ಡೆಹ್ರಾಡೂನ್: ಅಲಕನಂದಾ ನದಿ ತೀರದಲ್ಲಿ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡು ಸುಮಾರು 15 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡ ಭೀಕರ ಘಟನೆ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ಅನೇಕ ಗಾಯಾಳುಗಳ ಸ್ಥಿತಿ ಗಂಭೀರವಾಗಿರುವುದರಿಂದ ಮರಣ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಮಾಮಿ ಗಂಗೆ ಯೋಜನೆಯಲ್ಲಿ ತೊಡಗಿದ್ದ ವೇಳೆ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡಿದೆ. ಈ ವೇಳೆ ಮೂವರು ಪೊಲೀಸರು ಹಾಗೂ ಮೂವರು ಹೋಮ್ ಗಾರ್ಡ್ ಸೇರಿದಂತೆ ಒಟ್ಟು 15 ಮಂದಿ ಸಾವನ್ನಪ್ಪಿದ್ದಾರೆ. 7 ಮಂದಿ ಗಾಯಗೊಂಡಿದ್ದು ಅವರನ್ನು ಚಮೋಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲೂ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕಳೆದ ಕೆಲವು ದಿನಗಳಿಂದ ಉತ್ತರಾಖಂಡದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಲಕಾನಂದದ ನೀರಿನ ಮಟ್ಟ ಏರಿಕೆಯಾಗಿದೆ. ಅಲಕಾನಂದದ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಪೌರಿ ಜಿಲ್ಲೆಯ ಶ್ರೀನಗರದಲ್ಲಿರುವ ಜಿವಿಕೆ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನಿಂದ ಸುಮಾರು 3,000 ಕ್ಯೂಸೆಕ್ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾರ್ಯಾಚರಣೆ ಆರಂಭಿಸಿದ್ದಾರೆ.