ಮನೆ ರಾಜಕೀಯ ಮಾ.14 ರಂದು ವೀರಪ್ಪ ಮೊಯಿಲಿ ಅವರ ಆತ್ಮಕಥನ ಬಿಡುಗಡೆ

ಮಾ.14 ರಂದು ವೀರಪ್ಪ ಮೊಯಿಲಿ ಅವರ ಆತ್ಮಕಥನ ಬಿಡುಗಡೆ

0

ಬೆಂಗಳೂರು: ಕಾಂಗ್ರೆಸ್‌ ಮುಖಂಡ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಆತ್ಮಕಥನ ‘ನನ್ನ ಬೊಗಸೆಯ ಆಕಾಶ‘ ಕೃತಿ ಇದೇ 12ರಂದು ಸಂಜೆ 4 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಶಾಸಕ ಜಿ. ಪರಮೇಶ್ವರ ಈ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೊಯಿಲಿ, ‘ನನ್ನ ಬೊಗಸೆಯ ಆಕಾಶ’ ಪುಸ್ತಕವನ್ನು 12ರಂದು ಜಾಗತಿಕ ಲೋಕಕ್ಕೆ ನೀಡುತ್ತೇನೆ. ಹಾಗೆಂದು, ಇದನ್ನು ರಸವತ್ತಾಗಿ ಬರೆದಿಲ್ಲ. ವಾಸ್ತವಾಂಶದಿಂದ ಬರೆದಿದ್ದೇನೆ. ಬರಗೂರು ರಾಮಚಂದ್ರಪ್ಪ ಮುನ್ನುಡಿ ಬರೆದಿದ್ದಾರೆ’ ಎಂದರು.

‘ಮುಖ್ಯಮಂತ್ರಿ ಆದ ಕ್ಷಣ, ತೆರಿಗೆ ಸುಧಾರಣಾ ಆಯೋಗ, ಲೋಕಸಭಾ ಚುನಾವಣೆ, ನಾನೇಕೆ ಕಾಂಗ್ರೆಸ್ ಪಕ್ಷ ಆರಿಸಿಕೊಂಡೆ, ದೇವರಾಜ ಅರಸುರವರ ಎಚ್ಚರಿಕೆ- ಸೋಲಿಲ್ಲದ ಸರದಾರ, ಭೂ ಸುಧಾರಣೆ-ಕ್ರಾಂತಿಪಥ, ಮಾತು ಬಿಟ್ಟ ಇಂದಿರಾಗಾಂಧಿ, ಕೇರಳ ರಾಜ್ಯದ ರಾಜಕೀಯ ಸ್ಥಿತ್ಯಂತರ, ರಾಜಕೀಯ ಕಂಪನ, ರಾಜಕೀಯ ಹಗ್ಗ ಜಗ್ಗಾಟ, ಆಡಳಿತದಲ್ಲಿ ಹೊಸ ಶಕೆ, ಶಿಕ್ಷಣ ಕ್ರಾಂತಿ, ಕನಸಿನ ಯೋಜನೆಗಳಿಗೆ ಮುಕ್ತಿ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದೇನೆ’ ಎಂದು ವಿವರಿಸಿದರು.

ಒಂದು ಆತ್ಮಕಥನ ಬರೆಯಬೇಕು ಅಂದಾಗ ಸತ್ಯ ಇರಬೇಕು. ಆದರೆ, ಅದನ್ನು ಬರೆಯುವುದು ಬಹಳ ಕಷ್ಟ. ರಾಜಕಾರಣದಲ್ಲಿದ್ದಾಗ ಪೂರ್ಣ ಸತ್ಯಾಂಶ ಬರೆಯಲು ಸಾಧ್ಯವಾಗುವುದಿಲ್ಲ. ನಾನು ಅನುಮಾನದಿಂದಲೇ ಬರೆಯಲು ಆರಂಭಿಸಿದ್ದೆ. ತುಂಬಾ ಜನ ಬರೆಯಲು ಹೇಳಿದರು. ಕೆಲವರು ರಸವತ್ತಾಗಿ ಬರೆಯಿರಿ ಎಂದರು.

ಆದರೆ, ಅದು ಸಾಧ್ಯವಿಲ್ಲ ಎಂದೆ. ನನಗೆ ದಿನಚರಿ ಬರೆಯುವ ಅಭ್ಯಾಸವಿಲ್ಲ‌. ನಕಾರಾತ್ಮಕ ಭಾವನೆಗಳನ್ನು ತುಂಬಿಸುವ ಪ್ರಯತ್ನ ಮಾಡಿಲ್ಲ. ನನಗೆ ಸ್ವಯಂ ಸಂವಾದ ಮಾಡಿಕೊಳ್ಳುವುದೆಂರೆ ಇಷ್ಟ. ನನಗೆ ನಾನೇ ಮಾತನಾಡಿಕೊಳ್ಳುವುದೆಂದರೆ ಇಷ್ಟ. ನಮ್ಮಲ್ಲಿ ಅಧ್ಬತ ವ್ಯಕ್ತಿಯೊಬ್ಬ ಒಳಗಿರುತ್ತಾನೆ. ಅದನ್ನು ಹೊರ ತರಬೇಕಾಗುತ್ತದೆ. ನಿಮ್ಮನ್ನು ದ್ವೇಷ ಮಾಡುವವರನ್ನು ದ್ವೇಷ ಮಾಡಬೇಡಿ. ಯಾಕೆಂದರೆ ಅವರೇ ನಿಮ್ಮ ನಿಜವಾದ ವಿಮರ್ಶಕರು’ ಎಂದು ವಿಶ್ಲೇಷಿಸಿದರು.

‘ಭ್ರಷ್ಟಾಚಾರದ ಮೂಲಕ ರಾಜಕೀಯ ನಡೆಸಬಾರದು. ಈ ಪುಸ್ತಕದಲ್ಲಿ ವಸ್ತುನಿಷ್ಠತೆಯನ್ನು ನೀವು ಕಾಣಬಹುದು. ಲಕೋಟೆ ಮುಖ್ಯಮಂತ್ರಿ ಅಂತ ಯಾಕೆ ಬಂತು. ಆ ವಿಚಾರವನ್ನು ಕೂಡಾ ಈ ಪುಸ್ತಕದಲ್ಲಿ ಬರೆದಿದ್ದೇನೆ. ಇದರಲ್ಲಿ ನನಗೆ ನಾಚಿಕೆಯೇನೂ ಇಲ್ಲ. ಲಕೋಟೆ ಹಿಂದೆ ಒಂದು ಸತ್ಯಾಂಶ ಇದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ‌ ಈ ಪುಸ್ತಕದಲ್ಲಿದೆ’ ಎಂದರು.