ಮನೆ ಯೋಗಾಸನ ಉತ್ಥಿತ ಪಾರ್ಶ್ವಕೋನಾಸನ

ಉತ್ಥಿತ ಪಾರ್ಶ್ವಕೋನಾಸನ

0

“ಪಾರ್ಶ್ವ” ಅಂದರೆ ಪಕ್ಕ, “ಕೋನ” ಅಂದರೆ ಮೂಲೆ ; ಪಾಶ್ವಕೋನದ ಬಡಾವಣೆಯ ಈ ಆಸನದ ಭಂಗಿ.                

ಅಭ್ಯಾಸ ಕ್ರಮಗಳು

೧. ಮೊದಲು ತಡಾಸನ ಭಂಗಿಯಲ್ಲಿ ನಿಲ್ಲಬೇಕು. ಬಳಿಕ ಬಲವಾಗಿ ಉಸಿರನ್ನು ಒಳಕ್ಕೆಳೆದು, ಸ್ವಲ್ಪ ಜಿಗಿದು, ಕಾಲುಗಳ ನಡುವಂತರ ಸುಮಾರು 4-4  ½ ಅಡಿಗಳಷ್ಟು ಅವನ್ನು ಅಗಲಿಸಿ ನಿಲ್ಲಬೇಕು. ಅನಂತರ  ಎರಡು ತೋಳುಗಳನ್ನು ಮೇಲೆತ್ತಿ, ಭುಜದ ಮಟ್ಟಕ್ಕೆ ಸಮವಾಗುವಂತೆ ಅವನ್ನು ಎರಡು ಕಡೆಗೂ ಚಾಚಿ, ಅಂಗೈಗಳನ್ನ ಕೆಳಮೊಗಮಾಡಿ, ನೆಲಕ್ಕೆ ಸಮಾನಾಂತರವಿರುವಂತೆ ನಿಲ್ಲಿಸಬೇಕು.

೨. ಈಗ ಉಸಿರನ್ನು ಮೆಲ್ಲ ಮೆಲ್ಲಗೆ ಹೊರಕ್ಕೆ ಬಿಡುತ್ತ, ಬಲ ಪಾದವನ್ನು ಬಲಪಕ್ಕಕ್ಕೆ 90 ಡಿಗ್ರಿಯಷ್ಟು ತಿರುಗಿಸಿ ಎಡಪಾದವನ್ನು ಬಲಗಡೆಗೆ ಸ್ವಲ್ಪ ಓರೆಮಾಡಿ, ಎಡಗಾಲನ್ನು ನೀಳಲಾಗಿ ಹೊರಚಾಚಿ ಮಂಡಿಯನ್ನು ಬಿಗಿಗೊಳಿಸಬೇಕು. ಬಳಿಕ ತೊಡೆ, ಕಣಕಾಲುಗಳು ಸಮಕೋಣದಲ್ಲಿರುವಂತೆಯೂ, ತೊಡೆ ನೆಲಕ್ಕೆ ಸಮಾನಾಂತರದಲ್ಲಿರುವಂತೆಯೂ, ಬಲ ಗಾಲನ್ನು ಮಂಡಿಯಲ್ಲಿ ಭಾಗಿಸಿಡಬೇಕು.            

೩. ಆಮೇಲೆ ಬಲದಂಗೈಯನ್ನು ಬಲಪಾದದ ಪಕ್ಕದಲ್ಲಿಯೇ ನೆಲದ ಮೇಲೆ ಒತ್ತಿಡಬೇಕು. ಅಲ್ಲದೆ ಬಲಕಂಕುಳು ಬಲಮಂಡಿಯನ್ನು ಮುಚ್ಚುವಂತೆ ಅದನ್ನಂಟಿಕೊಂಡಿರಬೇಕು ಮತ್ತು ಎಡ ತೋಳನ್ನು ಎಡಗಿವಿಯ ಮೇಲೆ ನೀಳಲಾಗಿ ಚಾಚಿಟ್ಟು, ತಲೆಯನ್ನು ಮೇಲ್ಮುಗ ಮಾಡಿರಬೇಕು.

೪. ಆನಂತರ ಟೊಂಕವನ್ನ ಬಿಗಿಮಾಡಿ, ಜಾನುರಜ್ಜನಗಳನ್ನ ನೀಳವಾಗಿ ಚಾಚಬೇಕು. ಅಲ್ಲದೆ ಎದೆ, ಟೊಂಕ, ಕಾಲುಗಳು ಒಂದೇ ರೇಖೆಯಲ್ಲಿರುವಂತೆ ಮಾಡಬೇಕು. ಈ ಸ್ಥಿತಿಗೆ ತರಲು ಎದೆಯನ್ನು ಮೇಲಕ್ಕೂ, ಹಿಂದುಕ್ಕೂ ಆಡಿಸಬೇಕಾಗುತ್ತದೆ. ಈಗ ಇಡೀ ದೇಹದ ಹಿಂಬದಿ ಭಾಗಗಳಲ್ಲಿಯೇ – ಅದರಲ್ಲಿಯೂ ಬೆನ್ನುಮೂಳೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ದೇಹದ ಪ್ರತಿಭಾಗವನ್ನು ಎಳೆದು ಹಿಗ್ಗಿಸಬೇಕು. ಅಲ್ಲದೆ ಬೆನ್ನುಮೂಳೆ ಎರಡೂ ಪಕ್ಕದ ಅಸ್ಥಿಗಳು ಮತ್ತು ಪಕ್ಕೆಲುಬುಗಳು ಅಲುಗಾಡದಂತೆ ಅದನ್ನು ಜಿಗಿಸಿಗಿಸಬೇಕು. ಹೀಗೆ ಮಾಡುವಾಗ ದೇಹದ ಮೇಲು ಹೋದಿಕೆಯಾದ ಚರ್ಮವು ಎಳೆತದಿಂದ ಹಿಗ್ಗುವುದೇ ಎಂಬ ಭಾವ ತಲೆದೋರುತ್ತದೆ.           

೫. ಈ ಭಂಗಿಯಲ್ಲಿರುವಾಗ ಆಳವಾಗಿ ಉಸಿರಾಟ ನಡೆಸುತ್ತಾ ಅದರಲ್ಲಿ ಸುಮಾರು ಅರ್ಧ ಅಥವಾ ಒಂದು ನಿಮಿಷಕಾಲ ನೆಲೆಸಬೇಕು. ಬಳಿಕ ಉಸಿರನ್ನು ಒಳಕ್ಕೆಳೆದು, ಬಲದಂಗೈಯನ್ನು ನೆಲದಿಂದ ಮೇಲೆತ್ತಬೇಕು.

೬. ಮತ್ತೆ ಉಸಿರನ್ನು ಒಳಕ್ಕೆಳೆದು, ಬಲಗಾಲನ್ನು ನೇರಮಾಡಿ ತೋಳುಗಳನ್ನು ಮೇಲೆತ್ತಿ ೧ನೇ ಸ್ಥಿತಿಗೆ ಬಂದು ನಿಲ್ಲಬೇಕು.

೭.  ಆಮೇಲೆ ಈ ಭಂಗಿಗಳನ್ನೆಲ್ಲ ತಿರುಗಮುರುಗಮಾಡಿ, ಉಸಿರನ್ನು ಹೊರಕ್ಕೆ ಬಿಟ್ಟು ಎಡಭಾಗದಲ್ಲಿಯೂ, ೨ ರಿಂದ ೫ನೇ ಅನುಬಂಧವರೆಗೂ ಅಭ್ಯಾಸಿಸಬೇಕು. 

೮. ಕೊನೆಯಲ್ಲಿ, ಉಸಿರನ್ನು ಹೊರೆದೂಡಿ, ಹಿಂದಕ್ಕೆ ಜಿಗಿದು ಮತ್ತೆ ʼತಡಾಸನʼದ ಬಂಗಿಗೆ ಹಿಂದಿರುಗಬೇಕು.       

ಪರಿಣಾಮಗಳು :-

ಈ ಆಸನವೂ ಕಾಲ್ಗಿಣ್ಣು ಮತ್ತು ಮಂಡಿತೊಡೆಗಳಿಗೆ ಹುರುಪು ಕೊಡುವುದಲ್ಲದೆ, ಮೀನಖಂಡ ಮತ್ತು ತೊಡೆಗಳಲ್ಲಿ ನ್ಯೂನ್ಯತೆಗಳನ್ನು ಸರಿಪಡಿಸುತ್ತದೆ. ಅಲ್ಲದೆ ಎದೆಯನ್ನು ವಿಸ್ತರಿಸುತ್ತದೆ. ಕೊಬ್ಬಿನ ಭಾಗವನ್ನು ತಗ್ಗಿಸುತ್ತದೆ. ವಾತರೋಗದಿಂದ ಕೀಲು ನೋವು, ಸೊಂಟ ನೋವುಗಳನ್ನು ಗುಣಪಡಿಸುತ್ತದೆ. ಅದರ ಜೊತೆಗೆ ಪರಿಕ್ರಮಸ್ನಾಯುಸಂಕೋಚನ (peristaltic) ಚಟುವಟಿಕೆಯನ್ನು ಹೆಚ್ಚಿಸಿ ಆ ಮೂಲಕ ನಿಷ್ಪ್ರಯೋಜಕ ವಸ್ತುಗಳ ವಿಸರ್ಜನೆಗೆ ಸಹಾಯಕವಾಗುತ್ತದೆ.

ಹಿಂದಿನ ಲೇಖನಚಿತ್ರಮೂಲ
ಮುಂದಿನ ಲೇಖನಹಾಸ್ಯ