ನವದೆಹಲಿ : ಅಮೆರಿಕದ ವಶದಲ್ಲಿರುವ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಬದಲಾಗಿ ವೆನೆಜುವೆಲಾದ ಉಪಾಧ್ಯಕ್ಷೆ ಮತ್ತು ತೈಲ ಸಚಿವೆ ಡೆಲ್ಸಿ ರೊಡ್ರಿಗಸ್ ಅಲ್ಲಿನ ಮಧ್ಯಂತರ ಸರ್ಕಾರದ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ವಿಶೇಷವೆಂದರೆ ಡೆಲ್ಸಿಗೂ ಭಾರತದ ನಂಟಿದೆ. ಮಡುರೋ ಅವರಂತೆಯೇ ಡೆಲ್ಸಿ ಕೂಡ ಪುಟ್ಟಪರ್ತಿ ಸತ್ಯ ಸಾಯಿ ಬಾಬಾ ಭಕ್ತೆ. ಅವರು ಆಗಾಗ ಭಾರತಕ್ಕೆ ಆಗಮಿಸುತ್ತಿರುತ್ತಾರೆ.
ವೆನೆಜುವೆಲಾದ ಮಧ್ಯಂತರ ಅಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕರಿಸಿದ ಡೆಲ್ಸಿ ರೊಡ್ರಿಗಸ್ ಆಂಧ್ರಪ್ರದೇಶದಲ್ಲಿರುವ ಸತ್ಯಸಾಯಿ ಬಾಬಾ ಅವರ ಪ್ರಶಾಂತಿ ನಿಲಯಂ ಆಶ್ರಮಕ್ಕೆ ಆಗಾಗ ಭೇಟಿ ನೀಡುವ ಮೂಲಕ ಭಾರತದ ಸಂಪರ್ಕ ಹೊಂದಿದ್ದಾರೆ. ಅವರು ಆಗಸ್ಟ್ 2023ರಲ್ಲಿ ಜಿ 20 ಶೃಂಗಸಭೆಯ ಸಮಯದಲ್ಲಿ ಮತ್ತು ಅಕ್ಟೋಬರ್ 2024ರಲ್ಲಿ ಸತ್ಯ ಸಾಯಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿದ್ದರು.
ಯುನೈಟೆಡ್ ಸ್ಟೇಟ್ಸ್ ಪಡೆಗಳು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಕ್ಕೆ ಪಡೆದು ನ್ಯೂಯಾರ್ಕ್‌ನಲ್ಲಿ ಕೋರ್ಟ್ ಮುಂದೆ ಹಾಜರುಪಡಿಸಿ ವಿಚಾರಣೆಯನ್ನು ನಡೆಸುತ್ತಿವೆ. ಇದರ ನಡುವೆ ಸೋಮವಾರ ಡೆಲ್ಸಿ ರೊಡ್ರಿಗಸ್ ವೆನೆಜುವೆಲಾದ ಮಧ್ಯಂತರ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವೆನೆಜುವೆಲಾದ ಸಂಸತ್ತಿನಿಂದ ಪ್ರಮಾಣವಚನ ಸ್ವೀಕರಿಸಿದ ಕೂಡಲೇ, ಡೆಲ್ಸಿ ರೊಡ್ರಿಗಸ್ ಅವರ ಹಲವಾರು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡವು. ಈ ಹಿಂದಿನ ಅಧ್ಯಕ್ಷ ಮಡುರೋ ಮತ್ತು ಅವರ ಪತ್ನಿಯಂತೆ ಡೆಲ್ಸಿ ಕೂಡ ಭಾರತೀಯ ಆಧ್ಯಾತ್ಮಿಕ ನಾಯಕ ಸತ್ಯಸಾಯಿ ಬಾಬಾ ಅವರ ಭಕ್ತೆ ಎಂಬುದು ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, ಡೆಲ್ಸಿ ರೊಡ್ರಿಗಸ್ ಇತ್ತೀಚಿನ ವರ್ಷಗಳಲ್ಲಿ 2023 ಮತ್ತು 2024ರಲ್ಲಿ 2 ಬಾರಿ ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿರುವ ಸತ್ಯ ಸಾಯಿ ಬಾಬಾ ಅವರ ಆಧ್ಯಾತ್ಮಿಕ ಕೇಂದ್ರ ಮತ್ತು ಸಮಾಧಿ ಮಂದಿರವಾದ ಪ್ರಶಾಂತಿ ನಿಲಯಂ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಪ್ರಶಾಂತಿ ನಿಲಯಕ್ಕೆ 2ನೇ ಬಾರ ಭೇಟಿ ನೀಡಿದ ಬಗ್ಗೆ ಡೆಲ್ಸಿ ರೊಡ್ರಿಗಸ್ ತೀವ್ರ ಸಂತೋಷ ವ್ಯಕ್ತಪಡಿಸಿದ್ದರು. ಸತ್ಯ ಸಾಯಿ ಬಾಬಾ ಅವರ ದೈವಿಕ ಸನ್ನಿಧಿಯಲ್ಲಿರುವುದು ತನಗೆ ಶಾಂತಿ ಮತ್ತು ನೆಮ್ಮದಿಯ ಭಾವನೆಯನ್ನು ನೀಡಿತು ಎಂದು ಹೇಳಿದ್ದರು ಎಂದು ಸತ್ಯ ಸಾಯಿಬಾಬಾ ಟ್ರಸ್ಟ್ ತಿಳಿಸಿದೆ.
ಸತ್ಯ ಸಾಯಿ ಬಾಬಾ, ಬ್ರಹ್ಮ ಕುಮಾರಿಯರು ಮತ್ತು ರಾಧಾ ಸ್ವಾಮಿ ಅವರ ಅನುಯಾಯಿಗಳು ಸೇರಿದಂತೆ ಭಾರತೀಯ ಗುರುಗಳು ಮತ್ತು ಸಂಸ್ಥೆಗಳು ವೆನೆಜುವೆಲಾದಲ್ಲಿ ಹಲವಾರು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದು ಎರಡೂ ದೇಶಗಳ ನಡುವಿನ ಶಾಶ್ವತ ಆಧ್ಯಾತ್ಮಿಕ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ.














