ಅತಿವೇಗದಿಂದ ವಾಹನ ಚಲಾಯಿಸಿದ ಮಾತ್ರಕ್ಕೆ ಅದು ತನ್ನಿಂತಾನೇ ದುಡುಕಿನ ಅಥವಾ ನಿರ್ಲಕ್ಷ್ಯದ ಚಾಲನೆ ಎನಿಸಿಕೊಳ್ಳುವುದಿಲ್ಲ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ .
ಅತಿ ವೇಗ ಇಲ್ಲವೇ ಮಿತಿಮೀರಿದ ವೇಗ ಎಂಬುದು ಸಾಪೇಕ್ಷ ಕಲ್ಪನೆಯಾಗಿದ್ದು ಪ್ರಕರಣದ ನಿರ್ದಿಷ್ಟ ಸಂದರ್ಭದಲ್ಲಿ ಅದನ್ನು ಸಾಬೀತುಪಡಿಸುವಂತಹ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್ ಒದಗಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಸಿ ಎಸ್ ಸುಧಾ ತಿಳಿಸಿದರು.
ಪುರಾವೆಗಳಿಲ್ಲದೆ ಚಾಲಕ ಅಸಡ್ಡೆ ಇಲ್ಲವೇ ನಿರ್ಲಕ್ಷ್ಯ ತೋರಿದ್ದಾನೆ ಎಂದು ನ್ಯಾಯಾಲಯ ಹೇಳಲಾಗದು. ʼರೆಸ್ ಇಪ್ಸಾ ಲೊಕ್ವಿಟೂರ್ʼ (ರೆಸ್ ಇಪ್ಸಾ ಲೊಕ್ವಿಟೂರ್: ಒಂದು ಲ್ಯಾಟಿನ್ ಪದಗುಚ್ಛ. ಸಾಂದರ್ಭಿಕ ಸಾಕ್ಷ್ಯಗಳ ಮೂಲಕ ನಿರ್ಲಕ್ಷ್ಯದ ಚಾಲನೆಯಂತಹ ಪ್ರಕರಣವನ್ನು ಪರೋಕ್ಷವಾಗಿ ಸಾಬಿತುಪಡಿಸಲು ಅನುವು ಮಾಡಿಕೊಡುವ ಪರಿಕಲ್ಪನೆ) ನಿಯಮ ಇಲ್ಲಿ ಅನ್ವಯವಾಗದು ಎಂದು ಪೀಠ ತಿಳಿಸಿದೆ.
“ಅತಿವೇಗದಿಂದ ವಾಹನ ಚಲಾಯಿಸಿದ್ದ ಮಾತ್ರಕ್ಕೆ ಅದು ತನ್ನಿಂತಾನೇ ದುಡುಕಿನ ಇಲ್ಲವೇ ನಿರ್ಲಕ್ಷ್ಯದ ಚಾಲನೆ ಎನಿಸಿಕೊಳ್ಳುವುದಿಲ್ಲ. ಅತಿ ವೇಗ ಇಲ್ಲವೇ ಮಿತಿಮೀರಿದ ವೇಗ ಎಂಬುದು ಸಾಪೇಕ್ಷ ಕಲ್ಪನೆಯಾಗಿದೆ. ಪ್ರಕರಣದ ಸಂದರ್ಭ ಸನ್ನಿವೇಶಗಳಲ್ಲಿ ಅತಿ ವೇಗ ಎಂದರೇನು ಎಂಬುದನ್ನು ಸಾಬಿತುಪಡಿಸುವಂತಹ ಸಾಕ್ಷ್ಯಾಧಾರಗಳನ್ನು ಪ್ರಾಸಿಕ್ಯೂಷನ್ ಒದಗಿಸಬೇಕಾಗುತ್ತದೆ. ಕೆಲವು ಶಾಸನಬದ್ಧ ವಿನಾಯಿತಿಗಳಿಗೆ ಒಳಪಟ್ಟಿದ್ದರೂ ಅಪರಾಧವನ್ನು ಊಹಿಸಬಾರದು. ದಾಖಲೆಗಳು ಇಲ್ಲದಿದ್ದಾಗ . ʼರೆಸ್ ಇಪ್ಸಾ ಲೊಕ್ವಿಟೂರ್ʼ ಅನ್ವಯಿಸಿ ನಿರ್ಲಕ್ಷ್ಯದ ಊಹೆಯನ್ನು ಇಂತಹ ಪ್ರಕರಣಗಳಲ್ಲಿ ಮಾಡಲಾಗದು” ಎಂದು ನ್ಯಾಯಾಲಯ ನುಡಿದಿದೆ.
ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್. 304 ರ ಸೆಕ್ಷನ್ 2ರ ಅಡಿ ಕೊಲೆಗೆ ಸಮನಲ್ಲದ ನರಹತ್ಯೆ ಎಂಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯ ಸುಶೀಲನ್ ಎಂಬಾತನಿಗೆ ವಿಧಿಸಿದ್ದ ಶಿಕ್ಷೆ ಎತ್ತಿ ಹಿಡಿಯುವಾಗ ಏಕ ಸದಸ್ಯ ಪೀಠ ಈ ವಿಚಾರ ತಿಳಿಸಿದೆ.
ಮೇ 2013 ರಲ್ಲಿ, ಆರೋಪಿ ಮದ್ಯದ ಅಮಲಿನಲ್ಲಿ ಕಾರನ್ನು ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿದ ಪರಿಣಾಮ ಮೋಟಾರ್ ಸೈಕಲ್‌ಗೆ ಮುಖಾಮುಖಿ ಡಿಕ್ಕಿಯಾಗಿತ್ತು. ಬೈಕ್ ಸವಾರ ಶಾಜಿಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಹಿಂಬದಿ ಸವಾರರಾಗಿದ್ದ ಪತ್ನಿ ಮತ್ತು ಪುತ್ರನಿಗೆ ಗಾಯಗಳಾಗಿದ್ದವು.
ಆರೋಪಿಯದ್ದು ಕೊಲೆಗೆ ಸಮನಲ್ಲದ ನರಹತ್ಯೆ ಎಂದು ತೀರ್ಪು ನೀಡಿದ ವಿಚಾರಣಾ ನ್ಯಾಯಾಲಯ ಆತನಿಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹ 25,000 ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ.
ವಾದ ಆಲಿಸಿದ ನ್ಯಾಯಾಲಯ ಪಾನಮತ್ತರಾಗಿ ವಾಹನ ಚಲಾಯಿಸುವ ಚಾಲಕರು ಹೆಚ್ಚು ಕುಡಿದು ರಸ್ತೆಯ ವಿರುದ್ಧ ಬದಿಯಲ್ಲಿ ವಾಹನ ಚಲಾಯಿಸುವಾಗ ಕೇವಲ ನಿರ್ಲಕ್ಷ್ಯದಿಂದ ಪ್ರಾಣಹಾನಿಗಳಾಗುವ ಪ್ರಕರಣಗಳನ್ನು ತಳ್ಳಿ ಹಾಕುವಂತಿಲ್ಲ. ಅಂತಹ ಸಂಭವನೀಯ ಅಪಘಾತಗಳ ಬಗೆಗಿನ ಜ್ಞಾನ ಐಪಿಸಿ ಸೆಕ್ಷನ್ 304ರ ಸೆಕ್ಷನ್ IIರ ಅಡಿ ತಪ್ಪಾಗಿರುವುದನ್ನು ಸಾಬೀತುಪಡಿಸಲು ಸಾಕಾಗುತ್ತದೆ ಎಂದು ಆಂಥೋನಿ ಪರೇರಾ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದೆ.
“ಸಾವಿಗೆ ಕಾರಣವಾಗುವ ಸಾಧ್ಯತೆಯಿದೆ ಎಂಬ ಅರಿವಿದ್ದೂ ದುಡುಕಿನ ಅಥವಾ ನಿರ್ಲಕ್ಷ್ಯದ ಕೃತ್ಯಕ್ಕೆ ಮುಂದಾದರೆ ಐಪಿಸಿ ಸೆಕ್ಷನ್ 304ರ ಸೆಕ್ಷನ್ IIರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ. ನಿರ್ಲಕ್ಷ್ಯ ಅಥವಾ ಅಜಾಗರೂಕತೆಯಷ್ಟೇ ಸಾವಿಗೆ ಕಾರಣವಾಗಿದ್ದು ಇನ್ನೇನೂ ಇಲ್ಲದಿದ್ದಲ್ಲಿ, ಐಪಿಸಿ ಸೆಕ್ಷನ್ 304 ಎ ಅನ್ವಯವಾಗುತ್ತದೆ, ”ಎಂದು ನ್ಯಾಯಾಲಯ ಹೇಳಿತು.
ಈ ಹಿನ್ನೆಲೆಯಲ್ಲಿ ಆರೋಪಿಗೆ ವಿಧಿಸಿದ್ದ ಶಿಕ್ಷೆಯನ್ನು ನ್ಯಾಯಾಲಯ ಎತ್ತಿಹಿಡಿಯಿತು. ಆದರೆ ಹೆಚ್ಚಿನ ಪರಿಹಾರ ಕೋರಿ ಸಂತ್ರಸ್ತರು ಮಾಡಿದ್ದ ಮನವಿಯನ್ನು ಅದು ಪುರಸ್ಕರಿಸಲಿಲ್ಲ. ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಈಗಾಗಲೇ ₹ 30 ಲಕ್ಷ ಪರಿಹಾರ ನೀಡಿದೆ ಎಂದು ಅದು ನುಡಿಯಿತು. ಅಂತೆಯೇ ಆರೋಪಿಗಳ ಮೇಲ್ಮನವಿ ಮತ್ತು ಹೆಚ್ಚು ಪರಿಹಾರ ಕೋರಿ ಸಂತ್ರಸ್ತರು ಮಾಡಿದ್ದ ಎರಡೂ ಮನವಿಗಳನ್ನು ವಜಾಗೊಳಿಸಿತು.