ಭೂಮಂಡಲದಲ್ಲಿ ಭರತಭೂಮಿಗೆ ಧಾರ್ಮಿಕವಾಗಿ ಅತ್ಯಂತ ಮಹತ್ವವಿದೆ. ಆರ್ಯಾವರ್ತಾ ಎಂಬ ಅಭಿದಾನವನ್ನೂ ಪಡೆದ ಭಾರತದಲ್ಲಿ ಪವಿತ್ರ ನದಿಗಳು ಹರಿಯುತ್ತವೆ, ಸಹಸ್ರಾರು ಋಷಿಮುನಿಗಳು ಕೋಟ್ಯನುಕೋಟಿ ದೇವತೆಗಳು ಜನ್ಮ ತಳೆದಿದ್ದಾರೆ ಎಂದು ನಮ್ಮ ಪುರಾಣಗಳು ಸಾರುತ್ತವೆ.
ಕರ್ನಾಟಕದಲ್ಲಿ ಕೂಡ ಹಲವು ಪವಿತ್ರ ಪುಣ್ಯಭೂಮಿಗಳಿವೆ. ಇವುಗಳಿಗೆ ತಮ್ಮದೇ ಆದ ಐತಿಹ್ಯವಿದೆ. ಇಂಥ ಒಂದು ಐತಿಹ್ಯಪೂರ್ಣ ಮಹಿಮಾನ್ವಿತ ಕ್ಷೇತ್ರಗಳಲ್ಲಿ ಬೆಂಗಳೂರೂ ಒಂದೆನ್ನುತ್ತಾರೆ ಹಿರಿಯರು. ಇದಕ್ಕೆ ಪೂರಕವಾಗಿ ಹಲವು ಮಹತ್ವದ ಪುಣ್ಯಕ್ಷೇತ್ರಗಳು ಬೆಂಗಳೂರಿನಲ್ಲಿವೆ. ಇಂಥ ಒಂದು ಕ್ಷೇತ್ರ ವಸಂತಪುರ.
ವಸಂತಪುರ ಬೆಂಗಳೂರು – ಕನಕಪುರ ರಸ್ತೆಯಲ್ಲಿ ಕೋಣನಕುಂಟೆ ಕ್ರಾಸ್ ಬಳಿ ಇರುವ ಒಂದು ಪ್ರಾಚೀನ ಪುಣ್ಯಕ್ಷೇತ್ರ. ಬೆಂಗಳೂರಿನಿಂದ 13 ಕಿಲೋ ಮೀಟರ್ ದೂರದಲ್ಲಿರುವ ವಸಂತಪುರ ಹರಿಹರಕ್ಷೇತ್ರ ಎಂದೇ ಖ್ಯಾತವಾಗಿದೆ. ಇಲ್ಲಿ ಬೆಟ್ಟದ ಮೇಲೆ ವಿಜಯನಗರ ಶೈಲಿಯಲ್ಲಿರುವ ಭವ್ಯ ದೇವಾಲಯವಿದೆ. 19 ನೇ ಶತಮಾನದಲ್ಲಿ ಈ ದೇವಾಲಯವನ್ನು ವಿಸ್ತರಿಸಲಾಗಿದೆ.
ಬೆಂಗಳೂರು ಪ್ರಾಚೀನ ಕಾಲದಲ್ಲಿ ಕಲ್ಯಾಣಪುರಿ ಎಂದು ಖ್ಯಾತವಾಗಿತ್ತಂತೆ. ಒಮ್ಮೆ ಹಿಮಾಲಯದಲ್ಲಿ ತಪವನ್ನಾಚರಿಸುತ್ತಿದ್ದ ಮಾಂಡವ್ಯ ಮಹಾಮುನಿಗಳು ದಕ್ಷಿಣ ಬದರಿಕಾಶ್ರಮ ಎಂದೇ ಖ್ಯಾತವಾದ ಮೇಲುಕೋಟೆಯ ಚೆಲುವನಾರಾಯಣನ ದರ್ಶನಕ್ಕೆ ಕರ್ನಾಟಕಕ್ಕೆ ಬಂದರಂತೆ. ಹೀಗೆ ಬಂದ ಮಹಾಮುನಿಗಳು ಹಿಂತಿರುಗುತ್ತಿದ್ದಾಗ ಅವರಿಗೆ ಕನಸಿನಲ್ಲಿ ಕಾಣಿಸಿಕೊಂಡ ಶ್ರೀಮನ್ನಾರಾಯಣ ಕಲ್ಯಾಣಪುರಿಯ ದಕ್ಷಿಣ ಬೆಟ್ಟದಲ್ಲಿ ತಾನು ನೆಲೆಸಿರುವುದಾಗಿ ತಿಳಿಸಿ ತನ್ನನ್ನು ಆರಾದಿಸುವಂತೆ, ತನ್ನ ದರ್ಶನ ಭಾಗ್ಯ ಭಕ್ತರಿಗೆ ದೊರಕುವಂತೆ ಮಾಡು ಎಂದು ಆಣತಿ ಇತ್ತನಂತೆ.
ಸ್ವಾಮಿಯ ಆಜ್ಞೆಯಂತೆ ಕಲ್ಯಾಣಪುರಿಯ ದಕ್ಷಿಣ ಪರ್ವತದಲ್ಲಿ ಸ್ವಾಮಿಯನ್ನು ಹುಡುಕುತ್ತಾ ಮಾಂಡವ್ಯ ಮಹಾಮುನಿಗಳು ಈಗಿನ ವಸಂತಪುರಕ್ಕೆ ಬಂದರಂತೆ. ಅಲ್ಲಿ ವಿಶಾಲವಾದ ಬೆಟ್ಟದ ಮೇಲೆ ಮನಮೋಹಕವಾದ ದೇವತಾ ಮೂರ್ತಿಗಳನ್ನು ಕಂಡು ಮೂಖವಿಸ್ಮಿತರಾಗುತ್ತಾರೆ. ಭೂವೈಕುಂಠ ಎಂದೇ ಖ್ಯಾತವಾದ ತಿರುಪತಿಯ ಶ್ರೀನಿವಾಸನ ದರ್ಶನವನ್ನೇ ಮಾಡಿದಷ್ಟು ಸಂತಸಗೊಂಡರಂತೆ.
ಸ್ವಾಮಿಯ ಆಣತಿಯಂತೆ ವಿಧಿವತ್ತಾಗಿ ಪ್ರತಿಷ್ಠಾಪಿಸಿ ನಿತ್ಯ ಅರ್ಚಿಸುತ್ತಾ, ಹತ್ತಿರದಲ್ಲೇ ಇದ್ದ ಗುಪ್ತಗಿರಿಯ ಗುಹೆಯಲ್ಲಿ ನೆಲೆಸಿ ತಪವನ್ನಾಚರಿಸಿದರೆಂದು ಸ್ಥಳ ಪುರಾಣ ಹೇಳುತ್ತದೆ. ಈ ಬಗ್ಗೆ ಕರ್ನಾಟಕ ಗೆಜೆಟಿಯರ್ ಮತ್ತು ಎಪಿಗ್ರಾಫಿ ಆಫ್ ಕರ್ನಾಟಕದಲ್ಲಿ ಕೂಡ ಉಲ್ಲೇಖವಿದೆ. ಈಗಲೂ ದೇವಾಲಯದ ಹಿಂಭಾಗದಲ್ಲಿ ಅರ್ಧ ಕಿಲೋ ಮೀಟರ್ ದೂರದಲ್ಲಿ ಮಾಂಡವ್ಯ ಮಹಾಮುನಿಗಳು ತಪವನ್ನಾಚರಿಸಿದರೆನ್ನಲಾದ ಗುಹೆ ಇದೆ.
ಸ್ವಾಮಿಯ ರಥೋತ್ಸವದ ವೇಳೆ ಇಲ್ಲಿಯೇ ಪಕ್ಕದಲ್ಲಿರುವ ತೀರ್ಥದಿಂದ ನೀರು ತಂದು ಗುಹೆಯ ಬಳಿಗೆ ಉತ್ಸವ ಮೂರ್ತಿ ಕೊಂಡೊಯ್ದು ಪೂಜಿಸುವ ಪರಿಪಾಠವಿದೆ. ಮಾಂಡವ್ಯ ಮಹಾಮುನಿಗಳು ದೇವರನ್ನು ಪ್ರತಿಷ್ಠಾಪಿಸಿದ ಐತಿಹ್ಯಕ್ಕೆ ಪುಷ್ಟಿ ನೀಡುವಂತೆ ದೇವಾಲಯದ ಪ್ರಾಕಾರಣದಲ್ಲಿ ಮಾಂಡವ್ಯ ಮಹಾಮುನಿಗಳು ತಪವನ್ನಾಚರಿಸುತ್ತಿರುವ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಅಂತ್ಯ ಮನಮೋಹಕವಾದ ಹಾಗೂ ದ್ರಾವಿಡ ಶೈಲಿಯ ಭವ್ಯ ದೇವಾಲಯವಿದೆ. ಆಧುನಿಕವಾಗಿ ಜೀರ್ಣೋದ್ಧಾರ ಮಾಡಲಾಗಿರುವ ಈ ದೇವಾಲಯದಲ್ಲಿ ಇನ್ನೂ ಪ್ರಾಚೀನತೆಯ ಕುರುಹುಗಳಿವೆ.
ಪ್ರಧಾನ ದೇವಾಲಯ ಪ್ರವೇಶಿಸುತ್ತಿದ್ದಂತೆ ವರ್ಣಮಯ ಅರೆಗೋಪುರ ಮಾದರಿಯ ಗಾರೆ ಗೂಡುಗಳಲ್ಲಿರುವ ಆಳೆತ್ತರದ ಜಯವಿಜಯರ ಶಿಲಾ ಮೂರ್ತಿಗಳು ಭಕ್ತರನ್ನು ಸ್ವಾಗತಿಸುತ್ತವೆ.
ದೇವಾಲಯದ ಮುಖ್ಯದ್ವಾರಕ್ಕೆ ನೇರವಾಗಿ ಗರ್ಭಗೃಹದಲ್ಲಿರುವ ಶಂಖ, ಚಕ್ರ ಧಾರಿಯಾಗಿ ಅಭಯ ಮತ್ತು ವರದಮುದ್ರೆಯಲ್ಲಿ ಶ್ರೀದೇವಿ ಮತ್ತು ಭೂದೇವಿ ಸಹಿತನಾದ 1.5 ಮೀಟರ್ ಎತ್ತರವಿರುವ ಭವ್ಯ ವಸಂತವಲ್ಲಭರಾಯಸ್ವಾಮಿಯ ದರ್ಶನವಾಗುತ್ತದೆ.
ಇಲ್ಲಿರುವ ಶ್ರೀನಿವಾಸ ದೇವರಿಗೆ ವಸಂತವಲ್ಲಭರಾಯ ಎಂಬ ಹೆಸರು ಬಂದ ಬಗ್ಗೆಯೂ ಒಂದು ಕಥೆ ಇದೆ. ಮಾಂಡವ್ಯ ಮಹಾಋಷಿಗಳು ವಸಂತಪುರದಲ್ಲಿ ನೆಲೆಸಿ ದೇವರನ್ನು ಆರಾಧಿಸುತ್ತಿದ ಸಮಯದಲ್ಲಿ ಶ್ರೀನಿವಾಸ ದೇವರ ಕಲ್ಯಾಣ ನಡೆಯುತ್ತದೆ. ಮಾಂಡವ್ಯ ಮಹಾಮುನಿಗಳು ತಾವು ಕಲ್ಯಾಣ ಮಹೋತ್ಸವ ಕಾಣಲಿಲ್ಲವಲ್ಲಎಂದು ದೇವರ ಮುಂದೆ ಪರಿತಪಿಸುತ್ತಾರೆ. ಮುನಿಗಳ ಮನದಾಳವನ್ನರಿತ ಭಗವಂತ ಭೂದೇವಿ, ನೀಳಾದೇವಿ ಹಾಗೂ ವಸಂತನಾಯಕಿ ಅಮ್ಮನವರೊಂದಿಗೆ ಮಾಂಡವ್ಯರಿಗೆ ವಸಂತಪುರದಲ್ಲೇ ದರ್ಶನ ನೀಡುತ್ತಾರಂತೆ. ಸಪತ್ನೀಕರಾಗಿ ಬಂದ ಶ್ರೀನಿವಾಸದೇವರು ವಸಂತಪುರ ಪ್ರದೇಶದ ರಮಣೀಯತೆಗೆ ಮನಸೋತು ಆ ಭೂಭಾಗದಲ್ಲಿದ್ದ ಐದು ಸರೋವರಗಳಲ್ಲಿ ಭೂದೇವಿ, ನೀಳಾದೇವಿ ಹಾಗೂ ವಸಂತನಾಯಕರೊಡಗೂಡಿ ವಸಂತನ್ನಾನ ಮಾಡುತ್ತಾರಂತೆ. ಭಗವಂತನೆ ಸಾಕ್ಷಾತ್ ಜಳಕವಾಡಿದ ಈ ಸರೋವರುಗಳು ಶಂಖತೀರ್ಥ, ಚಕ್ರತೀರ್ಥ, ಪ್ಲವತೀರ್ಥ, ದೇವತೀರ್ಥ ಹಾಗೂ ವಸಂತತೀರ್ಥ ಎಂಬ ಐದು ತೀರ್ಥಗಳಾಗಿವೆಯಂತೆ ಎನ್ನುತ್ತಾರೆ ದೇವಾಲಯದ ಅರ್ಚಕರಾದ ರಘುರಾಮಭಟ್ಟರ್.
ದೇವಾಲಯ ಪ್ರವೇಶಿಸುತ್ತಿದ್ದಂತೆ ಎಡ ಭಾಗದಲ್ಲಿ ಆಂಜನೇಯನ ದರ್ಶನವಾಗುತ್ತದೆ. ಅದರ ಸನಿಹದಲ್ಲೇ ಒಂದೇ ಶಿಲೆಯಲ್ಲಿ ಮುಂಭಾಗದಲ್ಲಿ ಸುದರ್ಶನ ಹಾಗೂ ಹಿಂಭಾದಲ್ಲಿ ನರಸಿಂಹನ ವಿಗ್ರಹದ ದರ್ಶನ ಮನಮೋಹಕ. ಆಂಜನೇಯನ ಗುಡಿ ಎದುರು ಆಳ್ವಾರರ ಮೂರ್ತಿಗಳಿವೆ. ಸುಂದರವಾದ ಉತ್ಸವ ಮೂರ್ತಿ ಗಮನ ಸೆಳೆಯುತ್ತದೆ. ದರ್ಪಣ ಮಂಟಪದಲ್ಲಿ ವಿದ್ಯುತ್ ದೀಪಾಲಂಕಾರದಲ್ಲಿ ಸ್ವಾಮಿಯ ಮೂರ್ತಿಯ ದರ್ಶನವಂತೂ ಮನೋಹರ.
ರಥೋತ್ಸವದ ವೇಳೆ ಬಳಸುವ ಬೆಳ್ಳಿಯ ರಥ ಇಲ್ಲಿನ ಮತ್ತೊಂದು ಆಕರ್ಷಣೆ. ಈ ರಥದಲ್ಲಿ ಗರುಡ ಹಾಗೂ ದಶಾವತಾರದ ಕೆತ್ತನೆಗಳಿವೆ. ಸುವರ್ಣಲೇಪಿತ ಕಳಶಗಳೂ ಇವೆ. ದೇವಾಲಯದ ಎದುರು ಇರುವ ಪುಟ್ಟ ಗುಡಿಯಲ್ಲಿ ಗರುಡನ ಸುಂದರ ಶಿಲಾಮೂರ್ತಿಯಿದೆ.
ದೇವಾಲಯಕ್ಕೆ ವಿಶಾಲವಾದ ಪ್ರಾಕಾರವಿದೆ. ಇಲ್ಲಿ ಉಡುಪಿ ಶ್ರೀಕೃಷ್ಣನನ್ನು ಕನಕನ ಕಿಂಡಿಯಲ್ಲಿ ದರ್ಶಿಸುವಂತೆ ನಾರಸಿಂಹ ದರ್ಶನ ಪಡೆಯಬಹುದು. ಪಕ್ಕದಲ್ಲೇ ತುಳಸಿ ಬೃಂದಾವನವಿದೆ.
ಭವ್ಯ ಪ್ರಾಕಾರದ ಕಲ್ಲಿನ ಭಿತ್ತಿಗಳಲ್ಲಿ ಯಾವುದೇ ಕೆತ್ತನೆಗಳಿಲ್ಲ. ಆದರೆ ಗೋಪುರದಲ್ಲಿ ಸುವರ್ಣ ಕಳಸದ ಕೆಳಗೆ ಪುರಾಣದ ಹಲವು ಪ್ರಸಂಗಗಳನ್ನು ವಿವರಿಸುವ ಗಾರೆಯ ಶಿಲ್ಪಗಳಿವೆ. ಭಿತ್ತಿಯ ಮೇಲೆ ಅಲ್ಲಲ್ಲಿ ನಾಗರಹಾವು ಹಾಗೂ ಗಂಡಬೇರುಂಡ ಮೊದಲಾದ ಗಾರೆ ಶಿಲ್ಪಗಳನ್ನು ಕಾಣಬಹುದಾಗಿದೆ. ಗೋಪುರದ ಒಂದು ಭಾಗದಲ್ಲಿ ತಿರುಪತಿಯಲ್ಲಿ ಇರುವಂತೆಯೇ ಶ್ರೀನಿವಾಸ ದೇವರ ಮೂರ್ತಿಯಿದೆ. ಇದಕ್ಕೆ ಬೆಳ್ಳಿಯ ಕವಚ ಹೊದಿಸಲಾಗಿದೆ.
ದೇವಾಲಯದ ಹೊರಗೆ ಪುರಾತನ ಮಂಟಪ, ಗ್ರಾಮದೇವತೆಯ ಗುಡಿ ಇದೆ. ಬೆಂಗಳೂರು ಬಸ್ ನಿಲ್ದಾಣ, ಕೃಷ್ಣರಾಜ ಮಾರುಕಟ್ಟೆಯಿಂದ ದೇವಾಲಯಕ್ಕೆ ನೇರ ಬಸ್ ಸೌಕರ್ಯವೂ ಇದೆ.
ದೇವಾಲಯದ ಎದುರು ಆಂಜನೇಯನ ದೇವಾಲಯವಿದೆ. ಪಕ್ಕದಲ್ಲಿ ಪ್ರಾಚೀನವಾದ ಶಿಥಿಲಾವಸ್ತೆಯಲ್ಲಿರುವ ಮಂಟಪವಿದೆ. ದೇವರಿಗೆ ನಿತ್ಯ ಪಾಂಚರಾತ್ರಾಗಮರೀತ್ಯ ಪೂಜೆ ನಡೆಯುತ್ತದೆ. ತಿರುಪತಿಯಂತೆಯೇ ಕಲ್ಯಾಣೋತ್ಸವ ಹಾಗೂ ಬ್ರಹ್ಮರಥೋತ್ಸವ, ತೆಪ್ಪೊತ್ಸವಗಳೂ ಜರುಗುತ್ತವೆ