ಮಂಡ್ಯ: ಬದಲಾವಣೆ ಪ್ರಕೃತಿಯ ನಿಯಮ. ಕೃಷಿ ಪದ್ಧತಿ ಎಂದರೆ ಕಷ್ಟವಾದ ಕೆಲಸ, ಸಾಲ ಮಾಡಬೇಕು, ನಷ್ಠ ಅನುಭವಿಸಬೇಕು ಎಂಬ ಮನೋಭಾವವನ್ನು ತೊರೆಯಬೇಕು. ಕೃಷಿಯಲ್ಲಿ ತಾಂತ್ರಿಕತೆ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಬಳಸಿಕೊಂಡು ರೈತರು ಆರ್ಥಿಕವಾಗಿ ಸದೃಢರಾಗಬಹುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದರು.
ಅವರು ಇಂದು ಕೃಷಿ ಮಹಾವಿದ್ಯಾಲಯ, ವಿ.ಸಿ.ಫಾರಂ, ಮಂಡ್ಯ ಇಲ್ಲಿ ಕಬ್ಬು, ಭತ್ತ, ರಾಗಿ ಬೆಳೆಗಳ ಬಗ್ಗೆ ವಿಶೇಷ ತಾಂತ್ರಿಕ ಸಂವಾದ [ಬಿತ್ತನೆಯಿಂದ ಮಾರಾಟದವರೆಗೆ] ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮಂಡ್ಯ ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಕೃಷಿ ಪದ್ದತಿ ಯಲ್ಲಿ ಹೆಚ್ಚು ಇಳುವರಿ ಹಾಗೂ ಆರ್ಥಿಕವಾಗಿ ಸದೃಢರಾಗಲು ಅನೇಕ ಹೊಸ ಪದ್ಧತಿಗಳನ್ನು ಕೃಷಿ ವಿಜ್ಞಾನಿಗಳು ಕೃಷಿ ಮಹಾವಿದ್ಯಾಲಯಗಳು ಪರಿಚಯಿಸುತ್ತಿದೆ. ರೈತರು ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದರು.
ಒಂದೇ ರೀತಿಯ ಬೆಳೆಯನ್ನು ಹಲವು ವರ್ಷಗಳು ನಿರಂತರವಾಗಿ ಬೆಳೆದರೆ ಮಣ್ಣು ಪೌಷ್ಟಿಕಾಂಶ ಕಳೆದುಕೊಳ್ಳುವುದರೆ ಜೊತೆಗೆ ಇಳುವರಿ ಸಹ ಕಡಿಮೆಯಾಗುತ್ತದೆ. ಮೂರು ಎಕರೆ ಜಮೀನನ್ನು ಮೂರು ಭಾಗ ಮಾಡಿ ಒಂದೊಂದು ಎಕರೆಯಲ್ಲಿ ಒಂದೊಂದು ಬೆಳೆಯನ್ನು ಬೆಳೆಯಿರಿ. ಮುಂದಿನ ವರ್ಷ ಮೂರು ವಿಭಾಗದಲ್ಲಿ ಬೆಳೆದ ಬೆಳೆಯನ್ನು ಅದಲು ಬದಲು ಮಾಡಿಕೊಳ್ಳಿ ಎಂದರು.
ರೈತರು ಹೊಸ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಹಲವಾರು ಕಾರಣಗಳಿಂದ ಹಿಂಜರಿಯಬಹುದು. ರೈತರು ತಮ್ಮ ಜಮೀನಿನ ಒಂದು ಭಾಗದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬೆಳೆಯನ್ನು ಬೆಳೆಯಿರಿ, ಲಾಭದಾಯಕ ಎಂದು ಮನದಟ್ಟು ಆದ ನಂತರ ಸಂಪೂರ್ಣವಾಗಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಭತ್ತ, ರಾಗಿ ಹಾಗೂ ಇನ್ನಿತರೆ ಬೆಳೆಗಳನ್ನು ಬೆಳೆಯಲು 6 ತಿಂಗಳು ತೆಗೆದುಕೊಳಲಾಗುತ್ತದೆ. ಆದರೆ ಮಾರಾಟವನ್ನು ಬೆಳೆ ಬಂದ ತಕ್ಷಣ ಜಮೀನಿನಲ್ಲೇ ಮಾರಾಟ ಮರಾಟ ಮಾಡಲಾಗುತ್ತದೆ. ಹೆಚ್ಚು ಆದಾಯ ಬರುವ ರೀತಿ ಚಿಂತಿಸಿ ಮೌಲ್ಯವರ್ಧನಾ ತಂತ್ರಗಳನ್ನು ಅಳವಡಿಸಿಕೊಳ್ಳಿ ಎಂದರು.
ಕೃಷಿ ಕಾರ್ಮಿಕರ ಕೊರತೆಯ ಬಗ್ಗೆ ಹೆಚ್ಚು ಚಿಂತಿಸುವ ಸರ್ಕಾರ ಕೃಷಿ ಯಂತ್ರೋಪಕರಣಗಳ ಒಂದು ಸಾವಿರ ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಕೃಷಿ ಕಟಾವು ಹೈಟೆಕ್ ಯಂತ್ರಕ್ಕೆ 40 ಲಕ್ಷ ರೂ ಸಬ್ಸಿಡಿ ನೀಡಲಾಗುತ್ತಿದ್ದು, ಸುಮರು 350 ರೈತರಿಗೆ ಯಂತ್ರ ನೀಡಲಾಗಿದೆ ಎಂದರು. ಮಂಡ್ಯ ಜಿಲ್ಲೆಗೆ ರೈತರ ಹಿತದೃಷ್ಟಿಯಿಂದ ಕೃಷಿ ವಿಶ್ವವಿದ್ಯಾನಿಲಯವನ್ನು ಮಂಜೂರು ಮಾಡಿಸಲಾಗಿದೆ. ಇದರ ಕಾರ್ಯವೈಖರಿಯನ್ನು 3 ವರ್ಷದೊಳಗೆ ಜಿ.ಕೆ.ವಿ.ಕೆ. ರೀತ್ಯ ಮಾಡಲಾಗುವುದು. ವಿಶ್ವವಿದ್ಯಾನಿಲಯದ ಅಗತ್ಯತೆಯ ಬಗ್ಗೆ ಮುಂದಿನ ದಿನಗಳಲ್ಲಿ ಜನರಿಗೆ ಅರ್ಥವಾಗಲಿದೆ ಎಂದರು.
ಜಂಟಿ ಕೃಷಿ ನಿರ್ದೇಶಕ ಅಶೋಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ಕಬ್ಬು, ರಾಗಿ ಹಾಗೂ ಭತ್ತವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಮೂರು ಬೆಳೆಗಳಲ್ಲಿ ವಿನೂತನ ಪದ್ಧತಿ ಹಾಗೂ ತಾಂತ್ರಿಕತೆಯನ್ನು ಅಳವಡಿಸಿ ಹೆಚ್ಚಿನ ರೈತರಿಗೆ ಪರಿಚಯಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ನರೇಗಾ ಯೋಜನೆಯನ್ನು ಉಪಯೋಗಿಸಿಕೊಂಡು ಸುಮಾರು 2000 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ರಾಜ್ಯ ಮತ್ತು ದೇಶಗಳಿಗೆ ರಫ್ತು ಮಾಡುವ ಗುಣಮಟ್ಟದ ರಾಗಿ ಬೆಳೆಯಾಗುತ್ತಿದೆ. ಭತ್ತದ ನಾಟಿಗಾಗಿ ಹೊರ ಜಿಲ್ಲೆಗಳಿಂದ ಮಂಡ್ಯ ಜಿಲ್ಲೆಗೆ ಕಾರ್ಮಿಕರನ್ನು ಕರೆತರಲಾಗುತ್ತಿದೆ ಇದರ ಬದಲು ನಾಟಿ ಮಾಡಲು ಯಾಂತ್ರಿಕತೆ ಪದ್ಧತಿಯನ್ನು ಜಿಲ್ಲೆಯ ಕೆಲವು ರೈತರು ಅಳವಡಿಸಿಕೊಂಡಿದ್ದಾರೆ. ಈ ಪದ್ಧತಿಗಳ ಬಗ್ಗೆ ಹೆಚ್ಚಿನ ರೈತರಿಗೆ ಪರಿಚಯಿಸಲು ವಿಶೇಷ ದ್ವೈಮಾಸಿಕ ತಾಂತ್ರಿಕ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕೃಷಿ ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಹರಿಣಿ ಕುಮಾರ್, ವಿ.ಸಿ.ಫಾರಂನ ಡೀನ್ ಫತೀಮ ಸೇರಿದಂತೆ ಕೃಷಿ ವಿಜ್ಞಾನಿಗಳು, ರೈತರು ಉಪಸ್ಥಿತರಿದ್ದರು.














