ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಎರಡನೇ ಆರೋಪಿಯಾಗಿರುವ ಹೈದರಾಬಾದ್‌ನ ಸತ್ಯನಾರಾಯಣ ವರ್ಮ ವಿರುದ್ಧ ಹೊರಡಿಸಲಾಗಿದ್ದ ಬಾಡಿ ವಾರಂಟ್ ಜಾರಿಗೊಳಿಸದೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಶೋಕಾಸ್ ನೋಟಿಸ್ ಪಡೆದಿದ್ದ ಕಾರಾಗೃಹದ ಪೊಲೀಸ್ ಮಹಾನಿರ್ದೇಶಕರು ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರು (ಸೂಪರಿಂಟೆಂಡೆಂಟ್) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ಷಮೆ ಕೋರಿದ್ದಾರೆ.
ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಳೆದ ವಿಚಾರಣೆ ವೇಳೆ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಇಬ್ಬರೂ ಅಧಿಕಾರಿಗಳ ಖುದ್ದು ಹಾಜರಿಗೆ ಆದೇಶಿಸಿದ್ದರು.
ಈ ಆದೇಶದ ಅನ್ವಯ ಕಾರಾಗೃಹದ ಪೊಲೀಸ್ ಮಹಾನಿರ್ದೇಶಕಿ ಮಾಲಿನಿ ಕೃಷ್ಣಮೂರ್ತಿ ಅವರ ಪರವಾಗಿ ಹಾಜರಾಗಿದ್ದ ಅಧಿಕಾರಿ ಮತ್ತು ಸೂಪರಿಂಟೆಂಡೆಂಟ್ ಬುಧವಾರ ಮೌಖಿಕವಾಗಿ ನ್ಯಾಯಾಲಯದ ಕ್ಷಮೆ ಕೋರಿದರು. ಅಂತೆಯೇ, ಶೋಕಾಸ್ ನೋಟಿಸ್‌ಗೆ ವಿವರಣೆ ಸಲ್ಲಿಸಿದರು. ಇದನ್ನು ಪುರಸ್ಕರಿಸಿದ ನ್ಯಾಯಾಧೀಶರು, “ಇನ್ನು ಮುಂದೆ ಈ ರೀತಿ ನ್ಯಾಯಾಲಯದ ಆದೇಶ ಉಲ್ಲಂಘಿಸಬಾರದು” ಎಂದು ಎಚ್ಚರಿಸಿದರು.
ಈ ಹಿಂದಿನ ವಿಚಾರಣೆ ವೇಳೆ ಇ ಡಿ ಪರ ವಕೀಲರು ನ್ಯಾಯಾಲಯದ ಆದೇಶದ ಹೊರತಾಗಿಯೂ ಸತ್ಯನಾರಾಯಣ ವರ್ಮಾ ಅವರನ್ನು ಜೈಲು ಅಧಿಕಾರಿಗಳು ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿಲ್ಲ ಎಂದು ಆಕ್ಷೇಪಿಸಿದ್ದರು.