ಮಂಡ್ಯ: ಇತಿಹಾಸ ಪ್ರಸಿದ್ಧ ಮೇಲುಕೋಟೆಯ ಶ್ರೀ ಚಲುವರಾಯಸ್ವಾಮಿ ವೈರಮುಡಿ ಉತ್ಸವವನ್ನು ಇದೇ ಮಾ.9 ರಿಂದ 21 ರ ವರೆಗೆ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿಂದು ಉತ್ಸವ ಆಚರಣೆ ಕುರಿತು ಮೇಲುಕೋಟೆಯ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯ ನಂತರ ಮಾತನಾಡಿದ ಸಚಿವ ಕೆ.ಗೋಪಾಲಯ್ಯ, ಮಾ.9 ರಿಂದ 21 ರವರೆಗೆ ನಡೆಯುವ ವೈರಮುಡಿ ಮಹೋತ್ಸವಕ್ಕೆ ಬರುವ ಎಲ್ಲಾ ಭಕ್ತರಿಗೆ ಅನುಕೂಲವಾಗುವಂತೆ ಸಾರಿಗೆ ಸೌಲಭ್ಯ, ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ, ಹಾಗೂ ದೇವರ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವಂತೆ ಹೇಳಿದರು.
ಎಲ್ಲಾ ಇಲಾಖೆಗಳು ಬಹಳ ಜಾಗೃತಿವಹಿಸಬೇಕು ಯಾವುದೇ ಕುಂದು ಕೊರತೆಯಾಗದೆ ವೈರಮುಡಿ ಉತ್ಸವ ಅರ್ಥೂರ್ಣವಾಗಿ ನಡೆಯಲು ಎಲ್ಲರೂ ಸಹಕರಿಸಬೇಕು.ಉತ್ಸವದಲ್ಲಿ ಸುಮಾರು 8 ರಿಂದ 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಜಾತ್ರಾ ಅವಧಿಯಲ್ಲಿ ಸ್ವಚ್ಛತೆ ಕಾಪಾಡಲು ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಗತ್ಯಕ್ರಮ ವನ್ನುವಹಿಸಬೇಕು. ಜಾತ್ರಾ ಮಹೋತ್ಸವ ಹೆಚ್ಚುವರಿ ಸಿಬ್ಬಂದಿ ಮತ್ತು ಪೌರಕಾರ್ಮಿಕರನ್ನು ನೇಮಿಸಿ ನಿರಂತರ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ದೇವಾಲಯದ ಸಮೀಪ ಆಂಬುಲೆನ್ಸ್ ಮತ್ತು ವೈದ್ಯಕೀಯ ತಂಡವನ್ನು ನಿಯೋಜಿಸಬೇಕು. ವಾಹನ ಪಾರ್ಕಿಂಗ್, ಬ್ಯಾರಿಕೇಡ್, ರಸ್ತೆ ದುರಸ್ತಿ, ಉತ್ಸವಗಳ ನಿರ್ವಹಣೆ, ದೀಪಾಲಂಕಾರ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು, ಜಿಲ್ಲಾಧಿಕಾರಿ ಎಸ್. ಅಶ್ವತಿ,ಜಿ.ಪಂ.ಮುಖ್ಯಕಾರ್ಯ ನಿರ್ವಹಣಾಧಿಕಾರಿ ದಿವ್ಯಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದ ಮೂರ್ತಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.