ಮನೆ ಕಾನೂನು ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಸಿಬಿಐ ತನಿಖೆಗೆ ಒಪ್ಪಿಸಲು ಹೈಕೋರ್ಟ್‌ ನಕಾರ

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಸಿಬಿಐ ತನಿಖೆಗೆ ಒಪ್ಪಿಸಲು ಹೈಕೋರ್ಟ್‌ ನಕಾರ

0

ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ ತನಿಖೆಗೆ ವಹಿಸುವಂತೆ ಕೋರಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ವಜಾ ಮಾಡುವ ಮೂಲಕ ಮಹತ್ವದ ಆದೇಶ ಮಾಡಿದೆ.

Join Our Whatsapp Group

ಅರ್ಜಿಯ ಊರ್ಜಿತತ್ವಕ್ಕೆ ಸಂಬಂಧಿಸಿದಂತೆ ವಾದ-ಪ್ರತಿವಾದ ಆಲಿಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪ್ರಕಟಿಸಿತು.

 “ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಕ್ಕೆ ಸಂಬಂಧಿಸಿದಂತೆ ಬ್ಯಾಂಕಿಂಗ್‌ ನಿಯಂತ್ರಣ ಕಾಯಿದೆ ಸೆಕ್ಷನ್‌ 35ಎ ಅಡಿ ವ್ಯಾಖ್ಯಾನವನ್ನು ಒಪ್ಪಲಾಗದು. ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೋರಿಕೆಗೆ ಅನುಮತಿಸಿದರೆ ಪ್ರತಿಯೊಂದು ಬ್ಯಾಂಕಿಂಗ್‌ ಸಂಸ್ಥೆಯು ತನಿಖೆಗೆ ಕೋರಬಹುದು. ಹೀಗೆ ಮಾಡಿದಲ್ಲಿ ದೆಹಲಿ ಪೊಲೀಸ್‌ ಸ್ಥಾಪನಾ ಕಾಯಿದೆಯು ಅನುಪಯುಕ್ತವಾಗಲಿದೆ” ಎಂದು ಪೀಠವು ಮೌಖಿಕವಾಗಿ ಹೇಳಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ರಾಜ್ಯ ಸರ್ಕಾರದ ಪರವಾಗಿ ವಾದಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ವಿ ಆಚಾರ್ಯ ಅವರು “ಯಾವುದೇ ಪ್ರಕರಣದ ತನಿಖೆ ನಡೆಸುವ ಅಂತರ್ಗತ ಅಧಿಕಾರ ಸಿಬಿಐಗೆ ಇಲ್ಲ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲಾಗದು. ಪೊಲೀಸ್‌ ಅಧಿಕಾರವು ಶಾಸನಬದ್ಧವಾಗಿದ್ದು, ಅದು ಸಾಂವಿಧಾನಿಕ ನಿಬಂಧನೆಗಳಿಗೆ ಅನುಗುಣವಾಗಿದೆ. ಸಿಬಿಐ ಎಂದರೆ ಕೇಂದ್ರ ಸರ್ಕಾರವಾಗಿದ್ದು, ಅದು ಪ್ರಕರಣದಲ್ಲಿ ಪಕ್ಷಕಾರನಾಗಿಲ್ಲದಿದ್ದರೂ ನ್ಯಾಯಾಲಯದ ಮುಂದೆ ಬಂದಿದೆ. ತನ್ನ ಎರಡು ಬಾಹುಗಳಾದ ಸಿಬಿಐ ಮತ್ತು ಯೂನಿಯನ್‌ ಬ್ಯಾಂಕ್‌ ಮೂಲಕ ಕೇಂದ್ರ ಸರ್ಕಾರ ಇಲ್ಲಿ ಬಂದಿದೆ” ಎಂದಿದ್ದರು.

ಯೂನಿಯನ್‌ ಬ್ಯಾಂಕ್‌ ಪ್ರತಿನಿಧಿಸಿದ್ದ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರು ಸಿಬಿಐ ಕೇಂದ್ರ ಸರ್ಕಾರದ ಪ್ರತಿರೂಪ ಎಂಬ ವಾದಕ್ಕೆ ಆಕ್ಷೇಪಿಸಿದರು. “ಸಿಬಿಐ ಕೇಂದ್ರ ಸರ್ಕಾರದ ಪ್ರತಿರೂಪ ಎಂಬ ಕುರಿತು ವಾದಿಸಲು ಇಚ್ಛಿಸುವುದಿಲ್ಲ. ಅದು ಈ ಪ್ರಕರಣಕ್ಕೆ ಹೊಂದುವುದಿಲ್ಲ. ಇಂಥ ಪ್ರಕರಣದಲ್ಲಿ ಸಿಬಿಐ ಒಂದೇ ತನಿಖಾ ಸಂಸ್ಥೆ ಎಂದು ಆರ್‌ಬಿಐ ಹೇಳಿದೆ. ಬ್ಯಾಂಕಿಂಗ್‌ ಕ್ಷೇತ್ರದ ನಿರ್ವಹಣೆಗೆ ವ್ಯವಸ್ಥಿತ ಆಪತ್ತು ಎದುರಾದಾಗ ಬ್ಯಾಂಕಿಂಗ್‌ ನಿಯಂತ್ರಣ ಕಾಯಿದೆ ಸೆಕ್ಷನ್‌ 35ಎ ಅನ್ವಯಿಸುತ್ತದೆ” ಎಂದಿದ್ದರು.

ವಾಲ್ಮೀಕಿ ಅಭಿವೃದ್ಧಿ ನಿಗಮ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಕೇಂದ್ರ ಸರ್ಕಾರವು ಪರೋಕ್ಷ ಪ್ರತಿನಿಧಿ (ಪ್ರಾಕ್ಸಿ) ಮುಖೇನ ಯುದ್ಧಕ್ಕೆ ಇಳಿದಿದೆ. ಯೂನಿಯನ್‌ ಬ್ಯಾಂಕ್‌ ಹಿಂದಿನ ದಿನ ಸಿಬಿಐ ತನಿಖೆಗೆ ಕೋರುತ್ತದೆ. ಮಾರನೆಯ ದಿನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ” ಎಂದು ಆಕ್ಷೇಪಿಸಿದ್ದರು.

“ಹಾಲಿ ಪ್ರಕರಣವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವಿವಾದ ಎಂದು ಅದನ್ನು ಸಂವಿಧಾನದ 131ನೇ ವಿಧಿಯಡಿ ಸುಪ್ರೀಂ ಕೋರ್ಟ್‌ ನಿರ್ಧರಿಸಬೇಕೆ? ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ಬ್ಯಾಂಕಿಂಗ್‌ ನಿಯಂತ್ರಣ ಕಾಯಿದೆ ಸೆಕ್ಷನ್‌ 35ಎ ಅಡಿ ಹೊರಡಿಸಿರುವ ಮಾಸ್ಟರ್‌ ಸುತ್ತೋಲೆಯ ಪ್ರಕಾರ ನಿರ್ದಿಷ್ಟ ಮೊತ್ತದ ಹಣಕಾಸು ಅವ್ಯವಹಾರವನ್ನು ಸಿಬಿಐ ತನಿಖೆ ನಡೆಸಬೇಕೆ ಎಂಬ ವಿಚಾರಗಳಿಗೆ ಉತ್ತರಿಸುವ ಮೂಲಕ ಅರ್ಜಿಯ ಊರ್ಜಿತತ್ವ ನಿರ್ಧರಿಸಲಾಗುವುದು” ಎಂದು ನ್ಯಾಯಾಲಯ ಹೇಳಿತ್ತು.