ಕಥೆ ಪ್ರಾರಂಭವಾಗುವುದೇ ಬೆಂಗಳೂರಿನ ಮಾರುಕಟ್ಟೆ ಗದ್ದುಗೆ ಯಾರಿಗೆ ಸಿಗಬೇಕೆಂದು? ದೇವ ಮತ್ತು ಗೋವಿಂದ ಎಂಬ ರೌಡಿ ಕಂ ರಾಜಕಾರಣಿಗಳ ನಡುವಿನ ಕಿತ್ತಾಟ. ಅವರ ನಡುವೆ ಸಿಕ್ಕಿಕೊಳ್ಳುವ ನಾಯಕನ ಭಾವ ಅಚ್ಯುತ್ ಕುಮಾರ್.
ಈ ರೇಸಿನಲ್ಲಿ ಹತ್ತಾರು ಪಾತ್ರಗಳು ಬಂದು, ನಾಲ್ಕಾರು ಕೊಲೆಗಳು ನಡೆದು ಇದೊಂದು ಅಪ್ಪಟ ಆ್ಯಕ್ಷನ್ ಪ್ರಿಯರ ಸಿನಿಮಾ ಎಂಬುದನ್ನು ಆಗಾಗ ನೆನಪಿಸಿ ಹೋಗುತ್ತವೆ. ಅಣ್ಣನನ್ನು ಕಳೆದುಕೊಂಡ ಬೇಸರದಲ್ಲಿ ಸ್ಮಶಾನದಲ್ಲಿದ್ದ ನಾಯಕ ವೀರ, ಹೆಣದ ಬೆಂಕಿಯಲ್ಲಿದ್ದ ಕತ್ತಿಯನ್ನು ಎತ್ತಿಕೊಂಡು ಬಂದು ಹೊಡೆಯುವಾಗ ಇದೊಂದು ಊಹೆಗೂ ನಿಲುಕದ, ಬೇರೆಯದೇ ಪಂಕ್ತಿಯಲ್ಲಿ ನಿಲ್ಲಬಹುದಾದ ಮಾಸ್ ಸಿನಿಮಾ ಎನ್ನಿಸುವುದಂತೂ ಸುಳ್ಳಲ್ಲ!
ರಕ್ತಮಯ, ಕೆಂಪುಕೆಂಪಾದ ಸಿನಿಮಾದಲ್ಲೊಂದು ಮುಂಜಾನೆಯ ಹದವಾದ ಬಿಸಿಲು ಶ್ರುತಿ. ನಾಯಕನ ಅಕ್ಕನಾಗಿ ಇಬ್ಬರು ತಮ್ಮಂದಿರಿಗೆ ತಾಯಿ ಪ್ರೀತಿ ನೀಡುವ ಶ್ರುತಿ, ನಟನೆಯಿಂದ ಪ್ರೇಕ್ಷಕರನ್ನು ಆವರಿಸಿಕೊಂಡು ಬಿಡುತ್ತಾರೆ. ಆದರೆ ಸಿನಿಮಾದ ಕಥೆ ಆ ಭಾವನೆಯನ್ನು ಹಾಗೇ ಉಳಿಯಲು ಬಿಡುವುದಿಲ್ಲ ಮತ್ತು ತುಂಬ ಸನ್ನಿವೇಶಗಳಲ್ಲಿ ಈ ಭಾವುಕ ಪ್ರೀತಿ ತುರುಕಿರುವಂತೆ ಕಾಣುತ್ತದೆ.
ಖಳನಾಯಕನ ಅವತಾರದಲ್ಲಿ ಪ್ರವೇಶ ಪಡೆಯುವ ಶ್ರೀನಗರ ಕಿಟ್ಟಿ ನಾಯಕನ ಕಡೆಯವನು ಮತ್ತು ಒಳ್ಳೆಯವನು ಎಂದು ಜೀರ್ಣಿಸಿಕೊಳ್ಳಲು ಕೆಲಕಾಲ ಬೇಕಾಗುತ್ತದೆ. ರೌಡಿಯಾದರೂ ನಾಯಕನ ಒಳ್ಳೆ ಕೆಲಸಕ್ಕೆ ಬೆಂಬಲವಾಗಿ ನಿಲ್ಲುವ ಕಿಟ್ಟಿ ನಟನೆಯಿಂದ ವಾವ್ ಎನ್ನಿಸುವ ಹೊತ್ತಿಗೆ ಕೊಲೆಯಾಗಿಬಿಡುತ್ತಾರೆ. ತಮ್ಮ ಪಾತ್ರಕ್ಕೆ ಜೀವ ತುಂಬಿದ್ದ ಒಳ್ಳೆ ನಟನಿಗೆ ನಿರ್ದೇಶಕರು ಬಹಳ ಕಡಿಮೆ ಜಾಗ ನೀಡಿದರು ಎನ್ನಿಸುವುದು ಸುಳ್ಳಲ್ಲ.
ಮೊದಲ 30–40 ನಿಮಿಷ ಸಿನಿಮಾದಲ್ಲಿ ಕಥೆಯಾಗಿ ಒಂಥರ ಏನೂ ಘಟಿಸುವುದೇ ಇಲ್ಲ. ಅವರನ್ನು ಇವರು ಹೊಡೆದರು, ಇವರು ಅವರನ್ನು ಹೊಡೆದರು…ಯಾವುದಕ್ಕೂ ಗಟ್ಟಿಯಾದ ಕಾರಣವಾಗಲಿ, ದ್ವೇಷವಾಗಲಿ ಕಾಣ ಸಿಗುವುದೇ ಇಲ್ಲ. ಕಾಲೇಜು ಹುಡುಗನಿಗೆ ಪ್ರೇಯಸಿಯಾಗಿ ರಚಿತಾ ರಾಮ್ ಹಾಗೆ ಬಂದು, ಒಂದು ಹಾಡಿಗೆ ಕುಣಿದು ಹೀಗೆ ಹೋಗಿ, ಮತ್ತೆ ಹಾಗೆ ಬರುತ್ತಾರೆ ಎಂಬ ರೀತಿಯ ಪಾತ್ರ.
ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ಉತ್ತಮವಾಗಿದೆ. ‘ಮೌನವೇ ಚೆನ್ನ’ ಹಾಡು ಕಿವಿಗೆ ಹಿತವಾಗಿದೆ. ಲವಿತ್ ಕ್ಯಾಮೆರಾ ಕೈಚಳಕ ವರ್ಣಮಯವಾಗಿದೆ. ಸಿನಿಮಾ ಮಾಸ್ ಪ್ರಿಯರಿಗಾಗಿದ್ದರೂ ಕಥೆ ಇನ್ನಷ್ಟು ಗಟ್ಟಿಯಾಗಬೇಕಿತ್ತು. ಪ್ರಜ್ವಲ್–ರಚಿತಾ ಕೆಮಿಸ್ಟ್ರಿಯನ್ನು ಇನ್ನಷ್ಟು ಬಳಸಿಕೊಂಡು, ಶ್ರೀನಗರ ಕಿಟ್ಟಿಯನ್ನು ಇನ್ನೊಂದಷ್ಟು ಹೊತ್ತು ಉಳಿಸಿಕೊಳ್ಳಬಹುದಿತ್ತು. ನಗು ತರಿಸಲೆಂದು ಬರೆದ ಕೆಲವು ಸನ್ನಿವೇಶ, ಮಾತುಗಳು ಆ ಉದ್ದೇಶವನ್ನು ಈಡೇರಿಸುವುದೇ ಇಲ್ಲ. ಸಿನಿಮಾದ ಅವಧಿಯನ್ನು ಇನ್ನೊಂದು 15 ನಿಮಿಷ ಕತ್ತರಿಸಬಹುದಿತ್ತು.