ಮನೆ ಕಾನೂನು ಎನ್’ಎಫ್’ಟಿಯಲ್ಲಿ ಅನಧಿಕೃತವಾಗಿ ಹೆಸರು, ಚಿತ್ರ ಬಳಕೆ: ದೆಹಲಿ ಹೈಕೋರ್ಟ್ ಕದತಟ್ಟಿದ ಐವರು ಕ್ರಿಕೆಟಿಗರು

ಎನ್’ಎಫ್’ಟಿಯಲ್ಲಿ ಅನಧಿಕೃತವಾಗಿ ಹೆಸರು, ಚಿತ್ರ ಬಳಕೆ: ದೆಹಲಿ ಹೈಕೋರ್ಟ್ ಕದತಟ್ಟಿದ ಐವರು ಕ್ರಿಕೆಟಿಗರು

0

ಆನ್’ಲೈನ್ ಮೋಜಿನ ಆಟಗಳ ವೇದಿಕೆಯಾದ ಸ್ಟ್ರೈಕರ್ ಮತ್ತು ಎಂಪಿಎಲ್’ಗಳಿಗೆ ಡಿಜಿಟಲ್ ಕರೆನ್ಸಿಯಾದ ನಾನ್ ಫಂಜಿಬಲ್ ಟೋಕನ್’ಗಳ (ಎನ್’ಎಫ್’ಟಿ) ಮೇಲೆ ತಮ್ಮ ಚಿತ್ರ ಮತ್ತು ಹೆಸರು ಮುದ್ರಿಸಿ ಹಂಚಿಕೆ ಮಾಡದಂತೆ ನಿರ್ದೇಶಿಸುವಂತೆ ಕೋರಿ ಡಿಜಿಟಲ್ ಕ್ರಿಕೆಟ್ ಕಲೆಕ್ಟಿಬಲ್ ವೇದಿಕೆ ರೇರಿಯೊ ಮತ್ತು ಐವರು ಕ್ರಿಕೆಟಿಗರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Join Our Whatsapp Group

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕ್ರಿಕೆಟಿಗರಾದ ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಮ್ ಮವಿ ಹಾಗೂ ರೇರಿಯೊ ಮೇಲ್ಮನವಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ಸೌರಭ್ ಬ್ಯಾನರ್ಜಿ ಅವರು ವಿಚಾರಣೆ ನಡೆಸಿದರು. ಸ್ಟ್ರೈಕರ್ ಮತ್ತು ಎಂಪಿಎಲ್ ವಿರುದ್ಧ ಪ್ರತಿಬಂಧಕಾದೇಶ ಕೋರಿದ್ದ ಅರ್ಜಿಯನ್ನು ಏಕಸದಸ್ಯ ಪೀಠವು ವಜಾ ಮಾಡಿತ್ತು.

ಉಭಯ ಪಕ್ಷಕಾರರಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಆದೇಶಿಸಿರುವ ನ್ಯಾಯಾಲಯವು ಮೇ 23ಕ್ಕೆ ವಿಚಾರಣೆ ಮುಂದೂಡಿತು. ಅಂದು ಆಟಗಾರರ ಎನ್’ಎಫ್’ಟಿ ಬಳಕೆಗೆ ಸಂಬಂಧಿಸಿದಂತೆ ಮಧ್ಯಂತರ ಪ್ರತಿಬಂಧಕಾದೇಶ ಕೋರಿರುವ ಅರ್ಜಿ ಪರಿಗಣಿಸುವುದಾಗಿ ಹೇಳಿದೆ.

ರೇರಿಯೊ ಪ್ರತಿನಿಧಿಸಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ನ್ಯಾಯಯುತ ಬಳಕೆ ಎಲ್ಲಿ ಕೊನೆಗೊಳ್ಳುತ್ತದೆ ಮತ್ತು ಗೌಪ್ಯತೆ ಎಲ್ಲಿ ಪ್ರಾರಂಭವಾಗುತ್ತದೆ ಎಂಬುದರ ಕುರಿತು ಸಾಮಾನ್ಯವಾಗಿ ತಪ್ಪು ಕಲ್ಪನೆಯಿದೆ ಎಂದು ವಾದಿಸಿದರು.

ಆಟಗಾರರ ಚಿತ್ರಗಳನ್ನು ಒಳಗೊಂಡಿರುವ ಎನ್’ಎಫ್’ಟಿಯು ಆಟಗಾರರ ವ್ಯಕ್ತಿತ್ವವಲ್ಲದೆ ಬೇರೇನೂ ಅಲ್ಲ. ಆಟಗಾರರು ತಮ್ಮ ವ್ಯಕ್ತಿತ್ವದ ಬಗ್ಗೆ ಸಂಪೂರ್ಣ ಹಕ್ಕು ಹೊಂದಿರುತ್ತಾರೆ ಎಂದರು. ಆಟಗಾರರ ಹಕ್ಕುಗಳನ್ನು ಪರಿಗಣಿಸಿ ರೇರಿಯೊ ಗಣನೀಯ ಪ್ರಮಾಣದ ಹಣ ಪಾವತಿಸಿ, ಅವರ ವ್ಯಕ್ತಿತ್ವ ಬಳಸಿಕೊಳ್ಳುವ ಹಕ್ಕನ್ನು ಪಡೆದುಕೊಂಡಿದೆ ಎಂದು ವಾದಿಸಿದರು.

ಮತ್ತೊಬ್ಬ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು “ಸಚಿನ್ ಸಹಿ ಮಾಡಿರುವ ಬ್ಯಾಟ್ ಕುರಿತಾದ ಉದಾಹರಣೆಯನ್ನು ನಾನು ನೀಡುತ್ತೇನೆ. ಸಚಿನ್ ಸಹಿ ಇರುವುದರಿಂದ ಆ ಬ್ಯಾಟ್ಗೆ ಮೌಲ್ಯ ಇರುತ್ತದೆ. ಅದೇ ರೀತಿ, ನನ್ನ ಛಾಯಾಚಿತ್ರವನ್ನು ವ್ಯಾಪಾರಕ್ಕಾಗಿ ಬೇರೆಯವರು ಕೃತಿಚೌರ್ಯ ಮಾಡಲಾಗುವುದಿಲ್ಲ. ನನ್ನ ಒಪ್ಪಿಗೆ ಇಲ್ಲದೇ ಅವರು ಅದರ ವಹಿವಾಟು ನಡೆಸಲಾಗದು” ಎಂದರು.

ಹಿಂದಿನ ಲೇಖನಪಾಕಿಸ್ತಾನದಿಂದ ಮಾದಕ ವಸ್ತುಗಳ ಕಳ್ಳಸಾಗಣೆ: ಮೂವರ ಬಂಧನ
ಮುಂದಿನ ಲೇಖನಕೌಟುಂಬಿಕ ಕಲಹ: ಮಗನಿಂದಲೇ ಹೆತ್ತ ತಾಯಿಯ ಹತ್ಯೆ, ತಂದೆ ಮೇಲೂ ಹಲ್ಲೆ