ವಿಧಾನಸಭೆ: ಬಿಜೆಪಿ ಶಾಸಕರು ಕೂಡ ಈಗ ನಮಸ್ಕಾರ ಸ್ಪೀಕರ್ ಸಾಬ್ ಎನ್ನುತ್ತಾರೆ. ಹೀಗೆ ಮಾಡಿದ್ದು ಕಾಂಗ್ರೆಸ್ ಎಂದು ತೆಲಂಗಾಣ ವಿಧಾನಸಭಾ ಚುನವಣೆ ಪ್ರಚಾರದ ವೇಳೆ ಹೇಳಿಕೆ ನೀಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಇಂದು ಸದನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಜಮೀರ್ ಹೇಳಿಕೆ ಕುರಿತು ಸದನದಲ್ಲಿ ಆಡಳಿತ ಪಕ್ಷದ ಸದಸ್ಯರು ಹಾಗೂ ವಿಪಕ್ಷ ನಾಯಕರ ನಡುವೆ ವಾಗ್ವಾದ ನಡೆದಿದ್ದು, ವಿಧಾನಸಭೆಯಲ್ಲಿ ಗದ್ದಲ ಉಂಟಾಯಿತು. ಈ ಹಿನ್ನೆಲೆ ಸ್ಪೀಕರ್ ಕಚೇರಿಯಲ್ಲಿ ಯುಟಿ ಖಾದರ್ ಅವರು ಸಂಧಾನ ಸಭೆ ನಡೆಸಿದರು. ಆದರೆ ಸಂದಾನ ಸಭೆ ವಿಫಲವಾಯಿತು.
ಸಚಿವ ಜಮೀರ್ ಅಹ್ಮದ್ ಖಾನ್ ಸ್ಪೀಕರ್ ಸ್ಥಾನಕ್ಕೆ ಅವಮಾನಿಸಿದ್ದಾರೆ. ಹಿಂದೂ ಮುಸ್ಲಿಂ ಭಾವನೆ ಕೆದಕಿದ್ದಾರೆ. ಜಮೀರ್ ಮಾತನಾಡಲು ಅವಕಾಶ ಕೊಡಲ್ಲ. ನಾವೇನು ಗುಲಾಮರಾ ಎಂದು ಆರ್ ಅಶೋಕ್ ಪ್ರಶ್ನಿಸಿದರು. ಜಮೀರ್ ಅವರನ್ನ ವಜಾಮಾಡಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸೇರಿ ಬಿಜೆಪಿ ಸದಸ್ಯರು ಆಗ್ರಹಿಸಿದರು. ಸದನದ ಬಾವಿಗಿಳಿದು ಬಿಜೆಪಿ ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದರು .
ಸದನದ ಬಾವಿಯಲ್ಲಿ ಜಮೀರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಲಾಯಿತು. ಇದರ ನಡುವೆ ತಮ್ಮ ಹೇಳಿಕೆಯನ್ನು ಜಮೀರ್ ಸಮರ್ಥಿಸಿಕೊಂಡರು. ಜಮೀರ್ ನೆರವಿಗೆ ಹೆಚ್.ಕೆ.ಪಾಟೀಲ್, ಕೃಷ್ಣ ಭೈರೇಗೌಡ ಬಂದರು.
ಸದನದಲ್ಲಿ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿಕೆ ಮಾಡಿದರು.