರುವ ಇಂತಹ ಚಕ್ರವನ್ನು ಅಶ್ವಿನೀ ದೇವತೆಗಳು ನಡೆಸುತ್ತಾರೆ. ಹೀಗೆ ಜಗತ್ತಿಗೆ ಆಧಾರ ಸೂರ್ಯದೇವನ ರಥ ಚಕ್ರವನ್ನು ನಡೆಸುವ ಅಶ್ವಿನೀ ದೇವತೆಗಳೇ! ಸಂಕಟದಲ್ಲಿ ಸಿಕ್ಕಿಬಿದ್ದಿರುವ ನನ್ನನ್ನು ಪಾರುಮಾಡಿ. ಅಶ್ವಿನೀ ದೇವತೆಗಳೇ! ಮನುಷ್ಯರಿಗೆ ಉಪಕಾರಿಯಾದ ನೀರಿನಲ್ಲಿ ಚಂದ್ರನ ಶಕ್ತಿಯು ಇರುವುದರಿಂದ ನೀವು ನೀರಿನಿಂದ ಚಿಕಿತ್ಸೆ ನೀಡುತ್ತೀರಿ. ಮೇರು ಪರ್ವತದಿಂದ ಹೊರಟು ಬರುವ ಅನ್ನವನ್ನು ಕೊಡಬಲ್ಲ ಮಳೆಯನ್ನೂ ನೀವು ಬೇಗ ಉಂಟುಮಾಡುತ್ತೀರಿ. ಅಶ್ವಿನೀ ದೇವತೆಗಳು ಇತರ ದೇವತೆಗಳಿಗಿಂತ ಮೊದಲೇ ಸೋಮಯಾಗಕ್ಕೆ ಹೋಗುತ್ತಾರೆ. ಆದುದರಿಂದ ಇವರು ಇತರ ದೇವತೆಗಳ ಪ್ರಾದುರ್ಭಾವ ಸೂಚಕರು. ಋಷಿಗಳು ಮತ್ತು ಮನುಷ್ಯರು ಈ ದೇವತೆಗಳನ್ನು ಕ್ರಮವರಿದು ಪೂಜಿಸುತ್ತಾರೆ. ದೇವತೆಗಳು ಮತ್ತು ಮನುಷ್ಯರು ನಿಮ್ಮ ಐಶ್ವರ್ಯ ಪ್ರತಿಪಾದಕ ಸ್ತೋತ್ರಮಾಡುತ್ತಾರೆ. ಅಶ್ವಿನೀ ದೇವತೆಗಳು ಸೂರ್ಯಕಿರಣಗಳ ಏಳು ಬಣ್ಣಗಳನ್ನೂ ಆಯಾ ಸಮಯಗಳಲ್ಲಿ ಪ್ರಕಟಪಡಿಸಿ ಅವು ಭೂಮಂಡಲವನ್ನು ಆವರಿಸುವಂತೆ ಮಾಡುತ್ತಾರೆ. ಅವರ ಇಚ್ಛೆಯಂತೆ ಈ ಕಿರಣಗಳು ಜನರಿಗೆ ರೋಗಪರಿಹಾರಕ ಮತ್ತು ಆರೋಗ್ಯಪ್ರದ. ಈ ರೀತಿಯ ಮಹಿಮೆಯ ಅವರನ್ನು ದೇವತೆಗಳೂ ಮನುಷ್ಯರೂ ಸ್ತುತಿಸುತ್ತಾರೆ. ಕಮಲದ ಮಾಲೆಗಳನ್ನು ಧರಿಸಿ ಅಶ್ವಿನೀ ದೇವತೆಗಳು ಅತೀವ ಸುಂದರರಾಗಿ ಕಾಣುತ್ತಾರೆ. ಅಶ್ವಿನೀ ದೇವತೆಗಳೇ ಸೋಮಯಾಗಕ್ಕೆ ಮೊದಲು ಹೋಗುವವರಾದುದರಿಂದ ಇವರನ್ನು ಬಿಟ್ಟು ಇತರ ದೇವತೆಗಳು ತಮ್ಮ ಅಂಶವನ್ನು ಸ್ವೀಕರಿಸುವುದಿಲ್ಲ. ಅಂಥಹ ಮರಣರಹಿತರೂ, ಯಜ್ಞವರ್ಧಕರೂ ಆದ ಅಶ್ವಿನೀ ದೇವತೆಗಳನ್ನು ಕಣ್ಣುಗಳಿಲ್ಲದೆ ಸಾಧನ ಹೀನನಾಗಿರುವ ನಾನು ಮನಸ್ಸಿನಲ್ಲಿಯೇ ಪೂಜಿಸುತ್ತೇನೆ. ಅಶ್ವಿನೀ ದೇವತೆಗಳು ನವಮಾಸಕಾಲ ಗರ್ಭದಲ್ಲಿದ್ದು ನಂತರ ಹುಟ್ಟಿದವರಲ್ಲ. ಅಶ್ವರೂಪ ಸೂರ್ಯನಿಂದ ವಡವಾ ರೂಪಿಣಿ ಸಂಜ್ಞಾದೇವಿಯಲ್ಲಿ ಮುಖಸಂಬಂಧಮಾತ್ರದಿಂದ ತರುಣರಾಗಿಯೇ ಹುಟ್ಟಿದವರು. ಅಲ್ಪವಾದ ಪ್ರಾಣಶಕ್ತಿ ಮತ್ತು ಆಯುಸ್ಸನ್ನುಳ್ಳ ಮನುಷ್ಯ ಶಿಶುಗಳಿಗೆ ಮಾತ್ರವೇ ಒಂಭತ್ತು ತಿಂಗಳು ತಾಯಿಯ ಗರ್ಭವಾಸವೂ, ಹುಟ್ಟಿದ ನಂತರ ತಮ್ಮ ಜೀವನಕ್ಕೆ ತಾಯಿಯ ಹಾಲಿನ ಅಪೇಕ್ಷೆಯೂ ಇರುತ್ತದೆ. ದೇವತೆಗಳಿಗೆ ಹೀಗಿಲ್ಲ. ಆದುದರಿಂದ ನಿತ್ಯ ತರುಣ ಅಶ್ವಿನೀ ದೇವತೆಗಳೇ! ಸಾಮರ್ಥ್ಯಶಾಲಿಗಳಾದ ನೀವು ಸುಖಜೀವನವನ್ನು ಮಾಡುವುದಕ್ಕೆ ನನಗೆ ನೇತ್ರಶಕ್ತಿಯನ್ನು ದಾನ ಮಾಡಿ.”

ಹೀಗೆ ಅವರನ್ನು ಸ್ತುತಿಸಿದಾಗ ಅಶ್ವಿನಿಗಳು ಅಲ್ಲಿಗೆ ಬಂದು: “ನಾವು ನಿನ್ನ ಮೇಲೆ ಪ್ರೀತರಾಗಿದ್ದೇವೆ. ಇದೋ ಈ ಪೂಪವನ್ನು ತಿನ್ನು.” ಎಂದರು. ಇದನ್ನು ಕೇಳಿದ ಅವನು ಉತ್ತರಿಸಿದನು: “ನಿಮ್ಮ ವಚನಗಳು ಎಂದೂ ಸುಳ್ಳಾಗಲಾರವು. ಆದರೆ ನೀವು ಕೊಟ್ಟಿರುವ ಈ ಪೂಪವನ್ನು ನನ್ನ ಗುರುವಿಗೆ ಕೊಡದೇ ತಿನ್ನಲು ಸಾದ್ಯವಿಲ್ಲ.” ಅದಕ್ಕೆ ಅಶ್ವಿನಿ ದೇವತೆಗಳು ಉತ್ತರಿಸಿದರು: “ಹಿಂದೆ ನಿನ್ನ ಉಪಾಧ್ಯಾಯನೂ ಕೂಡ ನಮ್ಮನ್ನು ಸ್ತುತಿಸಿದಾಗ ಅವನಿಗೆ ಪ್ರೀತಿಯಿಂದ ಪೂಪವನ್ನಿತ್ತಾಗ ತನ್ನ ಗುರುವಿಗೆ ನೀಡದೇ ಸೇವಿಸಿದ್ದನು. ನೀನೂ ಕೂಡ ನಿನ್ನ ಗುರು ಮಾಡಿದಹಾಗೆ ಮಾಡು.”

ಅವರ ಈ ಮಾತುಗಳನ್ನು ಕೇಳಿ ಪುನಃ ಅವನು ಹೇಳಿದನು: “ಅಶ್ವಿನಿಗಳೇ! ನಿಮ್ಮ ಕ್ಷಮೆಯನ್ನು ಕೇಳುತ್ತೇನೆ. ಮೊದಲು ನನ್ನ ಉಪಾಧ್ಯಾಯನಿಗೆ ಇದನ್ನು ನೀಡದೇ ನಾನು ತಿನ್ನಲಾರೆ.” ಆಗ ಅಶ್ವಿನಿಯರು ಹೇಳಿದರು: “ನಿನ್ನ ಗುರುಭಕ್ತಿಯಿಂದ ಪ್ರೀತರಾಗಿದ್ದೇವೆ. ನಿನ್ನ ಉಪಾಧ್ಯಾಯನ ಹಲ್ಲುಗಳು ಕಪ್ಪು ಕಬ್ಬಿಣದಂತಿವೆ. ನಿನ್ನವು ಚಿನ್ನದವುಗಳಾಗುತ್ತವೆ. ನಿನ್ನ ದೃಷ್ಟಿಯೂ ಮರಳಿ ಬರುತ್ತದೆ. ಮತ್ತು ನಿನಗೆ ಒಳ್ಳೆಯ ಶ್ರೇಯಸ್ಸು ಆಗುತ್ತದೆ.”

ಅಶ್ವಿನಿಯರು ಈ ರೀತಿ ಹೇಳಿದ ನಂತರ, ಪುನಃ ದೃಷ್ಠಿಯನ್ನು ಪಡೆದು ಉಪಾಧ್ಯಾಯನ ಬಳಿ ಬಂದು ಉಪಾಧ್ಯಾಯನನ್ನು ನಮಸ್ಕರಿಸಿ, ನಡೆದುದೆಲ್ಲವನ್ನೂ ಹೇಳಿದನು. ಅವನೂ ಸಹ ಅತ್ಯಂತ ಪ್ರೀತನಾಗಿ ಹೇಳಿದನು: “ಅಶ್ವಿನಿಯರು ಹೇಳಿದಂತೆ ನೀನು ಬಹಳ ಶ್ರೇಯಸ್ಸನ್ನು ಹೊಂದುವೆ. ಎಲ್ಲ ವೇದಗಳೂ ನಿನ್ನಲ್ಲಿ ಪ್ರತಿಭೆಗೊಳ್ಳುತ್ತವೆ.” ಇದು ಉಪಮನ್ಯುವಿನ ಪರೀಕ್ಷೆಯಾಗಿತ್ತು.