ಮನೆ ರಾಷ್ಟ್ರೀಯ ವಿ.ಡಿ. ಸಾವರ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ: ಖುದ್ದು ಹಾಜರಾಗಲು ರಾಹುಲ್ ಗಾಂಧಿಗೆ ಪುಣೆ ನ್ಯಾಯಾಲಯ ಸೂಚನೆ

ವಿ.ಡಿ. ಸಾವರ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ: ಖುದ್ದು ಹಾಜರಾಗಲು ರಾಹುಲ್ ಗಾಂಧಿಗೆ ಪುಣೆ ನ್ಯಾಯಾಲಯ ಸೂಚನೆ

0

ಪುಣೆ: ವಿ.ಡಿ. ಸಾವರ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಸಾವರ್ಕರ್ ಅವರ ಮೊಮ್ಮಗ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್‌ 2ರಂದು ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಪುಣೆ ನ್ಯಾಯಾಲಯ ಆದೇಶಿಸಿದೆ.

Join Our Whatsapp Group

2023ರ ಮಾರ್ಚ್‌ನಲ್ಲಿ ರಾಹುಲ್‌ ಗಾಂಧಿ ಅವರು, ಲಂಡನ್‌ನಲ್ಲಿ ಮಾಡಿದ್ದ ಭಾಷಣದಲ್ಲಿ, ವಿ.ಡಿ. ಸಾವರ್ಕರ್ ಅವರು ತಮ್ಮ ಐದಾರು ಸ್ನೇಹಿತರೊಂದಿಗೆ ಸೇರಿಕೊಂಡು ಮುಸ್ಲಿಂ ವ್ಯಕ್ತಿಯನ್ನು ಹೊಡೆದು ಖುಷಿಪಟ್ಟಿದ್ದಾಗಿ ಪುಸ್ತಕದಲ್ಲಿ ಬರೆದುಕೊಂಡಿದ್ದರು ಎಂದು ಹೇಳಿದ್ದರು.

ಆದರೆ, ಅಂತಹ ಯಾವುದೇ ಘಟನೆ ನಡೆದಿಲ್ಲ ಮತ್ತು ವಿ.ಡಿ. ಸಾವರ್ಕರ್ ಅವರು ಎಲ್ಲಿಯೂ ಆ ರೀತಿ ಬರೆದಿಲ್ಲ. ರಾಹುಲ್‌ ಗಾಂಧಿಯವರ ಈ ಆರೋಪ ದುರುದ್ದೇಶಪೂರಿತವಾಗಿದೆ. ಹಿಂದುತ್ವ ಸಿದ್ಧಾಂತದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರು ಕಳೆದ ವರ್ಷ ರಾಹುಲ್‌ ಗಾಂಧಿ ವಿರುದ್ಧ ಪುಣೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಈ ಸಂಬಂಧ ಅಕ್ಟೋಬರ್‌ 4ರಂದು, ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದ ವಿಶೇಷ ನ್ಯಾಯಾಲಯವು ಅ.23ರಂದು ವಿಚಾರಣೆಗೆ ಹಾಜರಾಗುವಂತೆ ರಾಹುಲ್‌ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ಸಮನ್ಸ್‌ ತಲುಪಿಲ್ಲ ಎಂದು ಹೇಳಿ ರಾಹುಲ್‌ ಗಾಂಧಿ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.

ಡಿಸೆಂಬರ್‌ 2ರಂದು ನ್ಯಾಯಾಲಯದ ಮುಂದೆ ಹಾಜರಾಗಲು ರಾಹುಲ್‌ ಗಾಂಧಿಗೆ ಸಮನ್ಸ್‌ ನೀಡುವಂತೆ ಮನವಿ ಮಾಡಿರುವುದಾಗಿ ಸಾತ್ಯಕಿ ಸಾವರ್ಕರ್ ಪರ ವಕೀಲ ಸಂಗ್ರಾಮ್ ಕೊಲ್ಹಟ್ಕರ್ ತಿಳಿಸಿದ್ದಾರೆ.