“ಉತ್ಥಿತ”ವೆಂದರೆ ಮೇಲೆದ್ದು ನೀಳವಾಗಿ ಚಾಚು ಎಂದರ್ಥ. “ತ್ರಿಕೋಣ” ವೆಂದರೆ ಮೂರು ಭುಜ ಮಾಡುವ ಮೂಲೆಯಿಂದ ಕೂಡಿದ ಸರಳ ರೇಖಾಕೃತಿ. ಅಂದರೆ ಈ ಆಸನ ಭಂಗಿಯು ತ್ರಿಕೋನಾಕಾರದಲ್ಲಿ ಕೈಕಾಲುಗಳನ್ನು ಚಾಚಿನಿಲ್ಲಬೇಕಾಗಿರುವುದರಿಂದ ಈ ಹೆಸರು.
ಅಭ್ಯಾಸಕ್ರಮ :-
೧. ಮೊದಲು ಈ ಹಿಂದಿನಂತೆಯೇ ʼತಡಾಸನʼದಲ್ಲಿ ನಿಲ್ಲಬೇಕು.
೨. ಬಳಿಕ, ದೀರ್ಘವಾಗಿ ಉಸಿರನ್ನು ಒಳಕ್ಕೆಳದು, ಮೇಲೆ ಹಾರಿ ಎರಡೂ ಕಾಲುಗಳ ನಡುವಣಂತರ 3-3 1/2 ಅಡಿಗಳಾಗುವಷ್ಟು ಅವನ್ನು ಪಕ್ಕಕ್ಕೆಗಳಿಸಿ ನೇರವಾಗಿ ನಿಲ್ಲಿಸಬೇಕು. ಆಮೇಲೆ ತೋಳುಗಳೆರಡನ್ನು ಹೆಗಲಿನ ಮಟ್ಟಕ್ಕಿರುವಂತೆ ನೀಳವಾಗಿ ಚಾಚಿ ನೆಲಕ್ಕೆ ಸಮಾನಾಂತರವಿರುವಂತೆ ಅಂಗೈಗಳನ್ನು ಕೆಳಮೊಗ ಮಾಡಿಡಬೇಕು.
೩. ಆನಂತರ ಬಲಪಾದವನ್ನು ಬಲಗಡೆಗೆ ಸಮಕೋಣದಷ್ಟು ಅಂದರೆ 90 ಡಿಗ್ರಿಗಳಷ್ಟು ತಿರುಗಿಸಬೇಕು. ಆಮೇಲೆ ಎಡಪಾದವನ್ನು ಸ್ವಲ್ಪ ಬಲಗಡೆ ಓರೆಮಾಡಿ, ಎಡಗಾಲ ಮಂಡಿಯನ್ನು ಬಿಗಿಗೊಳಿಸುತ್ತಾ ಅದನ್ನು ನೀಲವಾಗಿ ಚಾಚಬೇಕು.
೪. ಆ ಬಳಿಕ ಉಸಿರನ್ನು ಹೊರಬಿಟ್ಟು ಶರೀರವನ್ನು ಬಲಭಾಗಕ್ಕೆ ಭಾಗಿಸಿ, ಬಲಅಂಗೈಯನ್ನು ಬರಗಾಲ ಗಿಣ್ಣಿನ ಬಳಿಗೆ ತರಬೇಕು. ಸಾಧ್ಯವಾದರೆ ಬಲದಂಗೈಯನ್ನು ನೆಲದ ಮೇಲೆ ಪೂರ ಒತ್ತಿಡಬೇಕು.
೫. ಇದಾದ ಮೇಲೆ ಎಡ ತೋಳನ್ನು ಮೇಲೆತ್ತಿ, ಅದನ್ನು ಬಲ ಹೆಗಲಿನ ನೇರಕ್ಕೆ ನಿಲ್ಲಿಸಲು ದೇಹದ ಮುಂಗಡಭಾಗವನ್ನು ಹಿಗ್ಗಿಸಬೇಕು. ಈ ಸ್ಥಿತಿಯಲ್ಲಿ ಕಾಲುಗಳ ಹಿಂಬದಿ, ಎದೆಯ ಹಿಂಭಾಗ ಮತ್ತು ಟೋಂಕಗಳು ಒಂದೇ ಸರಳರೇಖೆಯಲ್ಲಿರುವಂತೆ ಮಾಡಬೇಕು. ಆಗ ನೀಳವಾಗಿ ಮೇಲಕ್ಕೆ ಚಾಚಿಟ್ಟಿರುವ ಎಡಗೈ ಹೆಬ್ಬೆರಳಿನ ಕಡೆಗೆ ದಿಟ್ಟಿಸಬೇಕು. ಅಲ್ಲದೆ ಬಲಮಂಡಿಯ ಚಿಪ್ಪುಗಳನ್ನ ಮೇಲಕ್ಕೆ ಸೆಳೆಯುವ ಮೂಲಕ ಅದನ್ನು ಬಿಗಿಗೊಳಿಸಿ ಕಾಲ್ಬೆರಳುಗಳ ನೇರಕ್ಕಿರಿಸಬೇಕು.
೬. ಭಂಗಿಯ ಈ ಸ್ಥಿತಿಯಲ್ಲಿ, ಅರ್ಧದಿಂದ ಒಂದು ನಿಮಿಷ ಕಾಲ- ನೆಲೆಸಿರುವಾಗಲೇ ನೀಳವಾದ ಉಸಿರಾಟವನ್ನು ಸಮವಾಗಿ ನಡೆಸುತ್ತಿರಬೇಕು. ಆ ಬಳಿಕ ಬಲದಂಗೈಯನ್ನು ನೆಲದಿಂದ ಮೇಲೆ ಉಸಿರನ್ನು ಒಳಕ್ಕೆಳೆದು ಮೇಲಿನ ೨ನೆಯ ಅನುಬಂಧದ ಸ್ಥಿತಿಗೆ ಮತ್ತೆ ಬರಬೇಕು.
೭. ಈಗ ಎಡಪಾದವನ್ನು 90 ಡಿಗ್ರಿಗಳಷ್ಟು ಎಡಪಕ್ಕಕ್ಕೆ ತಿರುಗಿ, ಬಲಪಾದವನ್ನು ಎಡಕ್ಕೆ ಸ್ವಲ್ಪ ಓರೆಮಾಡಿ, ಎರಡೂ ಮಂಡಿಗಳನ್ನ ಬಿಗಿಮಾಡಿ, ೨ನೆಯ ಸ್ಥಿತಿಯಿಂದ ೬ನೆಯ ಸ್ಥಿತಿಯವರೆಗೂ ಭಂಗಿಗಳನ್ನ ತಿರುಗಾಮುರುಗಾಗಿ (ವ್ಯತ್ಯಾಸ್ತವಾಗಿ) ಅಭ್ಯಾಸಿಸಬೇಕು.
೮. ಇವೆಲ್ಲವವೂ ಮುಗಿಸಿದಮೇಲೆ ಉಸಿರನ್ನು ಮತ್ತೆ ಹೊರಕ್ಕೆಬಿಟ್ಟು, ಸ್ವಲ್ಪ ಮೇಲೆ ಜಿಗಿದು, ಮೊದಲನೆಯ “ತಡಾಸನ”(ಚಿತ್ರ 1) ಮತ್ತೆ ಬಂದು ನಿಲ್ಲಬೇಕು.
ಪರಿಣಾಮಗಳು :-
ಈ ಆಸನಭ್ಯಾಸವು ಕಾಲುಗಳಲ್ಲಿಯ ಮಾಂಸ ಖಂಡಗಳನ್ನು ಚೆನ್ನಾಗಿ ಪಳಗಿಸುತ್ತದೆ. ಕಾಲು ಮತ್ತು ಟೊಂಕಗಳಲ್ಲಿಯ ಪೆಡಸುತನವನ್ನು ನಿವಾರಿಸುತ್ತದೆ. ಅಲ್ಲದೆ ಕಾಲುಗಳಲ್ಲಿ ಸಾಮಾನ್ಯವಾದ ವಕ್ರತೆಯಿದ್ದರೆ ಅದನ್ನ ಸರಿಪಡಿಸಿ ಅವುಗಳ ಬೆಳವಣಿಗೆಗೆ ಅನುಕೂಲಿಸುತ್ತದೆ. ಜೊತೆಗೆ ಈ ಆಸನವೂ ಬೆನ್ನುನೋವು, ಕತ್ತಿನ ಉಳುಕು – ಇವುಗಳನ್ನು ಕಳೆದು, ಮೊಣಕೈಗಳನ್ನ ಬಲಗೊಳಿಸಿ ಎದೆಯನ್ನು ಹಿಗ್ಗಿಸುತ್ತದೆ.