ಮನೆ ರಾಜ್ಯ ಕೃಷಿಕರನ್ನು ಭೂಮಿಯಿಂದ ಕಿತ್ತು ಬೀದಿಗೆ ಎಸೆಯುವುದು ಸುಧಾರಣೆಯೇ?: ದೇವನೂರ ಮಹಾದೇವ ಪ್ರಶ್ನೆ

ಕೃಷಿಕರನ್ನು ಭೂಮಿಯಿಂದ ಕಿತ್ತು ಬೀದಿಗೆ ಎಸೆಯುವುದು ಸುಧಾರಣೆಯೇ?: ದೇವನೂರ ಮಹಾದೇವ ಪ್ರಶ್ನೆ

0

ಮೈಸೂರು(Mysuru): ಕೃಷಿಕರನ್ನು ಭೂಮಿಯಿಂದ ಕಿತ್ತು ಬೀದಿಗೆ ಎಸೆಯುವುದು ಸುಧಾರಣೆಯೇ? ಎಂದು ಸಾಹಿತಿ ದೇವನೂರ ಮಹಾದೇವ ಪ್ರಶ್ನಿಸಿದರು.

ಜನಾಂದೋಲನಗಳ ಮಹಾಮೈತ್ರಿ ನೇತೃತ್ವದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ಸಹಕಾರದೊಂದಿಗೆ ಶೋಷಿತರ ಅರಿವಿನ ಗುರು ಕುದ್ಮುಲ್ ರಂಗರಾವ್ ಸ್ಮರಣೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ‘ಭಾವೈಕ್ಯತಾ ಜಾಥಾ’ ನಗರಕ್ಕೆ ಆಗಮಿಸಿದ ವೇಳೆ, ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ರೈತರನ್ನು ಭೂಮಿಯಿಂದ ಕಿತ್ತು ಬೀದಿಗೆಸೆಯುವುದೇ ಕರ್ನಾಟಕ ಭೂಸುಧಾರಣಾ ಕಾಯ್ದೆಯ ಕೆಲಸ. ಬಂಡವಾಳ ಇರುವವರು ಭೂಮಿ ಖರೀದಿಸುತ್ತಾರೆ. ಅದರಲ್ಲಿ ಏನಾದರೂ ವ್ಯವಹಾರ ಮಾಡಬಹುದು; ವ್ಯವಸಾಯವನ್ನಂತೂ ಮಾಡುವುದಿಲ್ಲ ಎಂದರು.

ಈಗಿರುವುದು ಜನಪ್ರತಿನಿಧಿ ಸರ್ಕಾರವಲ್ಲ, ಹಣಪ್ರತಿನಿಧಿ ಸರ್ಕಾರ. ಹೀಗಾಗಿ ಜನರ ಮಾತುಗಳನ್ನು ಕೇಳಿಸಿಕೊಳ್ಳುತ್ತಿಲ್ಲ. ಈ ಸರ್ಕಾರ ನಮ್ಮ ಮಾತುಗಳನ್ನು, ಭಾವನೆಗಳನ್ನು ಕೇಳಿಸಿಕೊಳ್ಳುತ್ತಿದೆಯೇ, ಕೇಳಿಸಿಕೊಳ್ಳಲು ಸಾಧ್ಯವಾ? ನನಗೇಕೋ ಗ್ಯಾರೆಂಟಿ ಇಲ್ಲ. ಏಕೆಂದರೆ, ರೈತರಿಗೆ ಮಾರಕವಾದ ಮೂರು ಕಾಯ್ದೆಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆದರೂ ಸರ್ಕಾರ ಸ್ಪಂದಿಸಿಲ್ಲ. ಮಾಧ್ಯಮದಲ್ಲಿ ಬಹಳಷ್ಟು ಚರ್ಚೆಯೂ ಆಗಿದೆ. ಎಲ್ಲ ಜಿಲ್ಲೆಗಳಲ್ಲೂ ಹೋರಾಟಗಳಾಗಿವೆ. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಗಳನ್ನೂ ಸಲ್ಲಿಸಲಾಗಿದೆ. ದಲಿತ, ರೈತ, ಕಾರ್ಮಿಕ ಮೊದಲಾದ ಸಂಘಟನೆಗಳೆಲ್ಲವೂ ಸೇರಿ ಪ್ರತಿಭಟಿಸಿದವು. ಇಷ್ಟೆಲ್ಲಾ ನಡೆದರೂ, ನಮ್ಮ ಮಾತನ್ನು ಸರ್ಕಾರ ಆಲಿಸಿತೇ ಎನ್ನುವುದನ್ನು ಗಂಭೀರವಾಗಿ ಯೋಚಿಸಬೇಕು ಎಂದರು.

ಗೋಹತ್ಯೆ ನಿಷೇಧಿಸಿದ್ದೇವೆ ಎನ್ನುತ್ತಾರೆ. ಆದರೆ, ಗೋಮಾಂಸ ರಫ್ತಿನಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಸಾಕಲಾಗದ ದನಗಳನ್ನು ರೈತರು ಏನು ಮಾಡಬೇಕು? ರೈತರ ನಿಷೇಧ ಮಾಡಲು ಸರ್ಕಾರ ಹವಣಿಸಿದೆ ಎಂದು ವಾಗ್ದಾಳಿ ನಡೆಸಿದರು.

ಈ ಕಾಯ್ದೆಗಳು ನೋಡಲು ಚೆಂದ. ಆದರೆ, ಒಳಗೆ ಹುಳುಕಿದೆ; ವಿಷವಿದೆ. ಮುಕ್ತಿ ಹೆಸರಿನಲ್ಲಿ, ಸುಧಾರಣೆ ಹೆಸರಿನಲ್ಲಿ ರೈತರನ್ನು ಸಾಯಿಸುವ ಕಾಯ್ದೆಗಳಿವು. ಕೃಷಿ ಉತ್ಪನ್ನಗಳಿಗೆ ಬೆಲೆ ಏರಿಕೆಗೆ ರೈತರು ಕೇಳುತ್ತಿದ್ದಾರೆ. ಹೀಗಾಗಿ, ಅವರನ್ನು ಭೂಮಿಯಿಂದ ಕಿತ್ತು ಬೀದಿಗೆ ಎಸೆದುಬಿಟ್ಟರೆ ಬೆಲೆ ಏರಿಸುವ ಅಗತ್ಯವೇ ಬೀಳುವುದಿಲ್ಲವಲ್ಲ? ಈ ಸರ್ಕಾರ ನಿರ್ಮಾಣ ಮಾಡುತ್ತಿಲ್ಲ; ನಿರ್ನಾಮ ಮಾಡುತ್ತಿದೆ ಎಂದು ದೂರಿದರು.

ಮಕ್ಕಳ ಶಿಕ್ಷಣಕ್ಕೆ ಆಸರೆಯಾದ ಸರ್ಕಾರಿ ಶಾಲೆಗಳನ್ನೇ ಮುಚ್ಚುವ, ವಿದ್ಯಾರ್ಥಿವೇತನವನ್ನೂ ನಿಲ್ಲಿಸಿರುವ ಸರ್ಕಾರವಿದು. ಇಡಬ್ಲ್ಯುಎಸ್ (ಆರ್ಥಿಕವಾಗಿ ಹಿಂದುಳಿದವರು) ಎಂಬ ವರ್ಗ ರೂಪಿಸಿ ಮೂರು ದಿನಗಳಲ್ಲೇ ಮೀಸಲಾತಿ ನೀಡಿದ ಸರ್ಕಾರವಿದು. ಇದರಿಂದ ಏನು ನಿರೀಕ್ಷಿಸಲು ಸಾಧ್ಯ? ಎಂದು ಕೇಳಿದರು.

ಮಾರಕವಾದ ಈ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವಂತೆ ನಾವು ಈ ಸರ್ಕಾರಕ್ಕೆ 3 ದಿನಗಳ ಗಡುವು ಕೊಡಬೇಕು. ಇಲ್ಲದಿದ್ದರೆ ಮತ‌ ಕೊಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ಹಳ್ಳಿ ಹಳ್ಳಿಗಳಲ್ಲೂ ಮಾಡಬೇಕು. ನಮ್ಮ ಕೈಯಲ್ಲಿರುವ ಮತದಾನದ ಅಸ್ತ್ರ ಬಳಸುತ್ತೇವೆ ಎಂದು ಹೇಳಬೇಕು. ಆಗ ಸರ್ಕಾರ ಜಗ್ಗಬಹುದು ಎಂದು ಹೇಳಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಮುಖಂಡರಾದ ಹೊಸಕೋಟೆ ಬಸವರಾಜು, ಕೆ.ವಿ.ಭಟ್, ರವಿಕಿರಣ್ ಪೂಣಚ್ಚ, ಉಗ್ರನರಸಿಂಹೇಗೌಡ, ಪ್ರಕಾಶಕ ಅಭಿರುಚಿ ಗಣೇಶ್ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಜಲದರ್ಶಿನಿ ಅತಿಥಿ ಗೃಹದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬಂದ ಜಾಥಾದಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು.