ಮನೆ ವ್ಯಕ್ತಿತ್ವ ವಿಕಸನ ಮಾತಿನಲ್ಲಿ ಬದ್ಧತೆ

ಮಾತಿನಲ್ಲಿ ಬದ್ಧತೆ

0

ನೀವು ಬಹಳ ಹಿಂದಿನ ಕಥೆಗಳನ್ನು ಕೇಳಿದ್ದೀರಿ ಅದರಲ್ಲಿ ಯಾವನೋ ವ್ಯಕ್ತಿ ಇನ್ನೊಬ್ಬನಿಗೆ ಹೊಂಗೆ ಮರವನ್ನು ಸಾಕ್ಷಿಯಾಗಿ ಇಟ್ಟುಕೊಂಡು ಹಣ ಕೊಟ್ಟ ಎನ್ನುವಂತಹ ಸಂಗತಿಗಳನ್ನು ಕೇಳಿರುತ್ತೀರಿ. ಈಗಲೂ ಕೂಡ ಮದುವೆ ಮಾಡಿಕೊಳ್ಳುವಾಗ ಅಗ್ನಿಸಾಕ್ಷಿಯಾಗಿ  ಮದುವೆ ಮಾಡಿಕೊಳ್ಳುವುದು ಎಂಬ ನಂಬಿಕೆಯು ಆಚರಣೆಯಲ್ಲಿದೆ.

ಹೊಂಗೆ ಮರವನ್ನು ಸಾಕ್ಷಿಯಾಗಿಟ್ಟುಕೊಂಡು ಕೊಟ್ಟ ಸಾಲವನ್ನು ಹಿಂದುರಿಸಿಕೊಡದೆ ಇದ್ದರೆ ಹೊಂಗೆ ಮರ ನ್ಯಾಯಾಲಯದಲ್ಲಿ ಬಂದು ಸಾಕ್ಷಿ ಹೇಳುತ್ತದಾ ? ಅಗ್ನಿಸಾಕ್ಷಿಯಾಗಿ ಮದುವೆಯಾದವರು, ಅಗ್ನಿ ಬಂದು ನ್ಯಾಯಾಲಯದಲ್ಲಿ ಸಾಕ್ಷಿ ಹೇಳುತ್ತದಾ ? ಯಾವ ಕಾಲದಲ್ಲಿಯೂ ಅದು ಸಾಧ್ಯವಿರಲಿಲ್ಲ. ಆದರೂ ಮರದ ಸಾಕ್ಷಿ, ಅಗ್ನಿಯ ಸಾಕ್ಷಿಗಳನ್ನು ಇರಿಸಿಕೊಂಡು ವ್ಯವಹಾರಗಳನ್ನು ನಡೆಸುತ್ತಿದ್ದರು. ಹೀಗೆ ಸಾಧ್ಯವಾಯಿತು? ಹೊಂಗೆ ಮರದ ಸಾಕ್ಷಿ, ಅಗ್ನಿಸಾಕ್ಷಿ ಅಂತಹ ಸಂದರ್ಭದಲ್ಲಿ ನಿಜವಾದ ನಂಬಿಕೆ ಇದ್ದುದ್ದು ಹೊಂಗೆ ಮರದ ಮೇಲೆಯೂ ಅಲ್ಲ, ಅಗ್ನಿ ಮೇಲೆಯೂ ಅಲ್ಲ, ತನ್ನ ಮಾತಿನ ಮೇಲೆ ಅವನಿ/ಳಿಗೆ ನಿಜವಾದ ನಂಬಿಕೆ ಇತ್ತು. ಆ ನಂಬಿಕೆಗೆ ಹೊಂಗೆ ಮರ ಅಥವಾ ಅಗ್ನಿ ಎನ್ನುವುದು ಕೇವಲ ಆಧಾರಗಳು ಅಷ್ಟೇ. ಅವು ಇಲ್ಲದೆ ಇದ್ದರೂ ನಡೆಯುತ್ತದೆ. ತಾನಾಡಿದ ಮಾತಿನ ಮೇಲೆ ಇದ್ದ ಬದ್ಧತೆ ಇದೆಯಲ್ಲ, ಅದು ಬಹಳ ಶ್ರೇಷ್ಠವಾದದ್ದು, ಅದರ ಆಧಾರದಲ್ಲಿಯೇ ವ್ಯವಹಾರಗಳು ನಡೆಯುತ್ತಿದ್ದವು.

ಭಾರತದಲ್ಲಿ ಬ್ರಿಟಿಷರ ಆಡಳಿತವು ಬಂದಮೇಲೆ ಕಾಗದಪತ್ರಗಳ ದಾಖಲೆಗೆ ಮಹತ್ವ ಬಂದಿತು. ಸಾಲ ಕೊಡಬೇಕಾದರೆ ಬಾಂಡ್ ಬರೆಯಿಸಿಕೊಳ್ಳುವುದು, ಲಿಖಿತ ಸಾಕ್ಷವನ್ನು ನೀಡುವುದು, ಹೆಬ್ಬೆರಳು ಗುರುತನ್ನು ನೀಡುವುದು ಎಲ್ಲ ಮುಖ್ಯವಾಯಿತು. ಆಡಳಿತ ದೃಷ್ಟಿಯಲ್ಲಿ ಇದೆಲ್ಲವೂ ಅಗತ್ಯವೇ. ಆದರೆ ಸಾಮಾಜಿಕ ಸಂಬಂಧಗಳು ಮತ್ತು ಸಾಮಾಜಿಕ ಸಂಬಂಧಗಳ ಆಧಾರದಲ್ಲಿ ನಡೆಯುವ ವ್ಯವಹಾರಗಳಿಗೆ ಕಾಗದ ಪತ್ರಗಳ ಅವಶ್ಯಕತೆ ಉಂಟಾಗಬಾರದು.

ಅಂತಹ ಅವಶ್ಯಕತೆಗಳು ನಮ್ಮ ಮೇಲೆ ನಾವು ನಂಬಿಕೆಯನ್ನು ಕಳೆದುಕೊಳ್ಳುವುದು ಸೂಚಿಸುತ್ತದೆ. ಇದನ್ನು ನಾವು ನಮ್ಮ ಸಣ್ಣಸಣ್ಣ ನಡವಳಿಕೆಗಳು ಗುರುತಿಸಬಹುದು. ಯಾರೋ ಒಬ್ಬ ತನ್ನ ಮನೆಯಲ್ಲಿ ನಡೆಯುವ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ನಿಮಗೆ ಕೊಡುತ್ತಾನೆ. ತಕ್ಷಣ “ಬರುತ್ತೇನೆ” ಎಂದು ಬಿಡುತ್ತೀರಿ. ಯಾವ ದಿವಸ ಸಮಾರಂಭ ನಡೆಯಲಿದೆ ? ಆ ದಿನ ಬಿಡುವು ಇದೆಯಾ ? ಹೋಗಲು ಸಾಧ್ಯಾನ ?- ಎಂದೆಲ್ಲಆಲೋಚಿಸಿ “ಬರುತ್ತೇನೆ” ಎಂದಿರುವುದಿಲ್ಲ. ಆಮೇಲೆ ಸಮಾರಂಭದಲ್ಲಿ ಹಾಜರಾಗಲು ಆಗದೆ ಇರುವುದರ ಬಗ್ಗೆ ಆಮಂತ್ರಿಸಿದವರಿಗೆ ಒಂದು ದೂರವಾಣಿ ಕರೆಯನ್ನು ಮಾಡಿ ತಿಳಿಸುವುದು ಇಲ್ಲ.

ಸಮಾರಂಭಕ್ಕೆ ಹೋಗುವುದು ಇಲ್ಲ. ಇದರಿಂದ ದೊಡ್ಡ ಪ್ರಮಾದವೇನು ಆಗುವುದಿಲ್ಲವೆಂದು ಎಲ್ಲರೂ ಅಂದುಕೊಂಡುಬಿಡುತ್ತಾರೆ. ಪ್ರಮಾದ ಆಗುವುದಿಲ್ಲ ಎನ್ನುವುದು ನಿಜ. ಆದರೆ ಆ ಮಟ್ಟಿಗೆ ನೀವು ಹೇಳಿದ್ದನ್ನು ಮಾಡುವ ಶಕ್ತಿ ನಿಮಗಿಲ್ಲವೆಂದು ಆಯಿತು ತಾನೇ. ಇದಕ್ಕೆ ಅವಕಾಶ ಕೊಡಬಾರದು. “ಮಾತಿಂಗೆ ಮಾತುಗಳು ಪೋತು ಸಾಸಿರ ಉಂಟು. ಮಾತನಾಡಿದಂತೆ ನಡೆದಾತ ಜಗವನ್ನು ಕೊತಲ್ಲೆ ಆಳ್ವಾ ಸರ್ವಜ್ಞ”

ಹಿಂದಿನ ಲೇಖನಹನೂರು ತಾಲ್ಲೂಕು ಕಚೇರಿ ರೆಕಾರ್ಡ್ ರೂಂ ಬೀಗ ಒಡೆದು ದಾಖಲೆಗಳನ್ನು ಕದ್ದೊಯ್ದ ಖದೀಮರು
ಮುಂದಿನ ಲೇಖನಅವೈಜ್ಞಾನಿಕ ಪರಿಷ್ಕಣೆ ವಿರೋಧಿಸಿ ವಿದ್ಯಾರ್ಥಿ, ಜನಾಂದೋಲನ ರೂಪಿಸುತ್ತಿದ್ದೇವೆ: ಕಾಗೇರಿ